ಬೇಡಿಕೆಯಂತೆ ರಸಗೊಬ್ಬರ, ಬೀಜ ದಾಸ್ತಾನು ಲಭ್ಯ:ರೈತರು ಆತಂಕ ಪಡಬೇಕಿಲ್ಲ:ಯಶವಂತ ವಿ. ಗುರುಕರ್

ಕಲಬುರಗಿ,ಜೂ.1: ಪ್ರಸಕ್ತ 2023-24ನೇ ಸಾಲಿನ ಮುಂಗಾರು ಹಂಗಾಮು ಕೃಷಿ ಚಟುವಟಿಕೆಗೆ ಬೇಡಿಕೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಬೀಜ ಮತ್ತು ರಸಗೊಬ್ಬರ ದಾಸ್ತಾನು ಲಭ್ಯವಿದ್ದು ರೈತಾಪಿ ವರ್ಗವು ಯಾವುದೇ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ 1,00,682 ಹೆಕ್ಟೇರ್ ನೀರಾವರಿ ಮತ್ತು 7,86,332 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಸೇರಿದಂತೆ ಒಟ್ಟು 8,87,014 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಮುಖವಾಗಿ ತೊಗರಿ, ಹೆಸರು, ಸೋಯಾಬೀನ್ ಸೇರಿದಂತೆ ಒಟ್ಟು 11 ಕೃಷಿ ಉತ್ಪನ್ನಗಳ 26,671 ಕ್ವಿಂಟಾಲ್ ಬೀಜಗಳು ಮತ್ತು 58,131 ಮೆಟ್ರಿಕ್ ಟನ್ ರಸಗೊಬ್ಬರ ಪ್ರಸ್ತುತ ಲಭ್ಯವಿದೆ ಎಂದರು.
ಸೋಯಾಬಿನ್-18,516 ಕ್ವಿಂಟಾಲ್, ತೊಗರಿ-6,334 ಕ್ವಿಂಟಾಲ್, ಹೆಸರು-1,000 ಕ್ವಿಂಟಾಲ್, ಉದ್ದು-500 ಕ್ವಿಂಟಾಲ್, ಸೂರ್ಯಕಾಂತಿ-120 ಕ್ವಿಂಟಾಲ್, ಮೆಕ್ಕೆಜೋಳ-100 ಕ್ವಿಂಟಾಲ್, ಭತ್ತ-90 ಕ್ವಿಂಟಾಲ್ ಸೇರಿದಂತೆ 26,671 ಕ್ವಿಂಟಾಲ್ ಬೀಜ ಲಭ್ಯವಿದೆ. ಇದಲ್ಲದೆ ಇನ್ನು ಹೆಚ್ಚುವರಿಯಾಗಿ 10,000 ಕ್ವಿಂಟಾಲ್ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ವರ್ಷ 28 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಿದ್ದು, ಈ ಬಾರಿ ಅದಕ್ಕಿಂತ ಹೆಚ್ಚಿನ ಬೀಜ ದಾಸ್ತಾನಿದೆ. ರೈತರು ಹೆಚ್ಚಿನ ದರ ನೀಡಿ ಮಾರುಕಟ್ಟೆಯಲ್ಲಿ ಬೀಜ ಖರೀದಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಯೂರಿಯಾ 25,306 ಮೆಟ್ರಿಕ್ ಟನ್, ಡಿ.ಎ.ಪಿ-30,311 ಮೆಟ್ರಿಕ್ ಟನ್, ಕಾಂಪ್ಲೆಕ್ಸ್-14,314 ಮೆಟ್ರಿಕ್ ಟನ್, ಎಂ.ಓ.ಪಿ-505 ಮೆಟ್ರಿಕ್ ಟನ್ ಹಾಗೂ ಎಸ್.ಎಸ್.ಪಿ-2,624 ಮೆಟ್ರಿಕ್ ಟನ್ ಸೇರಿದಂತೆ 73,060 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿನ ಪೈಕಿ ಇಂದಿನ ವರೆಗೆ 14,929 ಮೆ.ಟನ್ ಮಾರಾಟ ಮಾಡಿದ್ದು, ಉಳಿದಂತೆ 58,131 ಮೆಟ್ರಿಕ್ ರಸಗೊಬ್ಬರ ಲಭ್ಯವಿದೆ ಎಂದರು.
ಜಿಆರ್‍ಜಿ-811 ತೊಗರಿ ತಳಿ ವಿತರಣೆ: ಕಳೆದ ವರ್ಷ ಟಿಎಸ್3ಆರ್ ತೊಗರಿ ತಳಿ ಬೀಜ ವಿತರಣೆ ಮಾಡಲಾಗಿತ್ತು. ವಿಪರೀತ ಹವಾಮಾನ ಬದಲಾವಣೆ ಕಾರಣ ತೊಗರಿ ಬೆಳೆ ನೆಟೆ ರೋಗದಿಂದ ತತ್ತರಿಸಿತ್ತು. ಇದರ ನಿಯಂತ್ರಣಕ್ಕೆ ಈ ಬಾರಿ ಜಿಆರ್‍ಜಿ-811 ತೊಗರಿ ತಳಿಯ 6,664 ಕ್ವಿಂಟಾಲ್ ಬೀಜ ವಿತರಣೆ ಮಾಡಲಾಗುತ್ತದೆ. ಇನ್ನು ಆರ್.ಎಸ್.ಕೆ. ಕೇಂದ್ರದಲ್ಲಿ ಬೀಜಗಳಿಗೆ ಟ್ರೈಕೋಡರ್ಮಾ ಹಾಗೂ ಇತರೆ ರಾಸಾಯನಿಕ ಶಿಲೀಂಧ್ರನಾಶಕ ಬೀಜೋಪಚಾರ ಕ್ರಮಗಳು ಮಾತ್ರ ಉಚಿತವಾಗಿ ಮಾಡಿಕೊಡಲಾಗುತ್ತಿದ್ದು, ರೈತರು ಬಿತ್ತನೆ ದಿನ ಬೆಳಿಗ್ಗೆ ಅಥವಾ ಮುನ್ನ ದಿನ ಸಂಜೆ ಕೇಂದ್ರಕ್ಕೆ ಭೇಟಿ ನೀಡಿ ಇದರ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
ನಕಲಿ ಬೀಜ, ರಸಗೊಬ್ಬರ ಕಂಡಲ್ಲಿ ದೂರು ಸಲ್ಲಿಸಿ: ಮಾರುಕಟ್ಟೆಯಲ್ಲಿ ನಕಲಿ ಬೀಜ, ರಸಗೊಬ್ಬರ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಲ್ಲಿ ರೈತರು 8277931508, 9449690239 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳನ್ನು ಖುದ್ದಾಗಿ ಕಂಡು ದೂರು ಸಲ್ಲಿಸಬಹುದಾಗಿದೆ. ಕಳೆದ ವರ್ಷ ಇಂತಹ 15 ಪ್ರಕರಣದಲ್ಲಿ ಎಫ್.ಐ.ಆರ್. ದಾಖಲಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ರೈತರಿಗೆ ವಿತರಿಸಲು ಉದ್ದೇಶಿಸಿರುವ ತೊಗರಿ ನೆಟೆ ರೋಗ ಮತ್ತು ಬಸವನ ಹುಳು ನಿರ್ವಹಣೆ ಕ್ರಮಗಳ ಕುರಿತ ಕರಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೃಷಿ ಉಪನಿರ್ದೇಶಕರಾದ ಸೋಮಶೇಖರ ಬಿರಾದಾರ, ಅನುಸೂಯಾ ಇದ್ದರು.