ಬೇಟಿ ಸರ್ಕಲ್‍ನಲ್ಲಿ ಹೆಣ್ಣು ಮಗುವಿನ ಹುಟ್ಟು ಹಬ್ಬ ಆಚರಣೆ

ಬೀದರ:ಮಾ.23: ಕೇಂದ್ರ ಬಸ್ ನಿಲ್ದಾಣದ ಹಿಂದಿರುವ ತಾಯಿ ಮಗುವಿನ ವೃತ್ತದಲ್ಲಿ ಶ್ರೀ ರೇಣುಕ ಮಾಹೇಶ್ವರ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಹಾಗೂ ಬ್ಯಾಂಕ್‍ನ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪೂರ ಅವರ ಹೆಣ್ಣು ಮಗು ಕು.ಸನ್ನಿಧಿ ಅವಳ ಚೊಚ್ಚಲ ಹುಟ್ಟು ಹಬ್ಬ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಐದು ಜನ ತಾಯಂದಿರು ಹಾಗೂ ಐದು ಜನ ಹೆಣ್ಣು ಮಕ್ಕಳು ಸೇರಿ ಸರ್ಕಲ್‍ನಲ್ಲಿ ಕೇಕ್ ಕತ್ತರಿಸಿ ವಿಭಿನ್ನ ರೀತಿಯಲ್ಲಿ ಜನ್ಮದಿನ ಜರುಗಿತು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಫ್ಯುಚರ್ ಕೀಡ್ಸ್ ಶಾಲೆಯ ಸಹ ಶಿಕ್ಷಕಿ ಸತ್ಯವತಿ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಇದು ಮೊಟ್ಟ ಮೊದಲ ತಾಯಿ ಹಾಗೂ ಮಗುವಿನ ವೃತ್ತವಾಗಿದ್ದು ಇಂದಿನ ದಿನಮಾನಗಳಲ್ಲಿ ಹೆಣ್ಣು ಶಿಶು ಬಾಲ್ಯದಿಂದ ವೃದ್ದಾವಸ್ತೆ ವರೆಗೆ ಆಕೆ ಅನುಭವಿಸುತ್ತಿರುವ ಯಾತನೆ ಕೊನೆಗಾಣಿಸಲು ಈ ಹುಟ್ಟು ಹಬ್ಬದ ಮೂಲಕ ಹೊಸ ಸಂದೇಶ ರವಾನೆಯಾಗಲಿದ್ದು, ಜಿಲ್ಲೆಯ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಗೌರವಿಸಿ ಈ ವೃತ್ತದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ಸಮಾಜಕ್ಕೆ ಹೊಸ ಸಂದೇಶ ರವಾನಿಸಬೇಕೆಂದು ಕರೆ ನೀಡಿದರು.

ಮತ್ತೋರ್ವ ಶಿಕ್ಷಕಿ ಶರ್ಮಿಳಾ ರಾಹುಲ ಮಾತನಾಡಿ, ಹೆಣ್ಣು ಮಕ್ಕಳು ಮನೆಗಷ್ಟೇ ಅಲ್ಲ ಇಡೀ ಸಮಾಜಕ್ಕೆ ಅಮುಲ್ಯ ಆಸ್ತಿ. ನಮ್ಮ ನಿಜವಾದ ಸಂಪತ್ತಾದ ಹೆಣ್ಣು ಮಕ್ಕಳನ್ನು ಗೌರವಿಸಲು ಪ್ರತಿಯೊಬ್ಬರು ಮುಂದೆ ಬರಬೇಕು, ತನಗೆ ಮೂರು ಜನ ಹೆಣ್ಣು ಮಕ್ಕಳಿದ್ದು ಅವರೆ ನಮ್ಮ ಕುಟುಂಬದ ಗಂಡಿನ ಸ್ಥಾನ ತುಂಬುವರಿದ್ದಾರೆ. ಆದ್ದರಿಂದ ಎಲ್ಲರು ಹೆಣ್ಣು ಭ್ರೂಣ ಹತ್ಯೆಯಿಂದ ಹೊರ ಬರಬೇಕೆಂದು ತಿಳಿಸಿದರು.

