ಬೇಕಾಬಿಟ್ಟಿ ವಿದ್ಯುತ್ ಪೂರೈಕೆ ಕೆಪಿಟಿಸಿಎಲ್ ಕಚೇರಿಗೆ ರೈತರಿಂದ ಮುತ್ತಿಗೆ, ಧರಣಿ

ತಾಳಿಕೋಟೆ:ಆ.29: ತಾಲೂಕಿನ ಕೆಲವು ಗ್ರಾಮಗಳಿಗೆ ತಾಳಿಕೋಟೆ ಕೆಪಿಟಿಸಿಎಲ್ ಕಚೇರಿ 110ದಿಂದ ಪೂರೈಸಲಾಗುತ್ತಿರುವ ವಿದ್ಯುತ್‍ನ್ನು ಸಮಯ ನಿಗಧಿ ಪಡಿಸದೇ ಪದೇ ಪದೇ ಲೋಡ್ ಶೆಡಿಂಗ್ ಮಾಡುತ್ತಾ ವಿದ್ಯುತ್ ಪೂರೈಸುತ್ತಿರುವದನ್ನು ಖಂಡಿಸಿ ಸುಮಾರು 9 ಗ್ರಾಮಗಳಿಂದ ಆಗಮಿಸಿದ ನೂರಾರು ರೈತರು ಕೆಪಿಟಿಸಿಎಲ್ ಕಚೇರಿಗೆ ದೀಡಿರನೇ ಆಗಮಿಸಿ ಮುತ್ತಿಗೆ ಹಾಕುವದರೊಂದಿಗೆ ಧರಣಿ ನಡೆಸಿದ ಘಟನೆ ಸೋಮವಾರ ನಸುಕಿನ ಜಾವ ನಡೆದಿದೆ.

ತಾಲೂಕಿನ ನಾವದಗಿ, ಲಕ್ಕುಂಡಿ, ಬ್ಯಾಲ್ಯಳ, ಶಳ್ಳಗಿ, ಕಾರನೂರ, ಕೊಡಗಾನೂರ, ಗುಂಡಕನಾಳ, ಬ.ಸಾಲವಾಡಗಿ, ಬಂಡೆಪ್ಪನಹಳ್ಳಿ, ಗ್ರಾಮಗಳಿಗೆ ತಾಳಿಕೋಟೆ 110 ಕೆವಿ ವಿದ್ಯುತ್ ಘಟಕದಿಂದ ಪೂರೈಸಲಾಗುತ್ತಿರುವ ವಿಧ್ಯುತ್ ರಾತ್ರಿ 3 ಗಂಟೆಯಿಂದ ಬೆಳಿಗ್ಗೆ 10 ಘಂಟೆಯವರೆಗೆ ಪೂರೈಸಲಾಗುತ್ತದೆ ಇದರ ನಡುವೆ ಪದೇ ಪದೇ ವಿದ್ಯುತ್ ಲೋಡ್ ಶೆಡಿಂಗ್ ಮಾಡುತ್ತಿರುವದಿಂದ ಸುಮಾರು ನೂರಾರು ರೈತರ ಪಂಪಸೇಟ್‍ಗಳು ಸುಟ್ಟು ಹೋಗಿವೆ ರೈತರ ಪಂಪಸೇಟ್‍ಗಳಿಗೆ ವಿದ್ಯುತ್ ಪೂರೈಕೆಗೆ ಸಮಯ ನಿಗಧಿ ಪಡಿಸದೇ ಅಧಿಕಾರಿಗಳು ಮನಸ್ಸಿಗೆ ಬಂದಂತೆ ವಿದ್ಯುತ್ ಒದಗಿಸುತ್ತಿದ್ದಾರೆಂದು ಮುತ್ತಿಗೆ ಹಾಕಿ ಧರಣಿ ನಡೆಸಿದ ರೈತರು ಆರೋಪಿಸಿದರು.

