ಬೇಡಿಕೆ ಈಡೇರಿಕೆ ಆಗ್ರಹಿಸಿ ಅಂಗನವಾಡಿ ಕಾರ್‍ಯಕರ್ತೆಯರ ಮುಷ್ಕರ

ಬೆಂಗಳೂರು, ಜ.೧೮-ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಇದನ್ನು ಶಾಲಾ ಹಂತದಲ್ಲೇ ಸ್ಥಗಿತಗೊಳಿಸದೆ ಅಂಗನವಾಡಿ ಹಂತಕ್ಕೂ ವಿಸ್ತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ನಿಲ್ಲಿಸಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
ನಗರದಲ್ಲಿಂದು ಫ್ರೀಡಂ ಪಾರ್ಕ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಸಂಘದ ನೇತೃತ್ವದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದು, ತಮಗೂ ಶಾಲಾ ಶಿಕ್ಷಕರ ಸ್ಥಾನಮಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮುಷ್ಕರದಲ್ಲಿ ಪ್ರತೀ ಜಿಲ್ಲೆ, ತಾಲೂಕಿನಿಂದಲೂ ಅರ್ಧದಷ್ಟು ಕಾರ್ಯಕರ್ತೆ ಯರು, ಸಹಾಯಕಿಯರು ಭಾಗವಹಿಸಿದ್ದಾರೆ. ಉಳಿದವರು ಊರಲ್ಲೇ ಇದ್ದರೂ ಯಾವುದೇ ಕಾರಣಕ್ಕೂ ಅಂಗನವಾಡಿ ಕೆಲಸ ಮಾಡುವುದಿಲ್ಲ. ಮುಷ್ಕರ ಮುಗಿಯುವವರೆಗೂ ಅಂಗನವಾಡಿಗಳು ಮುಚ್ಚಿರಲಿವೆ ಎಂದು ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗನವಾಡಿಗಳಿಗೂ ಅನ್ವಯ ಮಾಡಿ, ನಮಗೂ ಶಿಕ್ಷಕಿಯರ ಸ್ಥಾನಮಾನ ನೀಡಬೇಕು. ಅದಾದಲ್ಲಿ ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳು ನಮಗೂ ಸಿಗಲಿದೆ. ನಮ್ಮ ಜೀವನಕ್ಕೆ ಭದ್ರತೆ ಸಿಗಲಿದೆ ಎಂಬುದು ಬೇಡಿಕೆ ಎಂದು ಮುಷ್ಕರ ನಿರತ ಹೋರಾಟಗಾರರು ತಿಳಿಸಿದರು.
ನಿವೃತ್ತಿಯ ಹಂತದಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚುಟಿ ನೀಡಬೇಕೆಂದು ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಸರ್ಕಾರ ಇನ್ನೂ ಜಾರಿ ಮಾಡಿಲ್ಲ. ನಿವೃತ್ತಿ ಸಂದರ್ಭ ನಮಗೆ ಯಾವುದೇ ಸಹಾಯ ಸರಕಾರದಿಂದ ಸಿಗುವುದಿಲ್ಲ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಅಳಲು.
ಅದೇ ರೀತಿ, ನೌಕರರ ರಾಜ್ಯ ವಿಮೆ(ಇಎಸ್‌ಐ) ಮೂಲಕ ನಾನಾ ಇಲಾಖೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸಿಗುತ್ತಿದೆ. ಚಿಕಿತ್ಸೆ, ರಜೆ ಸೌಲಭ್ಯವೂ ಸಿಗುತ್ತಿದೆ. ಆದರೆ ಅಂಗನವಾಡಿಗಳಿಗೆ ಇದು ಅನ್ವಯವಾಗುತ್ತಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಇಎಸ್‌ಐ ಸೌಲಭ್ಯ ನೀಡಬೇಕೆಂಬ ಬೇಡಿಕೆಯನ್ನೂ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳೇನು?

  • ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಖಾಯಂ ಮಾಡಬೇಕು.
  • ರಾಷ್ಟ್ರೀಯ ಶಿಕ್ಷಣ ಯೋಜನೆಗೆ ರಾಜ್ಯದಲ್ಲಿ ಜಾರಿ
  • ಅಂಗನವಾಡಿ ಕಾರ್ಯಕರ್ತೆಯರಿಗೆ ೩೧ ಸಾವಿರ ವೇತನ ನೀಡಿ ಶಾಲಾ ಶಿಕ್ಷಕರ ಸ್ಥಾನಮಾನ ವಿದ್ಯಾರ್ಥಿ ಮಿನಿ ಅಂಗನವಾಡಿ ಕೇಂದ್ರಗಳಿಗೆ ತಕ್ಷಣ ಮೇಲ್ದರ್ಜೆಗೆ ಏರಿಸಬೇಕು.
  • ಪತ್ರದ ಆದೇಶದ ಪ್ರಕಾರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಹಣ ನೀಡಿ ಅವರಿಗೆ ಪೆನ್ಷನ್ ಜಾರಿ ಮಾಡಬೇಕು

ಬೆಂಗಳೂರು ಚಲೋ
ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಬೆಂಗಳೂರು ಚಲೋ ಕಾಲ್ನಾಡಿಗೆ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಕೆಆರ್ ವೃತ್ತ ಸೇರಿದಂತೆ ವಿವಿಧೆಡೆ ಸಂಚಾರ ದಟ್ಟಣೆ ದೃಶ್ಯ ಕಂಡಿತು.