ಬೇಕಾಬಿಟ್ಟಿಯಾಗಿ ತಿರುಗಾಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ

ಮಂಗಳೂರು, ಎ.೨೮- ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ೬ರಿಂದ ೧೦ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆದಾಗ್ಯೂ ತುರ್ತು ಆರೋಗ್ಯ ಸೇವೆ, ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮತ್ತು ಪರೀಕ್ಷೆಗಳಲ್ಲಿ ಹಾಜರಾಗಲು ಜಿಲ್ಲಾಡಳಿತವು ಪ್ರತ್ಯೇಕ ಪಾಸ್ ವ್ಯವಸ್ಥೆಯನ್ನು ಮಾಡಿಲ್ಲ. ಪೂರಕ ದಾಖಲೆಪತ್ರಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೧೪ ದಿನಗಳ ಕಾಲ ಕರ್ಫ್ಯೂ ಮಾರ್ಗಸೂಚಿಗಳು ಹಾಗೂ ನಿರ್ಬಂಧಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಲಿದೆ. ಅನುಮತಿ ನೀಡಿದ ಸೇವೆಗಳ ಹೊರತಾಗಿ ಇತರ ಎಲ್ಲಾ ವ್ಯವಹಾರಗಳು ಬಂದ್ ಆಗಲಿದೆ ಎಂದು ಸ್ಪಷ್ಟಪಡಿಸಿದರು. ಮೇ ೧೨ರವರೆಗೆ ಪ್ರತೀದಿನ ಬೆಳಗ್ಗೆ ೬ ಗಂಟೆಯಿಂದ ೧೦ ಗಂಟೆಯವರೆಗೆ ೪ ತಾಸುಗಳ ಕಾಲ ಆಹಾರ, ಹಾಲು, ದಿನಸಿ, ತರಕಾರಿ, ಮಾಂಸ, ಮೀನು, ಹಣ್ಣಿನ ಅಂಗಡಿಗಳು, ಪತ್ರಿಕೆ ಸ್ಟಾಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅದರಂತೆ ಆ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಬಳಿಕ ಅಂಗಡಿಮುಂಗಟ್ಟುಗಳ ಮಾಲಕರು ಸ್ವಯಂ ಮುಚ್ಚಬೇಕು. ಗ್ರಾಹಕರು ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ಪಡೆದುಕೊಳ್ಳಬೇಕು. ಬೇಕಾಬಿಟ್ಟಿಯಾಗಿ ತಿರುಗಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದ ಡಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಹೋಂ ಡೆಲಿವರಿ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಎರಡು ದಿನದೊಳಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
೧೪ ದಿನಗಳ ಕಾಲ ಸರಕಾರಿ ಮತ್ತು ಖಾಸಗಿ ಬಸ್‌ಗಳು, ಆಟೋ, ಟ್ಯಾಕ್ಸಿ ಸಹಿತ ಎಲ್ಲಾ ರೀತಿಯ ಸಂಚಾರ ವ್ಯವಸ್ಥೆಗಳು ಬಂದ್ ಆಗಲಿದೆ. ತುರ್ತು ಅಗತ್ಯವಿದ್ದರೆ ಮಾತ್ರ ಆಟೋ ರಿಕ್ಷಾ ಸಂಚಾರ, ಪರೀಕ್ಷೆಗಾಗಿ ವಿದ್ಯಾರ್ಥಿಗಳ ಪ್ರಯಾಣ, ಸರಕು ಸಾಗಾಟ, ರೈಲ್ವೆ, ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ತೆರಳಲು