ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ಕೋಲಾರ,ಜು.೧೧- ಕಳಪೆ ಗುಣಮಟ್ಟದ ಮೊಬೈಲ್ ವಾಪಸ್ಸ್ ಪಡೆದು ಹೊಸ ಟ್ಯಾಬ್‌ಗಳನ್ನು ನೀಡುವ ಬಗ್ಗೆ ಚಳುವಳಿ ನಡೆಸಿದ್ದಾಗ್ಯೂ ಸಿಡಿಪಿಓ ಗಳು ಮೊಬೈಲ್ ವಾಪಸ್ಸ್ ಪಡೆಯದೆ ಇರುವ ಹಿನ್ನೆಲೆಯಲ್ಲಿ ಹೊಸ ಮೊಬೈಲ್/ಟ್ಯಾಬ್ ನೀಡುವವರೆಗೂ ಹಳೆ ಮೊಬೈಲ್‌ಗಳಲ್ಲಿ ಕೆಲಸ ನಿರ್ವಹಿಸದೆ ಪುಸ್ತಕದ ರೂಪದಲ್ಲಿ ದಾಖಲಿಸಲು ನಿರ್ಧರಿಸಿರುವ ಕುರಿತು ಹಾಗೂ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪನಿರ್ದೇಶಕರ ಮುಖಾಂತರ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಕಾರ್ಯಕರ್ತೆಯರ ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ಸೇರಿದಂತೆ ಹಲವಾರು ಬಾರಿ ಮೊಬೈಲ್‌ಗಳು ಹಾಳಾಗಿರುವುದರ ಕುರಿತು ತಮ್ಮ ಗಮನಕ್ಕೆ ತರಲಾಗಿದ್ದರೂ ಸಹ ಅದನ್ನು ಗಂಭೀರವಾಗಿ ಪರಿಗಣಿಸದೆ ಪದೆ ಪದೆ ಸಮೀಕ್ಷೆಗಳನ್ನು ಮಾಡ ಬೇಕೆಂದು ಒತ್ತಡ ಹಾಕುತ್ತಲೆ ಬರಲಾಗುತ್ತಿದೆ ಎಂದರು.
ವಾಸ್ತವವಾಗಿ ಕಳೆದ ೪ ವರ್ಷಗಳಿಂದ ನೀಡಿರುವ ಮೊಬೈಲ್‌ಗಳು ಹಾಳಾಗಿದ್ದು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದಕಾರಣ ಇಂದು ರಾಜ್ಯದ ಎಲ್ಲಾ ಡಿ.ಡಿ ಮತ್ತು ಸಿಡಿಪಿಓ ಕಛೇರಿಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ತೆರಳಿ ಮೊಬೈಲ್‌ಗಳನ್ನು ವಾಪಸ್ಸ್ ಕೊಡಲು ರಾಜ್ಯದ ಎಲ್ಲಾ ಅಂಗನವಾಡಿ ಸಂಘಟನೆಗಳ ನೇತೃತ್ವದಲ್ಲಿ ಮೊಬೈಲ್ ವಾಪಸ್ಸು ಕೊಡುವ ಅಭಿಯಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಯಾವುದೆ ಒಂದು ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಯು ಸಹ ಸ್ಪಷ್ಟ ಉತ್ತರ ನೀಡದೆ, ಮೊಬೈಲ್‌ಗಳನ್ನು ವಾಪಸ್ಸು ಪಡೆಯದೆ ಬೇಜವಾಬ್ದಾರಿಯಿಂದ ನುಣುಚಿಕೊಳ್ಳುವ ವರ್ತನೆಯನ್ನು ತೋರಿರುತ್ತಾರೆ. ಅದುದರಿಂದ ಹೊಸ ಮೊಬೈಲ್-ಟ್ಯಾಬ್ ನೀಡುವವರೆಗೂ ಯಾವುದೇ ರೀತಿಯ ಸಮೀಕ್ಷೆಗಳಾಗಲಿ ಅಥವಾ ಅಂಗನವಾಡಿ ಕಾರ್ಯ ಚಟುವಟಿಕೆಗಳ ದಾಖಲೆಗಳನ್ನು ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡದೆ ಪುಸ್ತಕದ ರೂಪದಲ್ಲಿ ದಾಖಲೆಗಳನ್ನು ದಾಖಲಿಸಲು ನಿರ್ಧರಿಸಲಾಗಿದೆ.
ಮೊಬೈಲ್‌ಗಳು ಸಂಪೂರ್ಣ ಕೆಟ್ಟುಹೋಗಿ ಕೆಲಸ ಮಾಡಲು ಸಾಧ್ಯವಿಲ್ಲವೆಂಬುದರ ಅರಿವು ಎಲ್ಲಾ ಅಧಿಕಾರಿಗಳಿಗೂ ಇದ್ದರೂ ಸಹ ಸರ್ವೆ ಕೆಲಸ ಮಾಡಲೇ ಬೇಕು ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ, ವೇತನ ತಡೆಹಿಡಿಯುತ್ತೇವೆ ಎಂಬಿತ್ಯಾದಿ ಬೆದರಿಕೆಯನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಕಲಾಗುತ್ತಿದ್ದು ಇದು ಒಂದು ರೀತಿಯಲ್ಲಿ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳವಾಗಿರುತ್ತದೆ.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ಮುಖಂಡರುಗಳಾದ ಗಾಂಧಿ ನಗರ ನಾರಾಯಣಸ್ವಾಮಿ, ಕಲ್ವಮಂಜಲಿ ಶಿವಣ್ಣ, ಎನ್,ಕಲ್ಪನಾ, ವಿ.ಮುಂಜುಳ, ಲಕ್ಷ್ಮೀ ದೇವಮ್ಮ, ಎಂ.ಸರಸ್ವತಮ್ಮ, ಕಲ್ವಮಂಜಲಿ ನಾಗವೇಣಮ್ಮ, ಚಿನ್ನಮ್ಮ, ಜಿ.ಟಿ.ಪ್ರಭಾವತಿ, ನೀರ್ಮಲಾಬಾಯಿ, ಡಿ.ಎನ್.ಗಂಗರತ್ನಮ್ಮ, ಗೀತಾ, ಜಮುನಾರಾಣಿ ಹೋರಾಟದ ನೇತೃತ್ವ ವಹಿಸಿದ್ದರು.