ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಿ: ಖಾಶೆಂಪೂರ

ಬೀದರ ಜೂ.04: ಕೊರೊನಾ ವೈರಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ಖಾತ್ರಿ ಕೆಲಸ ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ನರೇಗಾ (ಉದ್ಯೋಗ ಖಾತ್ರಿ) ದಡಿಯಲ್ಲಿ ಕ್ಷೇತ್ರ ವ್ಯಾಪ್ತಿಯ ಮನ್ನಳ್ಳಿ ಗ್ರಾಮದ ಮನ್ನಳ್ಳಿ ಕೆರೆಯ ಹುಳೆತ್ತುವ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಉದ್ಯೋಗ ಖಾತ್ರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಪ್ರತಿ ಕುಟುಂಬಕ್ಕೂ ನೂರು ದಿನಗಳ ಕೆಲಸ ನೀಡಬೇಕು. ಬೇಡಿಕೆ ಬಂದಲ್ಲಿ ಹೆಚ್ಚುವರಿ ಕೆಲಸ ನೀಡಬೇಕು. ಕೆಲಸದ ಸ್ಥಳಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರಗಳೊಂದಿಗೆ ಕೊರೊನಾ ತಡೆಗಾಗಿ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು.ಕೆಲಸ ಮಾಡಿದವರ ಖಾತೆಗೆ ಹಣ ಜಮಾ ಆಗುವಂತೆ ಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ ತಡೆಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮಾಡಬೇಕು. ಕೊರೊನಾ ವ್ಯಾಕ್ಸಿನೇಷನ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪಿಡಿಒ ಸೇರಿದಂತೆ ಪಂಚಾಯ್ತಿ ಸಿಬ್ಬಂದಿಗಳಿಗೆ ಸೂಚಿಸಿದರು.