ಕರ್ನಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್‍ನಲ್ಲಿ ತಾಯಿ ಹಾಗೂ ಮಗುವಿನ ಇದೇ ಮೊಟ್ಟ ಮೊದಲ ವೃತ್ತವಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಜಿಯವರು ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದ ಸುಕನ್ಯಾ ಸಮೃದ್ಧಿಯಂತಹ ವಿಶೇಷ ಯೋಜನೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆಗಳನ್ನು ಜಿಲ್ಲೆಯ ಜನರು ಸದುಪಯೋಗ ಪಡಿಸಿಕೊಳ್ಳಬೇಕು. ತಮ್ಮ ಮಕ್ಕಳ ಆತ್ಮ ಸಮ್ಮಾನಕ್ಕಾಗಿ ಹೋಟಲಗಳಲ್ಲಿ ಸಾವಿರಗಟ್ಟಲೇ ಹಣ ವ್ಯಯ ಮಾಡುವ ಬದಲು ಈ ವೃತ್ತದಲ್ಲಿ ಕೇಕ್ ಕತ್ತರಿಸಿ ನವೀನ ಸಂದೇಶ ಸಾರಬೇಕೆಂದು ಕರೆ ನೀಡಿದರು.

ಶ್ರೀ ರೇಣುಕ ಮಾಹೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪೂರ ಮಾತನಾಡಿ, ನನ್ನ ಮಗಳ ಹುಟ್ಟು ಹಬ್ಬ ಮಂದಿರದಲ್ಲೋ ಅಥವಾ ಹೋಟಲ್‍ನಲ್ಲಿ ಆಚರಿಸದೆ, ಹೆಣ್ಣು ಮಕ್ಕಳಿರುವ ಐದು ಜನ ತಾಯಿಂದಿರ ಹಾಗೂ ಅವರ ಹೆಣ್ಣು ಮಕ್ಕಳ ಕೈಯಿಂದ ಕೇಕ್ ಕತ್ತರಿಸಿ ಮಗುವಿನ ವಿಶಿಷ್ಟ ಹುಟ್ಟು ಹಬ್ಬ ಆಚರಿಸಿರುವುದು ನಮಗೆ ತುಂಬ ಸಂತೋಷ ತಂದಿದ್ದು, ಈ ಮಾದರಿ ಎಲ್ಲರು ಅನುಕರಿಸಿ ಮಹಿಳೆಯರನ್ನು ಗೌರವಿಸುವ ಹಾಗೂ ಸಂರಕ್ಷಿಸುವ ಕೆಲಸ ನಿರಂತರ ನಡೆಯಲಿ ಎಂದರು.

ಪತ್ರಕರ್ತ ಬಸಯ್ಯ ಸ್ವಾಮಿ ಕಮಠಾಣಾ, ರಾಹುಲ ಹರ್ಸೂರ್, ಆಶ್ವಿನಿ, ಶಿವಕುಮಾರ ರ್ಯಾವಪನೋರ್, ಪರಮೇಶ್ವರ ಬಿರಾದಾರ, ವೆಂಕಟೇಶ ಕುಲಕರ್ಣಿ, ಬಸಯ್ಯ ಸ್ವಾಮಿ ಚಿಟ್ಟಾ, ಜ್ಯೋತಿ ರೇವಣಸಿದ್ದಯ್ಯ ಮಠಪತಿ, ಪುಟಾಣಿಗಳಾದ ಕು.ಭೂವನೇಶ್ವರಿ, ಕು.ಭಕ್ತಿ, ಕು.ಶೃದ್ದಾ ಸೇರಿದಂತೆ ಇತರೆ ಹೆಣ್ಣು ಮಕ್ಕಳು ಉಪಸ್ಥಿತರಿದ್ದರು.