ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗೊಂದಳಿ ಸಮಾಜದಿಂದ ಪ್ರತಿಭಟನೆ: ಗಣಾಚಾರಿ

ಹುಬ್ಬಳ್ಳಿ,ಜು17 : ಗೊಂದಳಿ ಸಮಾಜವನ್ನು ಎಸ್.ಸಿ, ಎಸ್.ಟಿ ಗೆ ಸೇರಿಸುವಂತೆ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಗೊಂದಳಿ ಸಮಾಜದ ರಾಜ್ಯ ಅಧ್ಯಕ್ಷರಾದ ವಿಠ್ಠಲ ಬಿ. ಗಣಾಚಾರಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಗೊಂದಳಿ ಸಮಾಜವು ಪ್ರವರ್ಗ ಒಂದರಲ್ಲಿ ಇದ್ದು, ಸರ್ಕಾರದ ಯೋಜನೆಗಳಿಂದ ನಮ್ಮ ಸಮಾಜಕ್ಕೆ ಸರಿಯಾದ ಸೌಲಭ್ಯ ದೊರೆಯುತ್ತಿಲ್ಲ. ಅಲೆಮಾರಿ ಸಮಾಜದವರಾದ ನಾವು ಗೊಂದಳ ಹಾಕಿ ಬಿಕ್ಷೆ ಬೇಡುವಂತಹ ಸಮಾಜ ನಮ್ಮದು. ಶೈಕ್ಷಣಿಕ, ಸಾಮಾಜಿಕ ಅಥವಾ ಯಾವುದೇ ಕ್ಷೇತ್ರದಲ್ಲಿಯೂ ನಾವು ಗುರುತಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂದು ನಡೆಯುವ ಪ್ರತಿಭಟನೆಯಲ್ಲಿ ವೇಷ ಭೂಷಣ ಹಾಕಿ ಸರ್ಕಾರದ ಗಮನ ಸೆಳೆಯುವ ಮೂಲಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಆನಂದ ಸಿಂಗನಾಥ, ಎಂ.ಬಿ.ಶಾಸ್ತ್ರಿ, ನಾಗಭೂಷಣ, ಉಮೇಶ, ಮಂಜು ಪಾಟೀಲ್, ಸುರೇಶ, ರಾಘವೇಂದ್ರ ಜೋಶಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.