ಬೇಡಿಕೆಗೆ ಸಾರಿಗೆ ನೌಕರರ ಬಿಗಿಪಟ್ಟು

ಸಂಜೆ ಸಭೆ
ಬೆಂಗಳೂರು, ಮಾ.೧೭- ಶೇ. ೧೫ರಷ್ಟು ವೇತನ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕೊಡುಗೆಯನ್ನು ಧಿಕ್ಕರಿಸಿರುವ ಸಾರಿಗೆ ನೌಕರರು, ಮಾರ್ಚ್ ೨೧ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಬೆದರಿಕೆ ಹಾಕಿದ್ದು ಯುಗಾದಿ ಹಬ್ಬದ ಸಂದರ್ಭದಲ್ಲಿ ಮುಷ್ಕರ ನಡೆಸಿದರೆ ಇದರ ಬಿಸಿ ಪ್ರಯಾಣಿಕರಿಗೆ ತಟ್ಟಲಿದೆ.
ವೇತನ ಪರಿಷ್ಕರಣೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದರು.ಈ ನಡುವೆ ರಾಜ್ಯ ಸರ್ಕಾರ ಸಾರಿಗೆ ನೌಕರರ ವೇತನವನ್ನು ಶೇ.೧೫ರಷ್ಟು ಹೆಚ್ಚಳ ಮಾಡುವ ಭರವಸೆ ನೀಡಿದೆ. ಈ ಪ್ರಸ್ತಾಪವನ್ನು ತಿರಿಸ್ಕರಿಸಿದ್ದಾರೆ.
ಇಂದು ಸಭೆ: ಇಂದು ಕೆಎಸ್‌ಆರ್‌ಟಿಸಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್ ಅವರ ನೇತೃತ್ವದಲ್ಲಿ ಗುಂಡೂರಾವ್ ಸಭಾಂಗಣದಲ್ಲಿ ಸಂಜೆ
ಸಭೆ ನಡೆಯಲಿದ್ದು, ಸರ್ಕಾರಸ ಬೇಡಿಕೆ, ಹೋರಾಟ ಮುಂದುವರೆಸುವ ಕುರಿತು ಪ್ರಕಟಿಸಲಿದ್ದಾರೆ.ಈ ಕುರಿತು “ಸಂಜೆವಾಣಿ” ಪತ್ರಿಕೆಯೊಂದಿಗೆ ಮಾತನಾಡಿದ ಎಚ್.ವಿ.ಅನಂತ ಸುಬ್ಬರಾವ್, ನಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ. ನಿಗದಿಯಂತೆ ಮಾರ್ಚ್ ೨೧ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದರು.ಅದು ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇ.೧೫ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಏಕಪಕ್ಷೀಯವಾಗಿ ನೀಡಿರುವ ಹೇಳಿಕೆಗೆ ಸಮ್ಮತವಿಲ್ಲ. ಸಾರಿಗೆ ನೌಕರರಿಗೆ ಶೇ.೨೫ರಷ್ಟು ವೇತನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆದು ಮಾತನಾಡಿದರೆ ಸಮಸ್ಯೆ ಇತ್ಯರ್ಥ ಆಗುತ್ತದೆ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.ಮೂಲ ವೇತನಕ್ಕೆ ಡಿ.ಎ. ವಿಲೀನಗೊಳಿಸಿ ಪರಿಷ್ಕೃತ ವೇತನ ನೀಡಬೇಕು. ಬಳಿಕ ಆ ಮೂಲ ವೇತನದಲ್ಲಿ ಶೇ ೨೫ರಷ್ಟನ್ನು ಹೆಚ್ಚಳ ಮಾಡುವ ಒಪ್ಪಂದ ಆಗಬೇಕು, ವಜಾಗೊಂಡ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅವರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ಹಿಂಪಡೆಯಬೇಕು.ಭತ್ಯೆ, ಬಾಟಾ ಹೆಚ್ಚಿಸಬೇಕು ಎಂದು ಹಲವು ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇವುಗಳ ಬಗ್ಗೆ ಯಾವುದೇ ಚರ್ಚೆ ಮಾಡದೆ ಸರ್ಕಾರ ಕೈಗೊಳ್ಳುವ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸುಬ್ಬರಾವ್ ತಿಳಿಸಿದರು.
