ಬೇಂದ್ರೆ ಕನ್ನಡ ಸಾಹಿತ್ಯಕ್ಕೆ ದಾರ್ಶನಿಕ ಕಾವ್ಯವನ್ನು ಕೊಟ್ಟವರು
(ಸಂಜೆವಾಣಿ ವಾರ್ತೆ)
ಬಳ್ಳಾರಿ , ಫೆ.01: ನೆಲದ ಕವಿ ಬೇಂದ್ರೆಯವರು ಕನ್ನಡ ಸಾಹಿತ್ಯಕ್ಕೆ ದಾರ್ಶನಿಕ ಕಾವ್ಯವನ್ನು ಕೊಟ್ಟವರು . ನಮ್ಮ ಭಾಷೆಗೆ ಕಸುವನ್ನು , ಜೀವವನ್ನು ತುಂಬಿದ ಅವರ ಬರೆವಣಿಗೆಯಲ್ಲಿ  ಆಧ್ಯಾತ್ಮ ಮತ್ತು ಜೀವನ ಪ್ರೇಮ ಹಾಸುಹೊಕ್ಕಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ನಗರದ ಸರಳಾದೇವಿ   ಕಾಲೇಜಿನಲ್ಲಿ  ಕನ್ನಡ ವಿಭಾಗದಿಙದ ಬುಧವಾರ ಆಯೋಜಿಸಿದ್ದ ‘ ಬೇಂದ್ರೆ  ಜನ್ಮದಿನಾಚರಣೆ ಹಾಗೂ ‘ ಬೇಂದ್ರೆ ಕಾವ್ಯದ ವಿಭಿನ್ನ ನೆಲೆಗಳು ‘ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.
ಕಾವ್ಯವನ್ನು ಬೇಂದ್ರೆ ಅನೇಕ ಪ್ರಯೋಗಗಳಿಗೆ ಒಡ್ಡಿ ಪ್ರತಿಮೆ , ರೂಪಕಗಳನ್ನು ಹೇರಳವಾಗಿ ಬಳಸಿಕೊಂಡವರು. ಕಾವ್ಯದಂತೆ ಬದುಕು ಕೂಡ ಪ್ರತಿಕ್ಷಣ ಸೃಜನಶೀಲವಾಗಬೇಕೆಂದು ಹಂಬಲಿಸಿದ್ದರು ಎಂದರು.
ವಿಶೇಷ ಉಪನ್ಯಾಸ ನೀಡಿದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ     ಚಾಂದ್ ಪಾಷಾ ಬೇಂದ್ರೆಯವರ ಹೆಸರೇ ಮಾಂತ್ರಿಕವಾದುದು. ಅವರು ಹೊಸಗನ್ನಡ ಕಾವ್ಯಕ್ಕೆ ಮಾನವೀಯ ಅಂತಃಕರಣ , ಹೊಸ ಆಲೋಚನಾ ಕ್ರಮ, ಸಾಮಾಜಿಕ ಎಚ್ಚರಿಕೆ, ವಿಶಿಷ್ಟ   ಕಣ್ಣೋಟವನ್ನು  ಕೊಟ್ಟವರು. ಉತ್ತರ ಕರ್ನಾಟಕದ ದೇಸಿ ಸಂವೇದನೆಯ ಜಾನಪದ ಸೊಗಡನ್ನು ಬಳಸಿಕೊಂಡು ಸಮೃದ್ಧವಾಗಿ ಅರಳಿದ ಅವರ ಸಾಹಿತ್ಯ ಬದುಕಿನ ಎಲ್ಲ ಚಹರೆಗಳನ್ನು ವಿಸ್ತರಿಸಿದೆ ಎಂದು ಬಣ್ಣಿಸಿದರು.
ಬೇಂದ್ರೆ ಅವರ ಕಾವ್ಯ ಪ್ರಧಾನವಾಗಿ ಜಾನಪದ ಲಯ , ಅನುಭಾವದ ತೀವ್ರತೆ , ಪ್ರಾಚೀನ ಸಾಹಿತ್ಯದ ಪ್ರೇರಣೆಗಳನ್ನು ಪಡೆದುಕೊಂಡು ಅರ್ಥಪೂರ್ಣವಾಗಿ ಪುನರ್ ಸೃಷ್ಟಿಸಿದೆ ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ . ಹೊನ್ನೂರಾಲಿ ಕವಿ ಬೇಂದ್ರೆಯವರು ಸಂಸ್ಕೃತಿ ಚಿಂತಕರಾದ ಶಂಭಾ ಜೋಶಿ ಅವರ ಜೊತೆಗೆ ಅನೇಕ  ಸೈದ್ಧಾಂತಿಕ ಸಂಘರ್ಷಗಳನ್ನು  ಎದುರಿಸಿದ್ದರು.  ಬದುಕಿನುದ್ದಕ್ಕೂ ನೋವು, ಯಾತನೆಗಳನ್ನು ಉಂಡು ಸಾಹಿತ್ಯ ಪ್ರೇಮಿಗಳಿಗೆ ಕಾವ್ಯದ ನಾದಮಯತೆಯ ಗುಂಗನ್ನು ಹಿಡಿಸಿದವರು. ಅವರು ಕನ್ನಡ ಕಾವ್ಯದ ನೈಜ ಸಂಪ್ರದಾಯವನ್ನು ನಿರ್ಮಿಸಿದ ಶಬ್ದ ಗಾರುಡಿಗ  ಎಂದರು.
ಪ್ರಸ್ತಾವಿಕ ಮಾತುಗಳನ್ನು ನುಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ, ನವೋದಯ ಸಂದರ್ಭದಲ್ಲಿ ಅವರು ರಚಿಸಿದ ಭಾವಗೀತೆಗಳು ಕನ್ನಡ ಕಾವ್ಯ ಲೋಕದಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಟಿಸಿವೆ ಅವರ ಕಾವ್ಯ ಪದ್ಧತಿಯನ್ನು ಹೊಸ ತಲೆಮಾರಿನ ಬರೆಹಗಾರರು ಅನುಸರಿಸಬೇಕಾದ ಅಗತ್ಯವಿದೆ ಎಂದರು.
ಸ್ವಾಗತವನ್ನು ಅಧ್ಯಾಪಕರಾದ ಎಂ. ಎನ್.ಪ್ರವೀಣಕುಮಾರ ಮಾಡಿದರು. ರಾಮಸ್ವಾಮಿ ನಿರ್ವಹಿಸಿದರು. ಲಿಂಗಪ್ಪ ಅವರ ವಂದನಾಪಣೆಯೊಂದಿಗೆ ಮುಕ್ತಾಯವಾಯಿತು.