ಬೇಡಿಕೆ ಈಡೇರದಿದ್ದರೆ ಮತದಾನ ಬಹಿಷ್ಕಾರ


ಬ್ಯಾಡಗಿ,ಏ.15: ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದ 17 ಮತ್ತು 18ನೇ ವಾರ್ಡಿನ ನಿರ್ಗತಿಕರಿಗೆ ನಿವೇಶನ ಹಕ್ಕುಪತ್ರ ಹಂಚಿಕೆಯ ವಿಳಂಬ ನೀತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದು, ತಮ್ಮ ಬೇಡಿಕೆಗಳು ಈಡೇರದೇ ಇದ್ದಲ್ಲಿ ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದೆಂದು ನಿರಾಶ್ರಿತ ಮಹಿಳೆಯರು ಹಾಗೂ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ನಿವಾಸಿ ಫರೀದಾಬಾನು ನದ್ದಿಮುಲ್ಲಾ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ನಿವೇಶನವನ್ನು ಕಲ್ಪಿಸಿ ಕೊಡುವಂತೆ, ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ಕೊಟ್ಟಿದ್ದೇವೆ. ಅದಕ್ಕಾಗಿ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ಮಾಡುವ ಮೂಲಕ ಇಲ್ಲಿನ ನಿರ್ಗತಿಕರ ದೂರುಗಳನ್ನು ರಾಜಧಾನಿಯವರೆಗೆ ತಲುಪಿಸಿದ್ದೇವೆ. ಆದರೂ ಸಹ ಯಾರೊಬ್ಬರೂ ಕೂಡ ನಮ್ಮ ಕಡೆ ತಿರುಗಿ ನೋಡುತ್ತಿಲ್ಲ ಎಂದು ಆರೋಪಿಸಿದರು.
ಮತದಾನ ಬಹಿಷ್ಕಾರ:
ಸುಮಾರು ವರ್ಷಗಳಿಂದ ಇಲ್ಲಿನ ನಿರ್ಗತಿಕರು ಸೂರುಗಳಿಲ್ಲದೇ, ಬಯಲು ಜಾಗೆಯಲ್ಲಿ ಗುಡಿಸಲನ್ನು ಹಾಕಿಕೊಂಡು ಮಳೆ ಬಿಸಿಲು ಎನ್ನದೇ ಸಣ್ಣ ಮಕ್ಕಳನ್ನಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ನಮ್ಮ ಗೋಳನ್ನು ನೋಡಿದರೂ ಕೂಡ, ಹಕ್ಕುಪತ್ರ ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸಿದ್ದಾರೆ. ಅಧಿಕಾರಿಗಳು ಕೂಡಲೇ ನಿರ್ಗತಿಕರಿಗೆ ಸೂರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಇಲ್ಲವಾದಲ್ಲಿ ಮೇ 10ರಂದು ಮತದಾನವನ್ನು ಬಹಿಷ್ಕಾರ ಮಾಡುವುದು ಖಚಿತವೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗುಡ್ಡಪ್ಪ ಆಡಿನವರ, ರವಿ ಬಂಡಿವಡ್ಡರ, ಸತೀಶ ಜಾದವ, ಮಾದೇವಪ್ಪ ಕುಂಬಾರ, ಸವಿತಾ ಕೆಂಗೊಂಡ, ಜರಿನಾ ಕಲ್ಮನಿ, ಸುಧಾ ಬೇವಿನಮರದ, ಚೌಡವ್ವ ಚಿನ್ನಮ್ಮನವರ, ಅಂಬಕ್ಕ ಬೋವಿ, ಲಕ್ಷ್ಮವ್ವ ಒಳಗುಂದಿ, ರತ್ನಮ್ಮ ಹುರಕಡ್ಲಿ, ಗುಡ್ಡಪ್ಪ ಗಂಗಮ್ಮನವರ, ಪ್ರೇಮವ್ವ ದೊಡ್ಮನಿ, ಗಿರಿಜವ್ವ ಗುಮ್ಮನಹಳ್ಳಿ, ಹುಸೇನಬಿ ಪೈಲವಾನರ್, ಹನುಮವ್ವ ದುರಮುರಗಿ, ಜ್ಯೋತಿ ದುರಮುರಗಿ, ಪರ್ವೀನಬಾನು ಗದಗ, ಹನಮಕ್ಕ ಬರಿಗಾರ, ಭೀಮಣ್ಣ ಬರಿಗಾರ, ಬಿಬಿಜಾನ ಜಾತಿಗಾರ, ಪುಷ್ಪಾ ಜಕ್ಕಣ್ಣನವರ, ಮಾರೆಪ್ಪ ದುರಮುರಗಿ, ರತ್ನವ್ವ ಅಗಡಿ, ಅಗಸೂರಪ್ಪ ದುರಮರಗಿ, ಮಾಲಕ್ಕ ಬಂಡಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.