ಬೇಡಿಕೆ ಇಡೇರಿಕೆಗಾಗಿ ತಲೆ ಮೇಲೆ ಕಲ್ಲುಹೊತ್ತು ಪ್ರತಿಭಟನೆ

ತಾಳಿಕೋಟೆ:ಆ.6:ಹಡಗಿನಾಳ ಗ್ರಾಮದ ಕಡೆಗೆ ತೆರಳುವ ಡೋಣಿ ನಧಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ್ಮಟ್ಟದ ಸೇತುವೆಗೆ ಬಸ್ ನಿಲ್ದಾಣದ ವರೆಗೆ ನೇರ ರಸ್ತೆ ಕಲ್ಪಿಸಲು ಹಾಗೂ ಎರಡೂ ಬದಿಗೆ ಸರ್ವಿಸ್ ರಸ್ತೆಯನ್ನು ಮಾಡುವ ಸಲುವಾಗಿ ತಾಳಿಕೋಟೆ ಅಭಿವೃದ್ದಿ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರರಂದು ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿ ವಿಜಯಪೂರಕ್ಕೆ ಪಾದಯಾತ್ರೆ ಆರಂಬಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನೆಯು ಕತ್ರಿ ಬಜಾರ, ವಿಠ್ಠಲಮಂದಿರ ರಸ್ತೆ, ಶಿವಾಜಿ ಸರ್ಕಲ್, ಮಹಾರಾಣಾಪ್ರತಾಪ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಮೂಲಕ ಬಸವೇಶ್ವರ ಸರ್ಕಲ್‍ಗೆ ಆಗಮಿಸಿ ಅಲ್ಲಿಂದ ವಿಜಯಪೂರ ಮಾರ್ಗದ ಕಡೆಗೆ ಪಾದಯಾತ್ರೆ ಆರಂಬಿಸಿದರು.
ಈ ಸಮಯದಲ್ಲಿ ಮಾತನಾಡಿದ ಪಟ್ಟಣಶೆಟ್ಟಿ ಅವರು ಹಡಗಿನಾಳ, ಮೂಕೀಹಾಳ, ಕಲ್ಲದೇವನಹಳ್ಳಿ, ಹರನಾಳ, ನಾಗೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಡೋಣಿ ಸೇತುವೆಗೆ ನೇರ ರಸ್ತೆ ನಿರ್ಮಿಸಲು ಮತ್ತು ಪುರಸಭೆಯಲ್ಲಿ ನಡೆದ ಅವ್ಯವಹಾರಗಳ ತನಿಖೆಗಾಗಿ ಈ ಹಿಂದೆ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲಾಗಿತ್ತು ಆ ಸಮಯದಲ್ಲಿ ಅಧಿಕಾರಿಗಳು ಸೂಕ್ತ ಕ್ರಮದ ಲಿಖಿತ ಭರವಸೆ ನೀಡಿ 5 ತಿಂಗಳು ಘತಿಸಲು ಬಂದಿದೆ ಆದರೆ ಯಾವುದೇ ರೀತಿಯ ಕ್ರಮಗಳನ್ನು ಜರುಗಿಸಿಲ್ಲಾ ಹೀಗಾಗಿ ತಾಳಿಕೋಟೆಯಿಂದ ವಿಜಯಪೂರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೆ ಪಾದಯಾತ್ರೆಯ ಮೂಲಕ ತೆರಳಿ ಅಲ್ಲಿ ಮನವಿಯನ್ನು ಸಲ್ಲಿಸಿ ತಲೆಯ ಮೇಲೆ ಕಲ್ಲುಹೊತ್ತು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಹೋರಾಟ ಸಮಿತಿಯ ಮುಖಂಡ ಶಿವರಾಜ ಗುಂಡಕನಾಳ ಅವರು ಮಾತನಾಡಿ ತಾಳಿಕೋಟೆ ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಸರ್ಕಾರದ ಆಸ್ತಿಗಳನ್ನು ಪರಭಾರೆ ಮಾಡುವದು ಮುಂದುವರೆದಿದೆ ಉದ್ಯಾನವನದ ಜಾಗೆಗಳಲ್ಲಿ ಮನೆಗಳು ತಲೆ ಎತ್ತಿ ನಿಲ್ಲುತ್ತಿವೆ ಸರ್ಕಾರದ ಆಸ್ತಿ ಕಾಯಬೇಕಾದ ಅಧಿಕಾರಿಗಳು ಹಗಲು ದರೋಡೆಗೆ ಇಳಿದಿದ್ದಾರೆಂದ ಅವರು ಜಿ+1 ಮಾದರಿ(ಆಶ್ರಯ) 600 ಮನೆಗಳ ಹಂಚಿಕೆಗೆ ಸಂಬಂದಿಸಿ ಮನೆ ಇಲ್ಲದ ಬಡವರು ಬಡ್ಡಿ ರೂಪದಲ್ಲಿ ಸಾಲ ಸೂಲ ಮಾಡಿ ಪುರಸಭೆಗೆ ಕೋಟ್ಯಾಂಟರ ರೂ. ಭರಣಾ ಮಾಡಿ 5 ವರ್ಷಗಳು ಘತಿಸುತ್ತಾ ಬಂದಿದ್ದು ಇತ್ತಕಡೆ ಮನೆಯೂ ಇಲ್ಲದೇ ಮತ್ತು ಹಣವನ್ನು ಕಳೆದುಕೊಂಡು ಮಾಡಿದ ಸಾಲದ ಬಡ್ಡಿಕಟ್ಟಲಾಗದೇ ಪರಿತಪಿಸುತ್ತಿದ್ದಾರೆ ಬಡವರ ಕಣ್ಣೀರು ಒರೆಸಬೇಕಾದ ಸರ್ಕಾರದ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸುತ್ತಿರುವದು ಖಂಡನೀಯವಾಗಿದೆ ಎಂದರು.
ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ ಮಾತನಾಡಿ ಜನರ ಹಿತವನ್ನು ಕಾಪಾಡಬೇಕಾದ ಅಧಿಕಾರಿಗಳು ಅಸಹಾಯಕತೆಗೆ ಒಳಗಾಗಿರುವದು ಎದ್ದು ಕಾಣುತ್ತಿದೆ ಕಳೆದ 1 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಕೂಡಾ ಹೋರಾಟಗಾರರಿಗೆ ಸ್ಪಂದನೆ ಸಿಗುತ್ತಿಲ್ಲಾ ಈ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಚೆಡ್ಡಿ ಗ್ಯಾಂಗ್ ಒಂದು ಕೆಲಸ ಮಾಡುತ್ತಿದೆ ಅಧಿಕಾರಿಗಳು ಇಂತಹ ಗ್ಯಾಂಗ್‍ಗೆ ಬೆಲೆ ನೀಡದೇ ಸಾರ್ವಜನಿಕರ ಸೇವೆಗೆ ಮುಂದಾಗಬೇಕೆಂದರು.
ಇನ್ನೋರ್ವ ನಿವೃತ್ತ ಪ್ರಾಚಾರ್ಯ ಎ.ಟಿ.ಪಾಟೀಲ ಅವರು ಮಾತನಾಡಿ ಕೆಲವರು ತಾಳಿಕೋಟೆಯನ್ನು ಸಿಂಗಾಪೂರ ಮಾಡುತ್ತೇನೆಂದು ಬೊಗಳೆ ಹೇಳಿಕೆ ನೀಡುತ್ತಿದ್ದಾರೆ ನಮಗೆ ಸಿಂಗಾಪೂರ ಆಗೋದ ಬೇಕಾಗಿಲ್ಲಾ ಜನರ ಸಮಸ್ಯೆಗಳಿಗೆ ನ್ಯಾಯ ಸಿಗಬೇಕು ನಿರ್ಮಿಸಿರುವ ಸೇತುವೆಗೆ ನೇರ ರಸ್ತೆ ನಿರ್ಮಿಸಬೇಕು ಸರ್ಕಾರದ ಆಸ್ತಿ ಲೂಟಿ ಹೊಡೆದವರಿಗೆ ತಕ್ಕ ಶಾಸ್ತಿ ಆಗಬೇಕೆಂದು ಒತ್ತಾಯಿಸಿದರು.