ಸಾರಿಗೆ ನೌಕರರ ಬೇಡಿಕೆಗಳೇನು?

  • ಮೂಲ ವೇತನಕ್ಕೆ ಬಿ.ಡಿ.ಎ ವಿಲೀನಗೊಳಿಸಿ, ಮೂಲ ವೇತನವನ್ನು ಶೇ.೨೫ರಷ್ಟು ಹೆಚ್ಚಿಸಬೇಕು.
  • ವೇತನ ಹೆಚ್ಚಳವು ಪರಿಷ್ಕೃತ ಮೂಲ ವೇತನದ ಶೇ.೩ರಷ್ಟಿರಬೇಕು.
  • ಎಲ್ಲ ನಿರ್ವಾಹಕರಿಗೂ ಕ್ಯಾಷಿಯರ್‌ಗಳಿಗೆ ಸಮಾನವಾದ ನಗದು ಪ್ರೋತ್ಸಾಹಧನ ನೀಡಬೇಕು.
  • ೨೦೨೧ರ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸೇವೆಯಿಂದ ವಜಾಗೊಳಿಸಿದ ನೌಕರರನ್ನು ಷರತ್ತಿಲ್ಲದೆ ಮರು ನೇಮಕ ಮಾಡಬೇಕು.
  • ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ, ನೌಕರರನ್ನು ಮೂಲ ಘಟಕಕ್ಕೆ ಮರು ನಿಯೋಜಿಸಬೇಕು.
  • ಮುಷ್ಕರದ ವೇಳೆ ಎಫ್‌ಐಆರ್ ದಾಖಲಿಸಿರುವ ನೌಕರರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು.
  • ಜಂಟಿ ಕ್ರಿಯಾ ಸಮಿತಿಯಿಂದ ಜ. ೨೪ರಂದು ಸಲ್ಲಿಸಿರುವ ಬೇಡಿಕೆಗಳನ್ನು ಆಡಳಿತ ವರ್ಗದವರು ಚರ್ಚಿಸಿ, ವಿಳಂಬವಿಲ್ಲದೇ ಈಡೇರಿಸಬೇಕು.
  • ಕೈಗಾರಿಕಾ ವಿವಾದ ಕಾಯಿದೆ ೧೯೪೭ರ ಅನ್ವಯ ಜಂಟಿ ಕ್ರಿಯಾ ಸಮಿತಿಯ ಜತೆ ಕೈಗಾರಿಕಾ ಒಪ್ಪಂದ ಮಾಡಬೇಕು. ಇದು ೨೦೨೦ರ ಜ. ೧ ರಿಂದ ೨೦೨೩ರ ಡಿ. ೩೧ರವರೆಗೆ ಜಾರಿಯಲ್ಲಿರಬೇಕು.
  • ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನೂ ಮೇಲಿನಂತೆಯೇ ಸಿದ್ಧಪಡಿಸಬೇಕು. ವೇತನ ಬಡ್ತಿ ದರವು ಪರಿಷ್ಕೃತ ಮೂಲ ವೇತನದ ಶೇ ೩ರಷ್ಟಿರಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ ೧೦ ವರ್ಷಕ್ಕೆ ನೀಡಬೇಕು.
  • ಎಲ್ಲ ನೌಕರರಿಗೂ ಹಾಲಿ ಇರುವ ಬಾಟಾ, ಮಾಸಿಕ, ದೈನಂದಿನ (ಕ್ಯಾಷ್, ರಿಪಾಸ್ಟ್, ಬಟ್ಟೆ ತೊಳೆಯುವ, ರಾತ್ರಿ ಪಾಳಿ, ಪ್ರೋತ್ಸಾಹ ಭತ್ಯೆ) ಭತ್ಯೆಗಳನ್ನು ಐದು ಪಟ್ಟು ಜಾಸ್ತಿ ಮಾಡಬೇಕು.
  • ಹೊಲಿಗೆ ಭತ್ಯೆ, ಶೂ, ಜೆರ್ಸಿ, ರೈನ್ ಕೋಟ್‌ಗೆ ನೀಡುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು.