ಬೆಸ್ಕಾಂ ನಿರ್ಲಕ್ಷ್ಯ: ಬೀಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬ

ಮಧುಗಿರಿ, ಜ. ೭- ಪಟ್ಟಣದ ದ್ವಿಪಥ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು ಬೀಳುವ ಹಂತದಲ್ಲಿದೆ. ಬೆಸ್ಕಾಂ ನಿರ್ಲಕ್ಷ್ಯದಿಂದಾಗಿ ಜೀವ ಹಾನಿ ಸಂಭವಿಸುವ ಅಪಾಯ ಎದುರಾಗಿದೆ.
ಕೂಡಲೇ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಅನಾಹುತ ಸಂಭವಿಸುವ ಮುನ್ನ ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಹೊಸ ವಿದ್ಯುತ್ ಕಂಬವನ್ನು ಅಳವಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ದ್ವಿಪಥ ರಸ್ತೆಯ ಎಲ್‌ಐಸಿ ಮುಂಭಾಗ ಟೀ ಅಂಗಡಿ ಬಳಿ ವಾಹನವೊಂದು ಡಿಕ್ಕಿ ಸಂಭವಿಸಿ ಈ ಅವಘಡ ಸಂಭವಿಸಿರಬಹುದು ಎಂಬ ಅನುಮಾನ ಇದ್ದು, ಕಂಬ ಸಂಪೂರ್ಣ ಮುರಿದಿದೆ. ಯಾವ ಕ್ಷಣದಲ್ಲಾದರು ವಿದ್ಯುತ್ ಕಂಬ ಮುರಿದು ಬಿದ್ದು ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿ ಪ್ರಾಣಾಪಾಯ ಹಾಗೂ ಸುತ್ತಮುತ್ತಲಿನ ಗೃಹೋಪಯೋಗಿ ವಿದ್ಯುತ್ ಪರಿಕರಗಳು ಹಾಳಾಗುವ ಸಾಧ್ಯತೆ ಇದೆ. ಹಾಗಾಗಿ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಇತ್ತ ಗಮನ ಹರಿಸಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಂಬ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಧುಗಿರಿ ಬೆಸ್ಕಾಂ ಗಮನ ಸೆಳೆಯಲು ಟೀ ಅಂಗಡಿಯ ಮಾಲೀಕ ದೂರು ನೀಡಿ ಒಂದು ತಿಂಗಳಾದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.