ಟ್ಯಾಕ್ಸಿ, ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿಯಿದೆ. ಆಹಾರ ಸಂಸ್ಕರಣೆ, ಸಂಬಂಧಿತ ಕೈಗಾರಿಕೆ, ಬ್ಯಾಂಕ್, ಎಟಿಎಂ, ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ, ದೂರಸಂಪರ್ಕ, ಇಂಟರ್ನೆಟ್ ಸೇವಾ ಪೂರೈಕೆದಾರ ಸಂಸ್ಥೆಗಳ ನೌಕರರ ವಾಹನ ಸಂಚಾರ, ಹೋಂ ಡೆಲಿವರಿ, ಇ ಕಾಮರ್ಸ್ ಸೇವೆ ಖಾಸಗಿ ಭದ್ರತಾ ಸೇವೆಗೆ ಅನುಮತಿ ನೀಡಲಾಗಿದೆ. ಎಲ್ಲಾ ನಿರ್ಮಾಣ ಚಟುವಟಿಕೆಗಳು, ಸಿವಿಲ್ ದುರಸ್ತಿ ಚಟುವಟಿಕೆಗೆ ಅನುಮತಿ ಇದೆ ಎಂದರು. ಅನುಮತಿಸಲಾದ ಸಂಚಾರ ವ್ಯವಸ್ಥೆ ಹೊರತುಪಡಿಸಿ ಇತರ ಎಲ್ಲಾ ಸಾರ್ವಜನಿಕ ಅಥವಾ ಖಾಸಗಿ ಬಸ್ಸುಗಳು, ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ತುರ್ತು ಸಂದರ್ಭ ಹೊರತುಪಡಿಸಿ ಪ್ರಯಾಣಿಕರ ವಾಹನಗಳ ಹೊರರಾಜ್ಯ ಹಾಗೂ ಹೊರಜಿಲ್ಲೆಗಳ ಸಂಚಾರಕ್ಕೂ ನಿರ್ಬಂಧವಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಮದುವೆ ಕಾರ್ಯಕ್ರಮಕ್ಕೆ ಈ ಮೊದಲಿನಂತೆಯೇ ಅನುಮತಿ ನೀಡಲಾಗಿದೆ. ಅಂದರೆ ಕೇವಲ ೫೦ ಜನರ ಮಿತಿಯೊಳಗೆ ಮದುವೆ ಕಾರ್ಯಕ್ರಮ ನೆರವೇರಿಸಬೇಕು. ಗ್ರಾಪಂ/ಸ್ಥಳೀಯಾಡಳಿತ / ಪಾಲಿಕೆಯಿಂದ ಮುಂಚಿತವಾಗಿ ೫೦ ಜನರ ಅನುಮತಿ ಪಡೆದಿರಬೇಕು. ಮದುವೆ ದಿನ ಅನುಮತಿ ಪತ್ರದ ಪ್ರತಿ, ಮದುವೆಯ ಆಮಂತ್ರಣ ಪತ್ರ ತೋರಿಸಿ ತೆರಳಲು ಅವಕಾಶವಿದೆ. ಅಂತ್ಯಕ್ರಿಯೆಯಲ್ಲಿ ಕೇವಲ ೫ ಮಂದಿ ಮಾತ್ರ ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮೇ ೧೨ರವರೆಗೆ ಜವುಳಿ ಮಳಿಗೆಗಳಲ್ಲದೆ ಸೆಲೂನ್ ಮತ್ತು ಬ್ಯೂಟಿಪಾರ್ಲರ್‌ಗಳು ಕೂಡ ಆಗಲಿದೆ. ಮೊದಲು ಹೊರಡಿಸಿದ ಮಾರ್ಗಸೂಚಿಯಲ್ಲಿ ಸೆಲೂನ್, ಬ್ಯೂಟಿಪಾರ್ಲರ್ ತೆರೆಯಲು ಅನುಮತಿ ನೀಡಲಾಗಿತ್ತು. ಇದೀಗ ಹೊಸ ಆದೇಶದಲ್ಲಿ ಅದರ ಬಗ್ಗೆ ಉಲ್ಲೇಖವಿಲ್ಲ. ಹಾಗಾಗಿ ಸೆಲೂನ್ ಮತ್ತು ಬ್ಯೂಟಿಪಾರ್ಲರ್‌ಗಳನ್ನು ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಆರೋಗ್ಯ ಇಲಾಖೆ ಸಹಿತ ವೆನ್ಲಾಕ್‌ನ ಡಿ ಗ್ರೂಪ್ ಮತ್ತಿತರ ಸಿಬ್ಬಂದಿ ವರ್ಗದ ಸಂಚಾರಕ್ಕೆ ಕೆಎಸ್ಸಾರ್ಟಿಸಿಯಿಂದ ಎರಡ್ಮೂರು ರೂಟ್‌ಗಳಲ್ಲಿ ಬಸ್‌ಗಳನ್ನು ಓಡಿಸಲಾಗುತ್ತದೆ. ಖಾಸಗಿ ಆಸ್ಪತ್ರೆಗಳು ತಮ್ಮ ಸಿಬ್ಬಂದಿಗೂ ಇಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಡಿಸಿ ಮನವಿ ಮಾಡಿದರು.