ಬೇಟೆಗಾರರ ಬಂಧನ

ಬ್ಯಾಡಗಿ, ಮೇ28 : ಅರಣ್ಯ ಪ್ರದೇಶದಲ್ಲಿ ಬಲೆಗಳನ್ನು ಹಾಕಿ ಕೌಜುಗ ಬುರಲಿ ಸೇರಿದಂತೆ ವಿವಿಧ ಕಾಡುಪಕ್ಷಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ ಘಟನೆ ಪಟ್ಟಣದ ಬೆಟ್ಟದ ಮಲ್ಲೇಶ್ವರ ಅರಣ್ಯ ಪ್ರದೇಶದಲ್ಲಿ ಗುರುವಾರ ಜರುಗಿದೆ.
ಪಟ್ಟಣದ ಭಾಷಾಸಾಬ ಮೌಲಾಸಾಬ ಬೇಪಾರಿ ಹಾಗೂ ಮೋಟೆಬೆನ್ನೂರ ಗ್ರಾಮದ ದಾವಲ್‍ಸಾಬ ಹುಸೇನಸಾಬ ಪೈಲ್ವಾನ್ ಎಂಬುವರು ಸೇರಿಕೊಂಡು ಕಾಡು ಪಕ್ಷಿಗಳನ್ನು ಹಿಡಿಯಲು ಶಿಕಾರಿಪುರದಿಂದ ಬಲೆಗಳನ್ನು ಖರೀದಿಸಿ ತಂದು ಪಕ್ಷಿಗಳನ್ನು ಹಿಡಿಯುವ ಕೆಲಸದಲ್ಲಿ ನಿರತಾಗಿದ್ದಾರೆ ಎನ್ನಲಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯಬಹುದೆಂಬ ಊಹೆಯಿಂದ ತಾಲೂಕಿನಾದ್ಯಂತ ನಮ್ಮ ಸಿಬ್ಬಂದಿಗಳಿಗೆ ಇಂತಹ ಕೃತ್ಯಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡಿರುವೆ. ಅದರಂತೆ ಗುರುವಾರ ನಮ್ಮ ಸಿಬ್ಬಂದಿಗಳು ಬೆಟ್ಟದ ಮಲ್ಲೇಶ್ವರ ಅರಣ್ಯ ಪ್ರದೇಶದಲ್ಲಿ ತೆರಳಿದ್ದ ಸಂದರ್ಭದಲ್ಲಿ ಈ ಇಬ್ಬರು ಸೇರಿಕೊಂಡು ಕಾಡುಪಕ್ಷಿಗಳನ್ನು ಹಿಡಿಯಲು ಬಲೆಗಳನ್ನು ಹಾಕಿಕೊಂಡು ಕುಳಿತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. 1963ರ ಅರಣ್ಯ ಇಲಾಖೆ ಕಾಯ್ದೆ 33(8) 33(3) 1969ರ ಅರಣ್ಯ ಇಲಾಖೆ ಕಾಯ್ದೆ 25(5) ಕಾಯ್ದೆಯನ್ವಯ ಇವರನ್ನು ಬಂಧಿಸಲಾಗಿದೆ. ಯಾವುದೇ ಪಕ್ಷಿಗಳು ಬಲೆಗಳಲ್ಲಿ ಬಿದ್ದಿರುವುದಿಲ್ಲ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ಪಾಟೀಲ, ಸಿಬ್ಬಂದಿಗಳಾದ ಮಲಕಪ್ಪ ಪೂಜಾರ, ಜಗದೀಶ, ಹನುಮಂತಪ್ಪ, ನಾಗರಾಜ, ಮಹ್ಮದಲಿ ಉಪಸ್ಥಿತರಿದ್ದರು.