ಪಾದಯಾತ್ರೆಯ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಒಳಗೊಂಡು ಅನೇಕ ಸಂಘಟಿಕರು, ವ್ಯಾಪಾರಸ್ತರು, ಮುಖಂಡರುಗಳು ಒಳಗೊಂಡು ನೂರಾರು ಜನರು ಪಾಲ್ಗೊಂಡು ಹೆಜ್ಜೆಹಾಕಿ ಪಾದಯಾತ್ರೆಗೆ ಬೆಂಬಲ ಸೂಚಿಸಿದರು.
ಪ್ರತಿಭಟನಾ ಸಮಯದಲ್ಲಿ ಪುರಸಭಾ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಪುರಸಭಾ ಸದಸ್ಯರಾದ ಪರಶುರಾಮ ತಂಗಡಗಿ, ಕರವೇ ಸಂಘಟನೆಯ ಜೈಭೀಮ ಮುತ್ತಗಿ, ನೀತಿನ ಗೌಡಗೇರಿ, ಕಾರ್ತಿಕ ಕಟ್ಟಿಮನಿ, ಸಿದ್ದನಗೌಡ ಪಾಟೀಲ, ಸಂಗನಗೌಡ ಅಸ್ಕಿ, ಕಾಶಿನಾಥ ಕುಂಭಾರ, ಫಯಾಜ ಉತ್ನಾಳ, ಸುರೇಶಕುಮಾರ ಹಜೇರಿ, ನದೀಂ ಕಡು, ಪತ್ತೇಅಹ್ಮದ ನಾಯ್ಕೋಡಿ, ಸುರೇಶ ಹಜೇರಿ, ರವಿ ಕಟ್ಟಿಮನಿ, ನಿಂಗನಗೌಡ ದೇಸಾಯಿ, ರಮೇಶ ಮೋಹಿತೆ, ಕರವೇ ಸಂಘಟನೆಯ ಅಬುಬಕರ ಲಾಹೋರಿ, ನಬಿರಸೂಲ ಲಾಹೋರಿ, ಶರಣು ಅಗಸರ, ಮೊದಲಾದವರು ಇದ್ದರು.
ನಾನು ಕೈಗೊಂಡಿರುವ ಈ ಹೋರಾಟ ಯಾವ ವ್ಯಕ್ತಿಯ ವಿರೂದ್ದವೂ ಅಲ್ಲಾ ಮತ್ತು ಯಾವುದೇ ವ್ಯಕ್ತಿಯನ್ನು ತೇಜೋವಧೆ ಮಾಡುವ ಉದ್ದೇಶ ಹೊಂದಿಲ್ಲಾ ಕೇವಲ ಪಟ್ಟಣದ ಅಭಿವೃದ್ದಿಗೋಸ್ಕರ್ ಕೈಗೊಂಡ ಹೋರಾಟ ಇದಾಗಿದೆ. ನಮ್ಮ ಹೋರಾಟ ಹತ್ತಿಕ್ಕುವ ಸಲುವಾಗಿ ಅಧಿಕಾರಿಗಳ ಕೈಕಟ್ಟುವಂತಹ ಕೆಲಸ ಕಾಣದ ಕೈಗಳು ಮಾಡುತ್ತಿವೆ ಜನರ ಕೆಲಸ ಮಾಡಬೇಕಾದ ಸರ್ಕಾರದ ಅಧಿಕಾರಿಗಳು ಸೌಕಾರದ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

                               ಪುರಸಭಾ ಸದಸ್ಯರು ತಾಳಿಕೋಟೆ