ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿಗೆ ಪಾದಯಾತ್ರೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಅ.17: ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಪ್ರಜಾಪ್ರಭುತ್ವ ಸಾಮಾನ್ಯ ನಾಗರಿಕರ ಮತದಾರರ ಹೋರಾಟ ಸಮಿತಿವತಿಯಿಂದ ನಗರದ ವಿಕಲಚೇತನರು, ನಗರದ ಪುನೀತ್ ರಾಜಕುಮಾರ್ ವೃತ್ತದಿಂದ ಬೆಂಗಳೂರು ಪ್ರೀಡಂ ಪಾರ್ಕ್‍ವರೆಗೆ ಪಾದಯಾತ್ರೆ ಸೋಮವಾರ ಆರಂಭಿಸಿದರು.
ಸಮಿತಿ ಅಧ್ಯಕ್ಷ ಎಂ. ಶರೀಫ್ ಹಾಗೂ ಕಾರ್ಯದರ್ಶಿ ಸಂತೋಷ್ ಅವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿದ ವಿಕಲಚೇತನರು, ಅಂಗನವಾಡಿ ಶಿಕ್ಷಕರು, ಕಾರ್ಯಕರ್ತೆರನ್ನು ಸರ್ಕಾರಿ ನೌಕರರಾಗಿ ನೇಮಕ ಮಾಡಿಕೊಳ್ಳಬೇಕು. ಅಂಗನವಾಡಿ ಶಿಕ್ಷಕರು ಹಾಗೂ ಕಾರ್ಯಕರ್ತೆರು ವಿಕಲಚೇತನರ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಅವರನ್ನು ಸರ್ಕಾರಿ ಖಾಯಂ ನೌಕರರನ್ನಾಗಿ ಪರಿಗಣಿಸಬೇಕು. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಹಾಗೂ ನಗರಸಭೆಗಳಲ್ಲಿ ಕೆಲಸ ಮಾಡುತ್ತಿರುವ ವಿಆರ್‍ಡಬ್ಲ್ಯೂ, ವೈಆರ್‍ಡಬ್ಲ್ಯೂ ಹಾಗೂ ಎಂಆರ್‍ಡಬ್ಲ್ಯೂ ಅವರನ್ನು ಪೂರ್ಣ ಪ್ರಮಾಣದ ಸರ್ಕಾರಿ ನೌಕರರಾಗಿ ಘೋಷಿಸಬೇಕು. ಹೋಮ್ ಗಾರ್ಡ್‍ಗಳನ್ನು ಸರ್ಕಾರಿ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಸರಕಾರಿ ಕಚೇರಿಗಳಲ್ಲಿ ಒಳಗುತ್ತಿಗೆದಾರದ ಮೇಲೆ ದುಡಿಯುತ್ತಿರುವ ನೌಕರರನ್ನು ಖಾಯಂ ಮಾಡಿಕೊಳ್ಳಬೇಕು. ಕೆಎಸ್‍ಆರ್‍ಟಿಸಿ ಸಂಸ್ಥೆಯನ್ನು ಸರ್ಕಾರಿ ಸಂಸ್ಥೆಯಾಗಿ ಘೋಷಿಸಬೇಕು. ವಿದ್ಯಾವಂತ ವಿಕಲಚೇತನರಿಗೆ ಸರ್ಕಾರಿ ಕಚೇರಿ ಹಾಗೂ ಅಥವಾ ಖಾಸಗಿ ಕಂಪನಿಗಳಲ್ಲಿ ಆರ್ಹತೆ ಅನುಗುಣವಾಗಿ ನೇಮಕ ಮಾಡಿಕೊಳ್ಳಬೇಕು. ಎಸಿ, ಎಸ್‍ಟಿ, ಓಬಿಸಿ ಹಾಗೂ ಸಾಮಾನ್ಯ ವರ್ಗಕ್ಕೆ ನೀಡಿರುವ ಮೀಸಲಾತಿಯಂತೆ ವಿಕಲಚೇತನರಿಗೂ ನೀಡುವ ಮೂಲಕ ರಾಜಕೀಯ ಅವಕಾಶಕ್ಕಾಗಿ ಮೀಸಲಾತಿ ವ್ಯವಸ್ಥೆ ಒಸಗಿಸಬೇಕು. ದೃಷ್ಠಿದೋಷವುಳ್ಳ ಮಕ್ಕಳನ್ನು ಪಾಲಕರು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅವರ ಭವಿಷ್ಯಕ್ಕಾಗಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ, ಪಾದಯಾತ್ರೆ ಆರಂಭಿಸಿದರು.
ಸಮಿತಿ ಅಧ್ಯಕ್ಷ ಎಂ.ಶರೀಫ್, ಟಿ.ಸಿ.ಶಾಂತಾ, ನೇತ್ರಾವತಿ ಆಚಾರಿ, ನೇತ್ರಾವತಿ ಜಿ.ಎಚ್., ಗಂಗಾಮ್ಮ ಕಬ್ಬೇರ, ನೇತ್ರಾ ಕಬ್ಬೇರ, ಶ್ರೀಕಾಂತ, ಕಾರ್ಯದರ್ಶಿ ಸಂತೋಷ್ ಕುಮಾರ್, ಉಮಾ ಶಂಕರ್, ಲೋಕೇಶ, ಕೌಶಲ್ಯ ಮತ್ತು ಭಾರತಿ ಬರಮಪ್ಪ ಸೇರಿದಂತೆ ಅಂಗವಿಕಲರು, ವಿವಿಧ ಸಂಘ, ಸಂಸ್ಥೆಗಳ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

One attachment • Scanned by Gmail