ಬೇಂದ್ರೆ ಕಾವ್ಯ ಸ್ಥಳೀಯತೆ ಮತ್ತು ವಿಶ್ವಾತ್ಮಕತೆಯ ಕೂಡು ಲೋಕ: ರಹಮತ್ ತರೀಕೆರೆ


ಧಾರವಾಡ ನ.02-ಭಾರತದಲ್ಲಿ ಕಬೀರನಿಂದ ಹಿಡಿದು ಸಂತ ಶಿಶುನಾಳ ಶರೀಫರವರೆಗೆ ಸಂತರು ಬಂದು ಹೋಗಿದ್ದಾರೆ. ಆರೂಢರು, ಸಿದ್ಧಾರೂಡರು, ಗರಗದ ಮಡಿವಾಳಜ್ಜರು, ನವಲಗುಂದ ನಾಗಲಿಂಗ ಅವಧೂತರಿದ್ದಾರೆ. ಯಾರನ್ನು ತತ್ವ ಪದಕಾರರು ಅಂತ ಕರೆಯುತ್ತೇವೆಯೋ ಅವರೆಲ್ಲರನ್ನೂ ಸ್ಥೂಲವಾಗಿ ಗುರು ಪಂಥೀಯರು ಎಂದು ಕರೆಯಬಹುದಾಗಿದೆ. ಬಂಗಾಲದ ಬಾವ್ಸೂಲ್, ಮಹಾರಾಷ್ಟ್ರದ ಮಹಾನುಭಾವ ಸೂಫಿಗಳು ಹಾಗೂ ಅವರು ಬರೆದ ಸಾಹಿತ್ಯವನ್ನೊಳಗೊಂಡ ಹಾಗೆ ಅದನ್ನು ಗುರು ಪಂಥ ಎಂಬುದೊಂದು ಸಂಕ್ಷಿಪ್ತವಾದ, ಅತ್ಯಂತ ಸ್ಥೂಲವಾದ ವ್ಯಾಖ್ಯೆ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ, ಚಿಂತಕ ಪ್ರೊ.ರಹಮತ್ ತರಿಕೆರೆ ಹೇಳಿದರು.
ಗುರು ಪರಂಪರೆಯಲ್ಲಿ ಎರಡು ಮಾರ್ಗಗಳಿವೆ. ಒಂದು ದ್ವೈತ ಧಾರೆಯಿದೆ, ಇನ್ನೊಂದು ಅದ್ವಯ ಧಾರೆಯಿದೆ. ಕರ್ನಾಟಕದಲ್ಲಿ ಅದ್ವಯ ಧಾರೆ, ಅಲ್ಲಮ ಮತ್ತು ನಮ್ಮ ಕೈವಾರದ ತಾತಯ್ಯನವರು ನಾರಾಯಣಪ್ಪನವರು. ಕರ್ನಾಟಕದ ಮಟ್ಟಿಗೆ ನಿಜಗುಣರಿಂದ ಹಿಡಿದು ಸಿದ್ಧಾರೂಡರವರೆಗೂ ಸುಮಾರು ಐದು ನೂರು ವರ್ಷಗಳಲ್ಲಿ ಮುನ್ನೂರಕ್ಕೂ ಹೆಚ್ಚು ಯೋಗಿಗಳು, ತತ್ತ್ವಪದಕಾರರು ಬರುತ್ತಾರೆ. ಇವರೆಲ್ಲರನ್ನೂ ಸ್ಥೂಲವಾಗಿ ನಾನು ಗುರುಪಂಥ ಎಂದು ಭಾವಿಸಿದ್ದೇನೆ.
ನಗರದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಏರ್ಪಡಿಸಿದ್ದ ವಾರ ವಾರ ಬೇಂದ್ರೆ ವೆಬಿನಾರ್‍ನ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಬೇಂದ್ರೆ ಮತ್ತು ಗುರು ಪರಂಪರೆ' ವಿಷಯದ ಕುರಿತು ಪ್ರೊ.ರಹಮತ್ ತರಿಕೆರೆ ಮಾತನಾಡಿದರು. ಬೇಂದ್ರೆಯವರನ್ನು ನಾವು, ಒಬ್ಬ ಸ್ಥಳೀಯ ಕವಿ, ದೇಶಿಯತೆಯಲ್ಲಿ ಬೇರುಬಿಟ್ಟ ಕವಿ, ತನ್ನ ಪರಿಸರದ ಎಲ್ಲ ಪಂಥಗಳು, ದರ್ಶನಗಳ ಜೊತೆಗೆ ಅನುಸಂಧಾನ ಮಾಡಿದ ಕವಿ ಎಂದು ಕರೀತಾ ಅವರಿಗಿರುವ ಬೇರೆ ಬೇರೆ ಆಯಾಮಗಳನ್ನು ನಾವು ಕುಬ್ಜ ಮಾಡುತ್ತಿದ್ದೇವೆ ಅಥವಾ ಅವರನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಆಗತಾ ಇಲ್ವಾ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡುತ್ತಿದೆ. ಬೇಂದ್ರೆಯವರು ಮತ್ತು ಗುರುಪರಂಪರೆಯೊಂದಿಗೆ ಯಾವ ಬಗೆಯ ಅನುಸಂಧಾನ ಮಾಡಿದರು, ಬೇಂದ್ರೆಯವರು ಯಾವ ಬಗೆಯ ಗುರು ಮಾರ್ಗಿ ಕವಿಗಳಿಗೆ, ಅನುಭಾವಿಗಳ ಜಗತ್ತಿನ ಸಂಪರ್ಕ ಇಟ್ಟುಕೊಂಡಿದ್ದರು ಎಂಬುದರ ಕುರಿತು ನಾವಿಂದು ಗಮನ ಹರಿಸಬೇಕಾಗಿದೆ. ಬೇಂದ್ರೆ ಮತ್ತು ಶಂಭಾ ಧಾರವಾಡದ ಒಂದೇ ಊರಿನಲ್ಲಿರುವಂತ ಬಹಳ ದೊಡ್ಡ ಲೇಖಕರಾಗಿದ್ದಾರೂ ಸಹ, ಗುರು ಪರಂಪರೆಗಳ ವಿಚಾರದಲ್ಲಿ ತಾಳಿದ ಇವರಿಬ್ಬರ ತಿಳುವಳಿಕೆ, ಧೋರಣೆ ಭಿನ್ನವಾಗಿತ್ತು. ಬೇಂದ್ರೆಯವರು ಸ್ಥಳೀಯ ಪರಿಸರದ, ಸ್ಥಳೀಯ ಸಂಸ್ಕøತಿಯ, ಸ್ಥಳೀಯ ದರ್ಶನಗಳಲ್ಲಿ ಆಳವಾಗಿ ಬೇರು ಬಿಟ್ಟಂಥವರು, ಉತ್ತರ ಕರ್ನಾಟಕದ ಕೃಷಿ ಸಂಸ್ಕøತಿ, ಹಬ್ಬಗಳು, ಆಚರಣೆಗಳ ಬಗ್ಗೆ, ಮೋಹರಂ ಬಗ್ಗೆಅಳ್ಳೊಳ್ಳಿ ಬವ್ವಾ ಒಮ್ಮೆ’ ಎನ್ನುವ ಪದ್ಯ ಬರೆಯುತ್ತಾರೆ, ಎಷ್ಟು ಆಳವಾಗಿ ಸ್ಥಳೀಯ ಸಂಸ್ಕøತಿ, ಪರಂಪರೆಯಲ್ಲಿ ಬೇರು ಬಿಟ್ಟಿದ್ದರೆಂದರೆ ಸ್ಥಳೀಯ ಆರೂಢ, ಅವಧೂತರ ಜೊತೆ ಬೇರು ಬಿಟ್ಟಿದ್ದರೆನೋ? ಎಂಬಂತೆ ಕಾಣುತ್ತದೆ ಎಂದು ಪ್ರೊ.ರಹಮತ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠರು ಬೇಂದ್ರೆಯವರ ನಾನು ಎಂಬ ಕವಿತೆಯಲ್ಲಿ ಅವರ ವಿಶ್ವಮಾನವ ದೃಷ್ಠಿಯನ್ನು ನಾವು ಕಾಣುತ್ತೇವೆ. ಬೇಂದ್ರೆಯವರ ಕವನಗಳು ಓದುಗರಿಗೆ ವಿಭಿನ್ನವಾದ ಒಳಾರ್ಥವನ್ನು ತೆರೆದಿಡಬಲ್ಲವಾಗಿವೆ. ಬೇಂದ್ರೆಯವರಿಗೆ ಮಾತು ಮತ್ತು ಮೌನ ಬಹಳ ಕುತುಹಲವಾದ ವಿಷಯಗಳಾಗಿದ್ದವು ಎಂದು ಹೇಳಿದರು.
ಆನಂದ ಝುಂಜರವಾಡ, ದೇವು ಪತ್ತಾರ, ಡಾ.ಕೆ.ಸಿ.ಶಿವಾರೆಡ್ಡಿ, ಡಾ.ವಿಕ್ರಂ ವಿಸಾಜಿ, ಡಾ.ಅಪ್ಪಗೆರೆ ಸೋಮಶೇಖರ, ಡಾ.ಮೃತ್ಯುಂಜಯ ರುಮಾಲೆ, ಡಾ.ಗೀತಾ ವಸಂತ, ಡಾ.ಹ.ವೆಂ.ಕಾಖಂಡಿಕಿ, ಡಾ.ಪ್ರಕಾಶ ಬಾಳಿಕಾಯಿ ಡಾ.ಎ.ಎಲ್.ದೇಸಾಯಿ, ಡಾ.ಪ್ರಭುರಾಜ ನಾಯಕ್, ಡಾ.ಮಮ್ತಾಜ್ ಬೇಗಂ, ಶಿವಾನಂದ ಯಾಳಗಿ, ಜಯತೀರ್ಥ ಜಹಗೀರದಾರ, ಸೇತುರಾಮ್ ಹುನಗುಂದ, ವಿಜಯಲಕ್ಷ್ಮೀ ದಾನರಡ್ಡಿ, ಚಂದ್ರಶೇಖರ ಹೆಗಡೆ, ಆನಂದ ಜಕ್ಕಣ್ಣವರ, ಮುಂತಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಪ್ರಕಾಶ ತಾಂತ್ರಿಕವಾಗಿ ನಿರ್ವಹಿಸಿದರು.