ನಸುಕಿನ ಜಾವ 3 ಗಂಟೆಯ ಸುಮಾರಿಗೆ ಆಗಮಿಸಿದ ನೂರಾರು ರೈತರು ಕೆಪಿಟಿಸಿಎಲ್ 110 ಕೆ.ವಿ.ವಿದ್ಯುತ್ ಘಟಕದಿಂದ ಪೂರೈಸಲಾಗುತ್ತಿರುವ ವಿದ್ಯುತ್‍ನ್ನು ಸಂಪೂರ್ಣ ಸ್ಥಗಿತಗೊಳಿಸಲು ಅಲ್ಲಿಯ ಸಿಬ್ಬಂದಿಗೆ ಸೂಚಿಸುವದರೊಂದಿಗೆ ಅಲ್ಲಿಯ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಸರಿಯಾದ ಮಳೆ ಇಲ್ಲದ ಕಾರಣದಿಂದ ಜಮೀನುಗಳಲ್ಲಿ ಬಿತ್ತನೆ ಮಾಡಿದ ಎಲ್ಲ ಬೆಳೆಯು ಒಣಗಲು ಪ್ರಾರಂಬಿಸಿದೆ ಬೋರವ್ಹೇಲ್ ಇನ್ನಿತರ ನೀರಿನ ಮೂಲಗಳಿಂದ ಜಮೀನುಗಳಿಗೆ ನೀರು ಹರಿಸಬೇಕೆಂದರೆ ವಿದ್ಯುತ್ ಕೂಡಾ ಸರಿಯಾಗಿ ಅಧಿಕಾರಿಗಳು ಪೂರೈಸುತ್ತಿಲ್ಲಾವೆಂದು ಜಮಾವಣೆಗೊಂಡ ರೈತರು ಆರೋಪಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಪಿಟಿಸಿಎಲ್ ಎಇಇ ಅವರು ರೈತರಿಗೆ ಸಮರ್ಪಕವಾದ ಉತ್ತರ ನೀಡದೇ ಸಮಯಜಾಯಿಸಲು ಯತ್ನ ನಡೆಸಿದರು ಆದರೂ ಅದಕ್ಕೆ ರೈತರು ಜಗ್ಗದೇ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಪೊಲೀಸ್ ಅಧಿಕಾರಿ ಪಿಎಸ್‍ಐ ರಾಮನಗೌಡ ಸಂಕನಾಳ ಅವರು ಕೆಪಿಟಿಸಿಎಲ್ ಮತ್ತು ರೈತರ ಮಧ್ಯ ಮಧ್ಯಸ್ತಿಕೆ ವಹಿಸಿ ಸಂದಾನ ನಡೆಸಿ ಎರಡುದಿನದಲ್ಲಿ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಿಕೊಡುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ವಿಷಯವನ್ನು ತಿಳಿಹೇಳಿ ಸರಿಪಡಿಸುವದಾಗಿ ಧರಣಿ ನಿರತ ರೈತರನ್ನು ಸಮಾದಾನ ಪಡಿಸಿದರು. ಪೊಲೀಸ್ ಅಧಿಕಾರಿಗೆ ಬೆಲೆ ನೀಡಿದ ರೈತರು ಎರಡು ದಿನಗಳಲ್ಲಿ ವಿದ್ಯುತ್ ಸಮಸ್ಯೆ ಸರಿಪಡಿಸದಿದ್ದರೆ ಮತ್ತೇ ಕೆಪಿಟಿಸಿಎಲ್ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸುತ್ತೇವೆಂದು ವಿಷಯ ಪ್ರಸ್ತಾಪಿಸಿ ತೆರಳಿದರು.

  ಈ ಸಮಯದಲ್ಲಿ ರೈತ ಮುಖಂಡರುಗಳಾದ ರುದ್ರಸ್ವಾಮಿ ಗಣಾಚಾರಿ, ಭೀಮನಗೌಡ ಸಲಗುಂದಿ, ಚಿನ್ನಪ್ಪ ಮುಡಲಗೇರಿ, ಭೀಮನಗೌಡ ವಣಕ್ಯಾಳ, ರಾಜುಗೌಡ ಸಂಕನಾಳ, ಶರಣಗೌಡ ಬಲಕಲ್ಲ, ಸಂಗಣ್ಣ ದೇಸಾಯಿ, ಬಾಪು ಇಬ್ರಾಹಿಂಪೂರ, ನಿಂಗಣ್ಣ ಬಡಿಗೇರ, ರಾಜುಗೌಡ ಮೇಟಿ, ಸಿದ್ದಯ್ಯ ಹಿರೇಮಠ, ಶಾಂತಗೌಡ ಬಿರಾದಾರ, ರಾಜು ಐನಾಪೂರ, ಮಲ್ಲನಗೌಡ ಮೇಟಿ, ಚಂದ್ರಶೇಖರ ಪಾಟೀಲ, ಶರಣಗೌಡ ಬಿರಾದಾರ, ಶರಣಪ್ಪ ಮುರಾಳ, ಪ್ರಶಾಂತ ಹೇಳವರ, ಶಾಂತಗೌಡ ಗಬಸಾವಳಗಿ, ದಸ್ತಗೀರಸಾಬ ಕೇಂಭಾವಿ ಒಳಗೊಂಡು ನೂರಾರು ರೈತರು ಇದ್ದರು.