ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಹುಬ್ಬಳ್ಳಿ,ಫೆ26 : ಸ್ವಚ್ಚತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಬೇಡಿಕೆಗಳನ್ನು ಶೀಘ್ರವಾಗಿ ಹು-ಧಾ ಮಹಾನಗರ ಪಾಲಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸರ್ವ ಧರ್ಮ ಸ್ವಯಂ ಸೇವಕರ ವತಿಯಿಂದ ನಗರದ ವಾರ್ಡ್ ನಂ. 50 ರ ಗವಿ ಕೋರುವರ ಓಣಿಯ ನಿವಾಸಿಗರು ಒತ್ತಾಯಿಸಿದರು.

ನಗರದ ಹು-ಧಾ ಮಹಾನಗರ ಪಾಲಿಕೆ ಆವರಣದ ಆಯುಕ್ತರ ಕಛೇರಿ ಬಳಿಯಲ್ಲಿ ಪಾಲಿಕೆ ಹಾಗೂ ಅಧಿಕಾರಿಗಳ ದಿಕ್ಕಾರ ಕೂಗಿದ ನಿವಾಸಿಗರು ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಒದಗಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ಯೆಗಳ ಕುರಿತು ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹ ಮಾಡಿದ ಪ್ರತಿಭಟನಾಕಾರರು, ವಾರ್ಡ್ ನಂ.50 ರ ಗವಿ ಕೋರುವರ ಓಣಿಯಲ್ಲಿ ದಿನನಿತ್ಯ ಸುತ್ತಮುತ್ತಲು ಮನೆಗಳ ಕಸ ಮತ್ತು ಮಣ್ಣಿನಿಂದ ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ಮತ್ತು ಸ್ವಚ್ಚತೆಯನ್ನು ಮಾಡಲು ಕರ್ಮಚಾರಿಗಳು ಹಾಗೂ ಮಹಾನಗರ ಪಾಲಿಕೆ ವಾಹನವು ಬರುತ್ತಿಲ್ಲ ಎಂದು ಆರೋಪಿಸಿದರು.

ಇನ್ನೂ ವಿದ್ಯುತ್ ಕಂಬ ಬೀಳುವಂತಹ ಪರಿಸ್ಥಿತಿಯಲ್ಲಿದ್ದು ಅಪಾಯದ ಭಯದಿಂದ ಸಾರ್ವಜನಿಕರು ಜೀವನ ಕಳೆಯುವಂತಾಗಿದೆ. ಚರಂಡಿ ನೀರು, ಕಸ, ಮಣ್ಣು ತುಂಬಿ ಹರಿಯುತ್ತಿದ್ದು, ಈಗ ದುರ್ವಾಸನೆಯಿಂದ ಸಾರ್ವಜನಿಕರ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ತಮ್ಮ ಸಂಕಷ್ಟ ತೋಡಿಕೊಂಡರು.

ವಲಯ ನಂ. 9 ರ ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಮನವಿ ನೀಡಿದರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಸ್ಥಳಕ್ಕೆ ಭೇಟಿ ನೀಡದೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆಂದರು.

ಪ್ರತಿಭಟನೆ ಸಂದರ್ಭದಲ್ಲಿ ಸರ್ವ ಧರ್ಮ ಸ್ವಯಂ ಸೇವಕರ ಧಾರವಾಡ ಜಿಲ್ಲಾ ಸಲಹೆಗಾರರಾದ ಧಾರವಾಡಕರ, ಮೆಹಬೂಬು ಅಲ್ಲಿ, ಸೌದಗಾರ್, ಶೋಭಾ ರತನ್, ಮಮತಾಜ್, ವಿನೋದ್ ಕಾಟವೆ, ರೇಣುಕಾಬಾಯಿ ಜರತಾರಘರ ಸೇರಿದಂತೆ ನಿವಾಸಿಗಳು ಉಪಸ್ಥಿತರಿದ್ದರು.