ಬೇಡಿಕೆ ಈಡೇರಿಕೆಗಾಗಿ ರಸ್ತೆ ಸಂಚಾರ ತಡೆ

ದೇವದುರ್ಗ.ನ.11- ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನ.18ರಂದು ಜಾಲಹಳ್ಳಿ ರಸ್ತೆ ಸಂಚಾರ ತಡೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ನರಸಣ್ಣ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರಿನಿಂದ ತಾಲೂಕಿನ ರೈತರು ಸಾವಿರಾರು ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುತ್ತಾರೆ. ಆದರೆ, ಅವರಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಹಲವು ಸಲ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ.
ಇದರಿಂದ ರೈತರು ಖಾಸಗಿ ದಲ್ಲಾಳಿಗಳಿಗೆ ಭತ್ತ ಮಾರಾಟ ಮಾಡುತ್ತಿದ್ದಾರೆ. ಭತ್ತ ಖರೀದಿ ಮಾಡಿದ ದಲ್ಲಾಳಿಗಳು ಹಾಗೂ ವ್ಯಾಪಾರಿಗಳು ಹಣ ನೀಡದೆ ರೈತರಿಗೆ ವಂಚಿಸಿವೆ. ಬೆಳೆ ವಿಮೆ ತುಂಬಿದ ರೈತರಿಗೆ ವಿಮಾ ಕಂಪನಿಗಳು ಪರಿಹಾರ ನೀಡದೆ ವಂಚಿಸುತ್ತಿವೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ಇದ್ದರೂ ಕ್ರಮ ಜರುಗಿಸದೇ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಎಲ್ಲ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನ.೧೮ರಂದು ಜಾಲಹಳ್ಳಿಯಲ್ಲಿ ರಾಯಚೂರು-ತಿಂಥಿಣಿ ರಾಜ್ಯ ಹೆದ್ದಾರಿ ಸಂಚಾರ ತಡೆ ನಡೆಸಲಾಗುವುದು. ಕೂಡಲೇ ಎಲ್ಲ ಹೋಬಳಿಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಿ, ಸೂಕ್ತ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿ ಮಾಡಬೇಕು. ನೆರೆಹಾವಳಿ ಹಾಗೂ ಅತಿಯಾದ ಮಳೆಯಿಂದ ಬೆಳೆನಷ್ಟ ಅನುಭವಿಸಿದ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು. ರೈತರಿಗೆ ವಂಚಿಸಿದ ವಿಮಾ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ರೈತರಿಗೆ ಸೂಕ್ತ ಬೆಲೆ ವಿಮೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.