ಬೇಂದ್ರೆಯವರದು ವಿರಾಟ ಪ್ರತಿಭೆ : ಪ್ರೊ.ಪಟ್ಟಣಶೆಟ್ಟಿ

ಧಾರವಾಡ ಜ.14-“ಬೇಂದ್ರೆಯವರದು ವಿರಾಟ ಪ್ರತಿಭೆ. ಅವರದು ದಣಿವರಿಯದ, ಸೃಜನಾತ್ಮಕ ಬರವಣಿಗೆ. 1427 ಕವನಗಳನ್ನು ಬರೆದ ದೈತ್ಯ ಪ್ರತಿಭೆ ವರಕವಿ ಬೇಂದ್ರೆ. ಬೇಂದ್ರೆ ಜ್ಞಾನಪೀಠ ಪ್ರಶಸ್ತಿಗೂ ಮೀರಿದ ಅಗಾಧ ಪ್ರತಿಭೆ. ಆದರೂ ಅವರಿಗೆ ಜ್ಞಾನಪೀಠವನ್ನು ನೀಡುವಾಗ ಹೋಳಾಗಿ ನೀಡಿದ್ದು ಬಹಳ ಖೇದದ ಸಂಗತಿ. ಬೇಂದ್ರೆ ನಾಡನ್ನು ಮೀರಿ, ವಿಶ್ವವ್ಯಾಪಿಯಾಗಿ ಬೆಳೆದದ್ದು ಇತಿಹಾಸವೆಂದು ಹಿರಿಯ ಸಾಹಿತಿಗಳಾದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನ, ಯುವಕವಿ ದಿನ ಹಾಗೂ ಡಾ.ದ.ರಾ.ಬೇಂದ್ರೆಯವರ ಪುತ್ರ ರಾಮಚಂದ್ರ ದತ್ತಾತ್ರೇಯ ಬೇಂದ್ರೆಯವರ ಸ್ಮರಣೆಯಲ್ಲಿ “ಕವನ ಸಂಕ್ರಾಂತಿ” ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಮಾಲತಿ ಪಟ್ಟಣಶೆಟ್ಟಿಯವರು ಮುಂದುವರೆದು ಮಾತನಾಡುತ್ತ ಕವನ ರಚನೆಗೆ ಯಾವ ನಿರ್ಬಂಧವೂ ಇಲ್ಲ. ಯಾವುದೇ ಕಟ್ಟು ಪಾಡುಗಳಿಗೆ ಜೋತುಬಿದ್ದು ಕವನ ರಚಿಸುವ ಅವಶ್ಯಕತೆ ಇಲ್ಲ. ಸಂವೇದನಶೀಲ ಮನಸ್ಸು, ಮುಗ್ಧತೆ, ಕಲ್ಪನಾಶಕ್ತಿ, ಶಬ್ಧ ಭಂಡಾರದ ಮೂಲಕ ಉತ್ಕøಷ್ಟ ಕಾವ್ಯ ರಚಿಸಲು ಸಾಧ್ಯ. ಅದಕ್ಕಾಗಿ ಶಿಖರಪ್ರಾಯವಾದ ಮನಸ್ಸನ್ನ ಹದಗೊಳಿಸಿ, ಕಾವ್ಯ ರಚಿಸುವಂತಾಗಬೇಕು. ಸತತ ಅಭ್ಯಾಸದ ಮೂಲಕ ಸ್ಫೂರ್ತಿಗೊಂಡು ಕಾವ್ಯ ರಚಿಸುವಲ್ಲಿ ತೊಡಗಿಕೊಳ್ಳಲು ಯುವ ಕವಿಗಳಿಗೆ ಕಿವಿ ಮಾತು ಹೇಳಿದರು.
ಬೇಂದ್ರೆ ಟ್ರಸ್ಟ್ ಅಧ್ಯಕ್ಷರಾದ ಡಾ.ಡಿ.ಎಂ.ಹಿರೇಮಠ ಮಾತನಾಡುತ್ತ ಸಂಕ್ರಾಂತಿ ಎಂಬುದು ಎಲ್ಲರ ಬದುಕಿನಲ್ಲಿಯೂ ಸಿಹಿ ಹಂಚುವ ಹಬ್ಬವಾಗಿದೆ. ಬೇಂದ್ರೆಯವರು ಕಹಿಯನ್ನುಂಡು ಸಿಹಿ ನೀಡಿದವರು. ಇಂತಹ ಸಂದರ್ಭದಲ್ಲಿ ಬೇಂದ್ರೆಯವರ ಪುತ್ರ ರಾಮಚಂದ್ರ ಬೇಂದ್ರೆ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತವಾಗಿ ಯುವ ಕವಿ ದಿನ ಆಚರಿಸುತ್ತಿರುವುದು ಬಹಳ ಔಚಿತ್ಯಪೂರ್ಣವಾದುದು. ಯುವ ಕವಿಗಳಿಗೆ ಇವರೀರ್ವರ ಜೀವನ ಸ್ಪೂರ್ತಿದಾಯಕವಾದದ್ದು ಎಂದರು.
ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಡಾ.ಗೋಪಾಲ್ ಕೃಷ್ಣ್ ಬಿ. ಸ್ವಾಗತಿಸಿದರು. ಸಂಚಾಲಕ ರಾಜಕುಮಾರ ಮಡಿವಾಳರ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಟ್ರಸ್ಟ್ ವ್ಯವಸ್ಥಾಪಕರ ಪ್ರಕಾಶ ಬಾಳಿಕಾಯಿ ವಂದಿಸಿದರು.
ಕಾರ್ಯಕ್ರಮದಲ್ಲಿ ತಹಶೀಲದಾರ ಡಾ.ಸಂತೋಷಕುಮಾರ ಬಿರಾದಾರ, ಶಂಕರ ಹಲಗತ್ತಿ, ಡಾ.ಶ್ರೀಧರ ಕುಲಕರ್ಣಿ, ಶ್ರೀನಿವಾಸ ಕಾಂತನವರ, ಸತೀಶ ಜಾಧವ, ಭುವನಾ ಹಿರೇಮಠ ಎಸ್.ಎಸ್.ಬಂಗಾರಿಮಠ, ಕೆ.ಶ್ರೀಧರ, ಎ.ವಿ.ಪಾಟೀಲ, ಬಾಬು ಬಾಗಲಕೋಟ, ಕೇಶವ ಬಡಿಗೇರ, ದಾಕ್ಷಾಯಣಿ ಹಿರೇಮಠ, ಸುಮಾ ರಾಜಕುಮಾರ, ಚಾಂದಪಾಷಾ ಎನ್.ಎಸ್. ರಾಮಚಂದ್ರ ಧೋಂಗಡೆ, ಪ್ರೇಮಾನಂದ ಗುಗ್ಗರಿ ಮುಂತಾದವರು ಪಾಲ್ಗೊಂಡಿದ್ದರು.