ಬೇಡಿಕೆಗೆ ಅನುಗುಣವಾಗಿ ಬೀಜ, ರಸ ಗೊಬ್ಬರ ವಿತರಿಸಿ

ಧಾರವಾಡ,ಜೂ11: ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ ವಿತರಿಸಬೇಕು. ಸರಕಾರದಿಂದ ಕೃಷಿ ಸಂಬಂಧಿತ ಎಲ್ಲ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತ ಪ್ರೂಟ್ ಐಡಿ ಹೊಂದುವುದು ಕಡ್ಡಾಯವಾಗಿದ್ದು, ರೈತರಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರೂಟ್ ಐಡಿ ಹೊಂದಲು ಜಿಲ್ಲೆಯಾದ್ಯಂತ ಅಭಿಯಾನ ಹಮ್ಮಿಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಸಚಿವರು ಆಗಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು.
ಮುಂಗಾರು ಪೂರ್ವಕಾಲದಲ್ಲಿ ಮಳೆ ಚನ್ನಾಗಿ ಆಗಿದ್ದರಿಂದ ನಮ್ಮ ಜಿಲ್ಲೆಯ ರೈತರು ಮುಂಗಾರು ಆರಂಭಕ್ಕೂ ಮೊದಲೇ ಬಿತ್ತನೆ ಆರಂಭಿಸಿದ್ದಾರೆ. ಈಗ ಸುಮಾರು ಶೇ. 36 ರಷ್ಟು ಕೃಷಿ ಭೂಮಿ ಬಿತ್ತನೆ ಆಗಿದೆ. ಉಳಿದ ರೈತರು ಬಿತ್ತನೆ ಮಾಡುತ್ತಿದ್ದಾರೆ. ಎಲ್ಲ ರೈತರಿಗೆ ಅವರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರಗಳನ್ನು ಪೂರೈಸಲು ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಸಚಿವರು ತಿಳಿಸಿದರು.
ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತ ಪ್ರೂಟ್ ಐಡಿ ಹೊಂದುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ. 76 ರಷ್ಟು ರೈತರು ಪ್ರೂಟ್ ಐಡಿ ಹೊಂದಿದ್ದಾರೆ. ಉಳಿದ ರೈತರು ಪ್ರೂಟ್ ಐಡಿ ಹೊಂದುವಂತೆ ಜಾಗೃತಿ ಮೂಡಿಸಿ, ಪ್ರಗತಿ ಸಾಧಿಸಲು ರೈತರ ಜಾಗೃತಿಗಾಗಿ ಅಭಿಯಾನ ಹಮ್ಮಿಕೊಳ್ಳಬೇಕೆಂದು ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಾತನಾಡಿ, ರೈತರಿಗೆ ಬೀಜ ದರ ಹೆಚ್ಚಳ ಬಗ್ಗೆ ತಿಳುವಳಿಕೆ ನೀಡಬೇಕು ಮತ್ತು ಹೊಸ ತಳಿ ಬೀಜಗಳನ್ನು ರೈತರಿಗೆ ಪರಿಚಯಿಸಿ, ವಿತರಿಸಲು ಕ್ರಮಕೈಗೊಳ್ಳಬೇಕು. ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳಿಗೆ ರೈತರ ಪ್ರೂಟ್ ಐಡಿ ಸೃಜಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ಭಾಗ ಹಾಗೂ ನಗರ, ಪಟ್ಟಣಗಳಲ್ಲಿ ಎನ್.ಎ ಮಾಡುವಾಗ ಸರಕಾರಿ ರಸ್ತೆ ಪಕ್ಕದಲ್ಲಿ ಭಪರ್ ರಸ್ತೆ ಜಾಗ ಬಿಡುವಂತೆ ನಿಯಮ ರೂಪಿಸಬೇಕು ಎಂದು ಅವರು ತಿಳಿಸಿದರು.
ನವಲಗುಂದ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ನವಲಗುಂದ, ಅಣ್ಣಿಗೇರಿ ಪಟ್ಟಣಗಳ ನಗರೋತ್ಥಾನ ಯೋಜನೆಯ 4 ನೇ ಹಂತದ ಕಾಮಗಾರಿಗಳು, ನವಲಗುಂದ ಯುಜಿಡಿ ಕಾಮಗಾರಿ, ನವಲಗುಂದ ಮತ್ತು ಅಣ್ಣಿಗೇರಿ ಪಟ್ಟಣದಲ್ಲಿನ ನಿರಂತರ ನೀರು ಸರಬರಾಜು ಯೋಜನೆ, ಎರಡು ನಗರಗಳ ಮನೆ ಹಕ್ಕು ಪತ್ರ ವಿತರಣೆ ಮತ್ತು ಬೆಳೆ ಪರಿಹಾರದ ಕುರಿತು ವಿಷಯ ಪ್ರಸ್ತಾಪಿಸಿ, ಶಾಸಕರು ಚರ್ಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರಗಳ ಜೊತೆಗೆ ಹೆಚ್ಚುವರಿ ಕೇಂದ್ರಗಳನ್ನು ತೆರೆದು ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಪ್ರತಿ ರೈತರ ಆರ್.ಟಿ.ಸಿ ಗೆ ಆಧಾರ್ ಜೋಡಣೆ ಕಾರ್ಯ ನಡೆದಿದೆ. ಇದರೊಂದಿಗೆ ರೈತರು ಪ್ರೂಟ್ ಐಡಿ ಹೊಂದುವಂತೆ ತಿಳುವಳಿಕೆ ನೀಡಿ, ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬೀಜ, ಗೊಬ್ಬರದ ಕೊರತೆ ಇಲ್ಲ. ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಇದೆ. ಕೃಷಿ ಉತ್ಪಾದನೆಗಳ ಖಾಸಗಿ ಮಾರಾಟಗಾರರಿಗೆ ಸಭೆ ಜರುಗಿಸಿ, ರೈತರಿಗೆ ತೊಂದರೆ ಆಗದಂತೆ ಬೀಜ, ಗೊಬ್ಬರ ವಿತರಿಸಲು ಸೂಚಿಸಲಾಗಿದೆ. ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗದಂತೆ, ರೈತರಿಗೆ ಎಂ.ಆರ್.ಪಿ ದರ ಬಿಟ್ಟು ಹೆಚ್ಚಿನ ದರಕ್ಕೆ ರಸಗೊಬ್ಬರ, ಬೀಜ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ವೇದಿಕೆಯಲ್ಲಿದ್ದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.