ಬೆಸ್ಕಾಂ ನೌಕರರು ಸುರಕ್ಷತೆಗೆ ಒತ್ತು ನೀಡಿ, ಕರ್ತವ್ಯ ನಿರ್ವಹಿಸಿಚಿತ್ರದುರ್ಗ.ನ.೨೫: ನಿಮ್ಮ ಸುರಕ್ಷತೆ, ನಿಮ್ಮ ಜೀವ, ನಿಮ್ಮ ಕೈಯಲ್ಲಿದೆ. ಇದನ್ನು ಅರಿತು ಬೆಸ್ಕಾಂ ನೌಕರರು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು” ಎಂದು ಬೆಸ್ಕಾಂ ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಕೆ.ವಿ.ಗೋವಿಂದಪ್ಪ ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ  ಬೆಸ್ಕಾಂ ಚಿತ್ರದುರ್ಗ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯುತ್ ಸುರಕ್ಷತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ತುಂಬಾ ಬೇಜಾಬ್ದಾರಿತನ, ಅಜಾಗರೂಕತೆಯಿಂದಾಗಿ ಹೆಚ್ಚಾಗಿ ವಿದ್ಯುತ್ ಅವಘಡಗಳು ಸಂಭವಿಸುತ್ತವೆ. ಹಾಗಾಗಿ ತಾವುಗಳು ಮಾರ್ಗದಲ್ಲಿ ಕೆಲಸ ಮಾಡುವಾಗ ಮಾರ್ಗ ಮುಕ್ತತೆ ಪಡೆದು, ಜೊತೆಗೆ ಕಡ್ಡಾಯವಾಗಿ ಅರ್ಥಿಂಗ್ ಮಾಡಿಕೊಳ್ಳಬೇಕು. ಸುರಕ್ಷತಾ ಸಾಮಗ್ರಿಗಳಾದ ಹಗ್ಗ, ಏಣಿ, ಸೆಪ್ಟಿ ಬೆಲ್ಟ್, ಹೆಲ್ಮೆಟ್, ಹ್ಯಾಂಡ್ ಗ್ಲೌಸ್, ಲೈನ್ ಟೆಸ್ಟರ್, ಕಟಿಂಗ್ ಪ್ಲೇಯರ್, ಅರ್ಥಿಂಗ್ ರಾಡ್ ಸೇರಿದಂತೆ ಇತ್ಯಾದಿ ಸುರಕ್ಷತಾ ಸಾಮಾಗ್ರಿಗಳನ್ನು ಸದ್ಭಳಕೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ನೌಕರರ ಸುರಕ್ಷತೆ ಬಹಳ ಮುಖ್ಯ ಎಂದು ಹೇಳಿದರು.ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುವಾಗ ಮೊಬೈಲ್ ಬಳಕೆ ಮಾಡಕೂಡದು. ಆದಷ್ಟು ತಾಳ್ಮೆ, ಏಕಾಗ್ರತೆಯಿಂದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಉದಾಸೀನ ತೋರದೆ ಕೆಲಸದ ಸ್ಥಳದಲ್ಲಿ ಭಯ, ಭಕ್ತಿಯಿಂದ ಕೆಲಸ ಮಾಡಿದಾಗ ಮಾತ್ರ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.ವಿದ್ಯುತ್ ಕಣ್ಣಿಗೆ ಕಾಣದಂತಹ ವಾಹಕವಾಗಿದ್ದು, ಅದರೊಂದಿಗೆ ಕಾರ್ಯನಿರ್ವಹಿಸುವಾಗ ಸಾಕಷ್ಟು ಮುಂಜಾಗ್ರತಾ ಅಗತ್ಯವಾಗಿದೆ. ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಬಗೆಹರಿಸಲು ತೆರಳುವಾಗ ಕನಿಷ್ಟ ಇಬ್ಬರು ಅಥವಾ ಮೂರು ಮಂದಿ ಸಿಬ್ಬಂದಿ ತೆರಳಬೇಕು. ಯಾವುದೇ ಕಾರಣಕ್ಕೂ ಒಬ್ಬರು ತೆರಳಬೇಡಿ. ಬೆಸ್ಕಾಂ ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಗೊತ್ತಿದ್ದು, ಗೊತ್ತಿಲ್ಲದೆಯೋ ವಿದ್ಯುತ್ ಅವಘಡಗಳು ಸಂಭವಿಸುತ್ತಿದೆ. ಹಾಗಾಗಿ ಗಡಿಯಲ್ಲಿ ನಿಂತು ದೇಶ ಕಾಯುತ್ತಾ ಜನರಿಗೆ ರಕ್ಷಣೆ ನೀಡುವ ಸೈನಿಕರಂತೆ, ಬೆಸ್ಕಾಂ ನೌಕರರೂ ಜನರನ್ನು ಕಾಪಾಡಬೇಕು. ಅದು ನಿಮ್ಮ ಕರ್ತವ್ಯವೂ ಹೌದು. ಹಾಗಾಗಿ ವಿದ್ಯುತ್ ಅವಘಡಗಳು ಸಂಭವಿಸದಂತೆ ರೈತರು, ಸಾರ್ವಜನಿಕರಿಗೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಿದರೆ ವಿದ್ಯುತ್ ಅವಘಡಗಳನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿ 2022ರ ಏಪ್ರಿಲ್ ಮಾಹೆಯಿಂದ ಈವರೆಗೆ 27 ವಿದ್ಯುತ್ ಅವಘಡಗಳು ಸಂಭವಿಸಿವೆ. ಹಿರಿಯೂರು, ಚಿತ್ರದುರ್ಗದಲ್ಲಿ ಹೆಚ್ಚು ಅಘಘಡಗಳು ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಅವಘಡಗಳು ಸಂಭವಿಸದಂತೆ ಕ್ರಮವಹಿಸಬೇಕು ಎಂದು ಹೇಳಿದರು.