ಬೇಡಿಕೆ ಈಡೇರಿಕೆಗೆ ಸವಿತಾ ಸಮಾಜ ಆಗ್ರಹ

ಕೋಲಾರ,ನ.೨೨- ಸ್ವಾತಂತ್ರ್ಯ ಬಂದ ನಂತರದ ದಿನಗಳಿಂದಲೂ ಸವಿತಾ ಸಮುದಾಯ ಪ್ರಜಾಪ್ರಭುತ್ವ ನಿಯಮದಂತೆ ಈ ನಾಗರೀಕ ಪ್ರಪಂಚದಲ್ಲಿ ಸಮನಾಗಿ ಬದುಕಬೇಕಾಗಿರುವ ಕಾರಣ ಮೀಸಲಾತಿ ಮತ್ತು ಜಾತಿನಿಂದನೆ ಕಾಯ್ದೆ ಹಾಗೂ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಆದೇಶ ಮಾಡಬೇಕೆಂದು ಒತ್ತಾಯಿಸಿ ಕೋಲಾರ ತಾಲೂಕು ಸವಿತಾ ಸಮಾಜದ ವತಿಯಿಂದ ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಾಗರೀಕ ಪ್ರಪಂಚ ಸ್ಥಾಪಿತವಾದ ದಿನದಿಂದಲೂ ನಮ್ಮ ಸವಿತಾ ಸಮುದಾಯದ ವೈದ್ಯ ವೃತ್ತಿ, ಕ್ಷೌರಿಕ ವೃತ್ತಿ ಮತ್ತು ಡೋಲು ನಾದಸ್ವರ ನುಡಿಸುವ ಈ ಮೂರು ವೃತ್ತಿಯನ್ನು ಬದುಕಿಗಾಗಿ ಮಾಡಿಕೊಂಡು ಬಂದಿದ್ದು, ಈ ಮೂರು ವೃತ್ತಿಯನ್ನುನಾವು ಸೇವಾಮನೊಭಾವದಿಂದ ಮಾಡಿಕೊಂಡು ಬಂದಿದ್ದು ೧೯೯೫ ರ ದಶಕದವರೆವಿಗೂ ಹಳ್ಳಿಗಳಲ್ಲಿ ಜನರು ಬೆಳೆಯುತ್ತಿದ್ದ ಅಹಾರ ಪದಾರ್ಥಗಳನ್ನು ತೆಗೆದುಕೊಂಡು ಜೀವನ ನೆಡೆಸುತ್ತಿರುತ್ತೇವೆ. ಹೀಗಾಗಿ ಸವಿತಾ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಜಾತಿಗಳಲ್ಲಿ ಮೊದಲ ಜಾತಿಯಾಗಿದೆ. ಬ್ರಿಟೀಷರ ದಬ್ಬಾಳಿಕೆಯಿಂದ ವೈದ್ಯ ವೃತ್ತಿಯನ್ನು ನಮ್ಮ ಜಾತಿಯಿಂದ ಕಸಿದುಕೊಂಡರು. ಆದರೂ ದೇಶದ ಹಲವಾರು ಭಾಗದಲ್ಲಿ ಇಂದಿಗೂ ನಾಟಿ ವೈದ್ಯ ಮಾಡುವವರನ್ನು ಕಾಣಬಹುದು.
ಸಂವಿಧಾನದಲ್ಲಿ ಮೀಸಲಾತಿ ನಿಯಮವನ್ನು ತಂದು ರಾಜ್ಯದಲ್ಲಿ ಆತಿಜನಸಂಖ್ಯೆ ಉಳ್ಳವರಿಗೆ ಅನುಕೂಲ ಮಾಡಿಕೂಡುವ ಉದ್ದೇಶದಿಂದ ಹಿಂದುಳಿದ ಪ್ರವರ್ಗ ರಚಿಸಿ, ಹೆಚ್ಚು ಜನಸಂಖ್ಯೆ ಜಾತಿಯ ಒಂದೊಂದು ಜಾತಿಯನ್ನು ಪ್ರವರ್ಗದಲ್ಲಿ ಸೇರಿಸಿ ಆತಿ ಹೆಚ್ಚು ಮೀಸಲಾತಿಯನ್ನು ಪಡೆಯುವಂತೆ ಮಾಡಿ ಕಡಿಮೆ ಜನಸಂಖ್ಯೆ ಇರುವಂತ ಜಾತಿಯನ್ನು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದ್ದು, ಮೀಸಲಾತಿ ಸಿಗದಿರುವ ವ್ಯವಸ್ಥೆ ಜಾರಿಯಲ್ಲಿದೆ. ಹಾಗಾಗಿ ದಲಿತರನ್ನು ಹೋಲುವಂತ ಸವಿತಾ ಸಮುದಾಯಕ್ಕೆ ಮೀಸಲಾತಿ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಹಾಗಾಗಿ ನಮ್ಮಸಮುದಾಯವು ಈ ನಾಗರೀಕ ಪ್ರಪಂಚದಲ್ಲಿ ನಾವು ಬದುಕಬೇಕಾದರೆ ಪ್ರಜಾಪ್ರಭುತ್ವ ನಿಯಮದಂತೆ ನಮಗೆ ಸಮಪಾಲು ಸಿಗಬೇಕಾದ ಕಾರಣ ಸುಮುದಾಯದ ಹನ್ನೊಂದು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ನಿಯೋಗದಲ್ಲಿ ಸವಿತಾ ಸಮಾಜದ ಜಿಲ್ಲಾ ಮುಖಂಡ ಎಸ್.ಮಂಜುನಾಥ್, ತಾಲೂಕು ಅಧ್ಯಕ್ಷ ದೀಪು ಪ್ರದೀಪ್, ಅ.ಸ.ಸಂಘದ ಸರ್ವೋದಯ, ಸುಗಟೂರು ಚಂದ್ರಪ್ಪ, ಶ್ರೀನಿವಾಸ್, ಹಸಾಳ ವೆಂಕಟೇಶಪ್ಪ, ರಾಮಕೃಷ್ಣಪ್ಪ, ರಾಜ್ ಬ್ರದರ್‍ಸ್ ಮಂಜುನಾಥ್, ಶಿವು, ಹೊಳಲಿ ಮಂಜುನಾಥ್, ಚೋಳಘಟ್ಟ ಮಂಜುನಾಥ್, ಸೌಂದರ್ಯ ಮಂಜುನಾಥ್, ಸುಬ್ರಮಣಿ, ಚಲಪತಿ ಜೆ, ಶಿವಕುಮಾರ್, ಶಂಕರಪ್ಪ ಉಪಸ್ಥಿತರಿದ್ದರು.