
ಬೀದರ್:ಮಾ.2: ವೇತನ ಭತ್ಯೆ ಹೆಚ್ಚಳ ಹಾಗೂ ಹಳೆಯ ಪಿಂಚಣಿ ಯೋಜನೆ ಮರು ಜಾರಿ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದ ಕಾರಣ ರಾಜ್ಯ ಸರ್ಕಾರಿ ನೌಕರರ ಸಂಘವು ಬುಧವಾರ ಆರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂದಕ್ಕೆ ಪಡೆದಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್ 1 ರಿಂದ ಶೇ 17 ರಷ್ಟು ಮಧ್ಯಂತರ ಪರಿಹಾರ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರ್ಕಾರ ಹೊರಡಿಸಿದ ಆದೇಶ ನೌಕರರಲ್ಲಿ ಹರ್ಷದ ಹೊನಲನ್ನೇ ಹರಿಸಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ನೌಕರರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ, ವಿಜಯೋತ್ಸವ ಆಚರಿಸಿದರು.
ರಾಜ್ಯ ಸರ್ಕಾರ ಸಂಘದ ಎರಡೂ ಬೇಡಿಕೆಗಳನ್ನು ಈಡೇರಿಸಿದೆ. ಹೀಗಾಗಿ ಮುಷ್ಕರ ವಾಪಸ್ ಪಡೆಯಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.
ಏಳನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು, ಫಿಟ್‍ಮೆಂಟ್ ಸೌಲಭ್ಯ ಜಾರಿಗೊಳಿಸುವ ವರೆಗೆ ಏಪ್ರಿಲ್ 1 ರಿಂದ ಶೇ 17 ರಷ್ಟು ಮಧ್ಯಂತರ ಪರಿಹಾರ ಜಾರಿಗೆ ಸರ್ಕಾರ ಆದೇಶ ಹೊರಡಿಸಿದೆ. ಹಳೆಯ ಪಿಂಚಣಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಈಗಾಗಲೇ ಐದು ರಾಜ್ಯಗಳಲ್ಲಿ ಜಾರಿಗೊಳಿಸಲಾದ ಮಾದರಿ ಅಧ್ಯಯನ ಮಾಡಿ ಎರಡು ತಿಂಗಳೊಳಗೆ ವರದಿ ಸಲ್ಲಿಸುವ ಷರತ್ತಿನೊಂದಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ ಎಂದು ಹೇಳಿದರು.
ನೌಕರರ ಬಹು ದಿನಗಳ ಬೇಡಿಕೆಗಳ ಈಡೇರಿಕೆಗಾಗಿ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಸರ್ಕಾರಿ ನೌಕರರ ಎಲ್ಲ ವೃಂದ ಸಂಘಗಳ ಸಹಕಾರದಿಂದ ಮುಷ್ಕರ ಸಂಪೂರ್ಣ ಯಶಸ್ವಿಗೊಂಡಿತು. ಅದರ ಫಲಶ್ರುತಿಯಿಂದಾಗಿ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಆದೇಶ ಹೊರಡಿಸಿದೆ ಎಂದು ಹೇಳಿದರು.
ನೌಕರರ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರ ಹಾಗೂ ಇದಕ್ಕೆ ಶ್ರಮಿಸಿದ ಸಿ.ಎಸ್. ಷಡಾಕ್ಷರಿ ಅವರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಕಾರ್ಯಾಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಓಂಕಾರ ಮಲ್ಲಿಗೆ, ಎಂ.ಎ. ಸತ್ತಾರ್, ಸಂಜು ಸೂರ್ಯವಂಶಿ, ಗಣಪತಿ ಜಮಾದಾರ್, ಪ್ರಮೋದ್ ಭೋಸ್ಲೆ, ಶಿವಶಂಕರ ಟೋಕರೆ, ಪಾಂಡುರಂಗ ಬೆಲ್ದಾರ್, ಸತೀಶ್ ಪಾಟೀಲ, ದಿಲೀಪ್ ಗಾದಾ, ಸಂತೋಷ ಚಲುವಾ, ಪ್ರದೀಪ್ ಅಂಗಡಿ, ನೀಲಕಂಠ ಬಿರಾದಾರ, ಮನೋಹರ ಕಾಶಿ, ಇಮಾನುವೆಲ್ ಮೊದಲಾದವರು ಪಾಲ್ಗೊಂಡಿದ್ದರು.
ಮುಷ್ಕರ:
ಇದಕ್ಕೂ ಮೊದಲು ರಾಜ್ಯ ಸರ್ಕಾರಿ ನೌಕರರು ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಜಿಲ್ಲಾ ಖಜಾನೆ ಅಧಿಕಾರಿ ಕಚೇರಿ, ನಗರಸಭೆ, ವಾಣಿಜ್ಯ ತೆರಿಗೆ ಇಲಾಖೆ, ಜಿಲ್ಲಾ ನ್ಯಾಯಾಲಯ, ಕೃಷಿ ಇಲಾಖೆ, ಸಾರ್ವನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಅಬಕಾರಿ ಇಲಾಖೆ ಕಚೇರಿಗಳು ನೌಕರರಿಲ್ಲದೆ ಭಣಗುಟ್ಟಿದ್ದವು. ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಆಗಿತ್ತು. ಆದರೆ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಗೆ ಯಾವುದೇ ತೊಂದರೆ ಆಗಲಿಲ್ಲ.
ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮುಷ್ಕರದ ನಿಮಿತ್ತ ನಗರದ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದರು.