ಬೇಗ ಲಸಿಕೆ ಕೊಡಿ ಇಲ್ಲವೇ ಅಧಿಕಾರ ಬಿಡಿ ಎಂದ ಕರವೇ

ಬಳ್ಳಾರಿ, ಜೂ.10: ರಾಜ್ಯದ ಪ್ರತಿಯೊಬ್ಬರಿಗೂ ಈ ಅಂತ್ಯದೊಳಗೆ ಮೊದಲನೇ ಡೋಜ್ ಮತ್ತು ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ಲಸಿಕೆಯನ್ನು ನೀಡಬೇಕು. ಇಲ್ಲವೇ ಅಧಿಕಾರಬಿಡಿ ಎಂದು ಇಂದು ನಗರದಲ್ಲಿನ ತಮ್ಮ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು
“ಬೇಗ ಲಸಿಕೆ ಕೊಡಿ””ಇಲ್ಲವೇ ಅಧಿಕಾರ ಬಿಡಿ”ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಸೂಚನೆಯಂತೆ ರಾಜ್ಯದ ಸಮಸ್ತ ಜನತೆಯ ಹಕ್ಕೊತ್ತಾಯವನ್ನು ಮಂಡಿಸಿ ಪ್ರತಿಭಟನೆ ನಡೆಸಲಾಯಿತು.
ಚುನಾವಣಾ ಬೂತ್‍ಗಳು, ಪೊಲೀಯೋ ವ್ಯಾಕ್ಸಿನ್ ಭೂತ್ ರಚನೆ ಮಾಡುವುದು, ಹಾಗೆ ನಾಗರಿಕರು ನಡೆದು ಹೋಗುವಷ್ಟು ಹತ್ತಿರದಲ್ಲೇ ಲಸಿಕೆ ಬೂತ್ ಸ್ಥಾಪಿಸಿ, ಜನರನ್ನು ಕಾಯಿಸದೇ, ಸತಾಯಿಸದೆ ಲಸಿಕೆಗಳನ್ನು ನೀಡಬೇಕು ಎಂದು ಆಗ್ರಹಿಸಲಾಯಿತು.
ಕಳೆದ ವರ್ಷದ ಮಾರ್ಚ್‍ನಿಂದ ಈ ವರೆಗೆ ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ವಿಧಿಸುತ್ತ ಬಂದಿರುವ ಲಾಕ್‍ಡೌನ್ ಮೊದಲಾದ ಕ್ರಮಗಳಿಂದಾಗಿ ಬಡತನ ನಿರುದ್ಯೋಗ ಹೆಚ್ಚುತ್ತಿದೆ. ಸರ್ಕಾರದ ಬೇಜವಾಬ್ದಾರಿ ನೀತಿಗಳಿಂದಾಗಿ ದೇಶದ ಶೇ.5ರಷ್ಟು ನಾಗರೀಕರಿಗೂ ಎರಡೂ ಡೋಸ್ ಲಸಿಕೆ ನೀಡಲಾಗಿಲ್ಲ. ಲಸಿಕೆ ನೀಡುವ ಬೇಜವಾಬ್ದಾರಿ ತಾರತಮ್ಯದ ಕುರಿತು ಈಗಾಗಲೇ ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ಆಕ್ಷೇಪಣೆಗಳನ್ನು ಎತ್ತಿದೆ. ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳೊಳಗೆ ಅಪ್ಪಳಿಸದೆ ಎಂದು ತಜ್ಞರು, ವಿಜ್ಞಾನಿಗಳು ಈಗಾಗಲೇ ಅಂದಾಜು ಮಾಡಿದ್ದಾರೆ. ಅಷ್ಟರೊಳಗೆ ಲಸಿಕೆ ಪಡೆಯದವರ ಜೀವಗಳು ಅಪಾಯಕ್ಕೆ ಸಿಲುಕಲಿವೆ ಇದ್ದಕ್ಕೆ ಅವಕಾಶ ನೀಡಕೂಡದು.
ಖಾಸಗಿ ಆಸ್ಪತ್ರೆಗಳ ದುಬಾರಿ ಬೆಲೆಯ ಲಸಿಕೆ ದಂದೆ ನಿಲ್ಲಿಸಬೇಕು. ಪ್ರತಿಯೊಬ್ಬ ಡೋಸ್ ಲಸಿಕೆಯನ್ನೂ ಸರ್ಕಾರವೇ ನೀಡಬೇಕು ಇದು ಸಾಧ್ಯವಿಲ್ಲ ಎನ್ನುವುದಾದರೆ ಈ ಸರ್ಕಾರಗಳು ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್, ಉಪಾಧ್ಯಕ್ಷ ಶಿವಕುಮಾರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಶಿಕುಮಾರ್, ಶಬರಿ ರವಿ, ಶಂಕರಬಂಡೆ ರಾಜೇಶ್, ಚಾನಾಳ್ ಮಲ್ಲಿಕಾರ್ಜುನ, ಶಿವು, ರಘು, ಮೊದಲಾದವರು ಇದ್ದರು.