ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ


ಹುಬ್ಬಳ್ಳಿ, ಜೂ 26: ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ಬಸ್‍ಪಾಸ್ ವಿತರಣೆ ಮಾಡಬೇಕು. ಅವಶ್ಯಕವಿರುವ ವಿದ್ಯಾರ್ಥಿಗಳ ಬಸ್‍ಪಾಸ್ ಅವಧಿ ವಿಸ್ತರಿಸಬೇಕು ಹಾಗೂ ಬಸ್‍ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವಂತೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪಡೆಯಲು ನಗರ ಪ್ರದೇಶಗಳ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾದ ನಂತರ ಸರಿಯಾದ ಸಮಯಕ್ಕೆ ಬಸ್‍ಪಾಸ್ ಅನ್ನು ವಿತರಣೆ ಮಾಡದೇ ಇರುವ ಕಾರಣ ಪ್ರತಿದಿನ ನೂರಾರು ರೂಪಾಯಿಗಳನ್ನು ಹಣ ಖರ್ಚು ಮಾಡಿಕೊಂಡು ಬಡ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುವುದು ಕಷ್ಟದ ಸಂಗತಿ ಆಗಿದೆ. ಸರ್ಕಾರ ಶಾಲಾ ಕಾಲೇಜುಗಳು ಪ್ರಾರಂಭವಾದ ತಕ್ಷಣವೇ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ಅನ್ನು ಸಕಾಲದಲ್ಲಿ ಒದಗಿಸುವ ಅವಶ್ಯಕತೆ ಇದೆ. ಅರ್ಜಿ ಸಲ್ಲಿಸಿದ ನಂತರ ವಾರಗಳ ಕಾಲ ವಿದ್ಯಾರ್ಥಿಗಳು ಬಸ್‍ಪಾಸ್ ಅನ್ನು ಪಡೆಯಲು ಕಾಯುವ ಸ್ಥಿತಿ ಇದೆ. ಇದರಿಂದ ಬಸ್ ಪಾಸ್ ಸಿಗುವವರೆಗೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ಅನ್ನು ವಿತರಿಸುವಂತೆ ಆಗ್ರಹಿಸಿದರು.
ಬಸ್‍ಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಬಸ್‍ಗಳಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಬಸ್‍ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಯಾವ ಹಳ್ಳಿಗಳಿಗೆ ಬಸ್‍ಗಳ ಕೊರತೆ ಇದೆ ಆ ಹಳ್ಳಿಗಳಿಗೆ ಸಮರ್ಪಕವಾದ ಬಸ್‍ಗಳ ವ್ಯವಸ್ಥೆಯನ್ನು ಶಾಲಾ-ಕಾಲೇಜುಗಳ ಸಮಯಕ್ಕೆ ಒದಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರ್ಕಾರಕ್ಕೆ ಆಗ್ರಹಿಸಿತು.