ಬೇಕಾಬಿಟ್ಟಿ ಓಡಾಟಕ್ಕೆ ಬ್ರೇಕ್ ಹಾಕಲು ಕೊರೋನಾ ಟೆಸ್ಟ್ ಗೆ ಮುಂದಾದ ಪೊಲೀಸರು

ಕೂಡ್ಲಿಗಿ.ಜೂ. 11:- ಕೊರೋನಾ ಸೋಂಕು ವ್ಯಾಪಕವಾಗಿದ್ದರೂ ಜನರು ಮಾತ್ರ ಲಾಕ್ಡೌನ್ ಸಮಯದಲ್ಲೂ ಬೈಕ್ ನಲ್ಲಿ ತಿರುಗಾಡುವುದು ನಿಂತಿಲ್ಲ.ಹೀಗಾಗಿಯೇ, ಸರ್ಕಾರ ಘೋಷಿಸಿದ ಲಾಕ್ಡೌನ್ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದವರಿಗೆ ಈವರೆಗೆ ಎಚ್ವರಿಕೆ ನೀಡುತ್ತಾ ದಂಡ ವಸೂಲಿ ಮಾಡಿ ಬಿಡುತ್ತಿದ್ದ ಕಾನಹೊಸಹಳ್ಳಿ ಪೊಲೀಸರು, ಗುರುವಾರ ರಸ್ತೆ ಪಕ್ಕದಲ್ಲೇ ಆರೋಗ್ಯಇಲಾಖೆಯಿಂದ ಕೊರೋನಾ ಟೆಸ್ಟ್ ಮಾಡಿಸುವ ಮೂಲಕ ಲಾಕ್ ಡೌನ್ ಬಿಸಿ ಮುಟ್ಟಿಸಿದರು.
ಸುಖಾಸುಮ್ಮನೆ ಮನೆಯಿಂದ ಹೊರಬಂದು ಓಡಾಡುವ ಜನರು ಅಯ್ಯೋ.. ಪೊಲೀಸರು ನಮಗೂ ಕೊರೋನಾ ಟೆಸ್ಟ್ ಮಾಡಿಸಬಹುದು ಎಂದು ಬೇರೆ ಮಾರ್ಗಗಳ ಮೂಲಕ ತಪ್ಪಿಸಿಕೊಂಡು ಮನೆ ಸೇರಿಕೊಳ್ಳುತ್ತಿರುವುದೂ ಕಂಡು ಬಂತು.
ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ ಐಗಳಾದ ತಿಮ್ಮಣ್ಣ ಚಾಮನೂರು ಮತ್ತು ಅಪರಾಧ ವಿಭಾಗದ ಪಿಎಸ್ಐ ನಾಗರತ್ನಮ್ಮ ಇವರ ನೇತೃತ್ವದ ಪೊಲೀಸರ ತಂಡವು ಲಾಕ್ಡೌನ್ ನಿಯಮ ಉಲ್ಲಂಘಿಸಿ ಓಡಾಡುವವರನ್ನು ತಡೆದು ಆರೋಗ್ಯ ಇಲಾಖೆ ಸಿಬ್ಬಂದಿ ಸೋಮಶೇಖರ ಮೂಲಕ ಕಡ್ಡಾಯವಾಗಿ ಕರೋನಾ ಟೆಸ್ಟ್ ಮಾಡಿಸುತ್ತಿದ್ದ ದೃಶ್ಯ ಕಂಡು ಬಂತು.
ಇನ್ಮುಂದೆ ಲಾಕ್ಡೌನ್ ಮುಗಿಯುವವರೆಗೂ ಯಾರಾದರೂ ಬೈಕ್ ಸೇರಿ ಇತರೆ ವಾಹನಗಳಲ್ಲಿ ಅನಾವಶ್ಯಕವಾಗಿ ತಿರುಗಾಡಿದರೆ ಕೊರೋನಾ ಟೆಸ್ಟ್ ಮಾಡಿಸಲಾಗುವುದು ಎಂದು ಪಿಎಸ್ ಐ ತಿಮ್ಮಣ್ಣ ಚಾಮನೂರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಇದ್ದರು.