
ಸಂಜೆವಾಣಿ ವಾರ್ತೆ
ಚಿತ್ರದುರ್ಗ ಸೆ. 10; ಚಿತ್ರದುರ್ಗ ಜಿಲ್ಲೆಯ ಜನರು ಹಾಗೂ ರೈತರ ಅಗತ್ಯಕ್ಕೆ ಅನುಗುಣವಾಗಿ ಬೇಕಿರುವ ಸಾಮಥ್ರ್ಯದ ವಿದ್ಯುತ್ ಸ್ಥಾವರಗಳ ಮಂಜೂರಾತಿಗೆ ಕೇಂದ್ರ ಸರ್ಕಾರದಿಂದ ಎಲ್ಲ ಅಗತ್ಯ ಸಹಕಾರ ನೀಡಲಾಗುವುದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಸಂಸದರಾದ ಎ. ನಾರಾಯಣಸ್ವಾಮಿ ಅವರು ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿದ್ಯುಚ್ಛಕ್ತಿ ಹಾಗೂ ಬಿಎಸ್‍ಎನ್‍ಎಲ್ ಯೋಜನೆಗಳ ಕುರಿತು ಶುಕ್ರವಾರ ಏರ್ಪಡಿಸಲಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಗೆ ಪ್ರಸ್ತುತ 270 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯ ಅಗತ್ಯವಿದೆ, ಆದರೆ ಜಿಲ್ಲೆಯಲ್ಲಿ 180 ಮೆ.ವ್ಯಾ. ಮಾತ್ರ ಲಭ್ಯವಿದೆ, ಈ ಭಾಗದ ರೈತರಿಗೆ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ವಿದ್ಯುತ್ ಪೂರೈಸಲು 270 ಮೆ.ವ್ಯಾ. ವಿದ್ಯುತ್ ಅವಶ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಮೊಳಕಾಲ್ಮೂರು ಹಾಗೂ ಹಿರಿಯೂರು ತಾಲ್ಲೂಕುಗಳಲ್ಲಿ ಮಂಜೂರಾತಿ ಕೊಟ್ಟಿದೆ, ಅಲ್ಲದೆ ಹೊಳಲ್ಕೆರೆ ತಾಲ್ಲೂಕಿನ ಭರಮಸಾಗರ ಸೇರಿದಂತೆ ವಿವಿಧೆಡೆ ಕೂಡ ವಿದ್ಯುತ್ ಘಟಕಗಳ ನಿರ್ಮಾಣದ ಅಗತ್ಯ ಕಾಮಗಾರಿಗಳು, 66 ಕೆ.ವಿ. ಸ್ಟೇಷನ್‍ಗಳು ಮಂಜೂರಾಗಬೇಕಿದೆ. ಈಗಾಗಲೆ ಇದಕ್ಕಾಗಿ ಡಿಪಿಆರ್ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಬಗ್ಗೆ ಕಡತಗಳು ಯಾವ ಹಂತದಲ್ಲಿವೆ, ಯಾರ ಬಳಿ ಬಾಕಿ ಇವೆ, ಪ್ರಸ್ತುತ ಸ್ಥಿತಿಗತಿಗಳೇನು ಎಂಬ ಬಗ್ಗೆ ಅಧಿಕಾರಿಗಳು ಒಂದು ವಾರದ ಒಳಗಾಗಿ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು. ಜಿಲ್ಲೆಯಲ್ಲಿ ಬರದ ಛಾಯೆ ಕಂಡುಬಂದಿದ್ದು, ರೈತರು ಬೋರ್‍ವೆಲ್‍ಗಳ ಮೇಲೆ ಹೆಚ್ಚು ಅವಲಂಬನೆ ಮಾಡುವ ಸಾಧ್ಯತೆಗಳಿರುತ್ತವೆ, ಹೀಗಾಗಿ ಅವರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಎಷ್ಟೆಷ್ಟು ವಿದ್ಯುತ್ ಬೇಕಾಗುತ್ತದೆ, ಆಗಬೇಕಿರುವ ಯೋಜನೆಗಳು, ವಿದ್ಯುತ್ ಸ್ಟೇಷನ್‍ಗಳ ನಿರ್ಮಾಣ ಮುಂತಾದವುಗಳ ಬಗ್ಗೆ ಸಮಗ್ರ ವರದಿಯನ್ನು ಕೊಡಲು ಸೂಚನೆ ನೀಡಿದ ಸಚಿವ ಎ. ನಾರಾಯಣಸ್ವಾಮಿ ಅವರು, ವರದಿ ಸಲ್ಲಿಸಿದ ಬಳಿಕ, ಮತ್ತೊಮ್ಮೆ ಸಭೆ ನಡೆಸಿ, ಪರಿಶೀಲನೆ ನಡೆಸಲಾಗುವುದು ಎಂದು ಸೂಚನೆ ನೀಡಿದರು.