ಬೆಳ್ಳೂರು ರಮಾಮಣಿ ಕಾಲೇಜಿನಲ್ಲಿ ಉಪನ್ಯಾಸಕರಿಗೆ ಕಾರ್ಯಾಗಾರ

ಕೋಲಾರ,ಮಾ.೨೭: ಉಪನ್ಯಾಸಕರು ನಿರಂತರ ಅಧ್ಯಯನದಿಂದ ಮಾತ್ರ ಉತ್ತಮ ಬೋಧಕರಾಗಲು ಸಾಧ್ಯ, ಈ ನಿಟ್ಟಿನಲ್ಲಿ ತರಬೇತಿಯ ಪ್ರಯೋಜನ ಪಡೆದುಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಯ ಜವಾಬ್ದಾರಿ ನಿರ್ವಹಿಸಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮಪ್ಪ ಕರೆ ನೀಡಿದರು.
ತಾಲ್ಲೂಕಿನ ಬೆಳ್ಳೂರಿನ ರಮಾಮಣಿ ಸುಂದರರಾಜ ಅಯ್ಯಾಂಗಾರ್ ಪದವಿ ಪೂರ್ವ ಕಾಲೇಜಿನಲ್ಲಿ ಕೃಷ್ಣಮಾಚಾರ್ ಮತ್ತು ಶೇಷಮ್ಮಸ್ಮಾರಕನಿಧಿ ಟ್ರಸ್ಟ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪದವಿ ಪೂರ್ವ ಉಪನ್ಯಾಸಕರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ಉಪನ್ಯಾಸಕರು ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿ ಎರಡು ದೃಷ್ಟಿಕೋನದಿಂದ ಮಕ್ಕಳಿಗೆ ಬೋಧನೆ, ಮಾರ್ಗದರ್ಶನ ನೀಡಬೇಕಾಗಿದೆ ಎಂದರು.
ಶೇ.೩೦ ರಷ್ಟು ಸಿಲಬಸ್ ಕಡಿತಗೊಳಿಸಲಾಗಿದೆ, ಉಳಿದ ಸಿಲಬಸ್‌ನಲ್ಲಿ ೧೦೦ ಅಂಕಗಳ ಪ್ರಶ್ನೆಪತ್ರಿಕೆ ಸಿದ್ದಗೊಳಿಸುವ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ಮಾರ್ಗದರ್ಶನ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಲು ಉಪನ್ಯಾಸಕರ ಜವಾಬ್ದಾರಿ ಹೆಚ್ಚಿನದಿದೆ, ವಿದ್ಯಾರ್ಥಿಗಳಿಗೆ ಸಂಸ್ಕಾರ, ರಾಷ್ಟ್ರೀಯ ಭಾವನೆಯನ್ನು ಜತೆಗೆ ಬೆಳೆಸುವ ಹೊಣೆಗಾರಿಕೆಯೂ ನಿಮ್ಮಮೇಲಿದ್ದು, ತರಬೇತಿ ಪಡೆದು ಕಾಲೇಜುಗಳಲ್ಲಿ ಮಕ್ಕಳಿಗಾಗಿ ಬಳಸಿಕೊಳ್ಳಿ ಎಂದರು.
ಜ್ಞಾನದ ಹಸಿವಿಗೆ
ಆಹಾರ ನೀಡಬೇಕು:
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಾಸ್ತಿ ಕಾಲೇಜು ಪ್ರಾಂಶುಪಾಲ ರಾಮಚಂದ್ರಪ್ಪ, ಕಲಿಕೆ ಮತ್ತು ಕಲಿಸುವಿಕೆ ಎರಡೂ ಇದ್ದಾಗ ಮಾತ್ರ ಓರ್ವ ಶಿಕ್ಷಕ ಪರಿಪೂರ್ಣನಾಗಲು ಸಾಧ್ಯ ಎಂದು ತಿಳಿಸಿ, ಮಕ್ಕಳ ಜ್ಞಾನದ ಹಸಿವಿಗೆ ಆಹಾರ ನೀಡುವ ಶಕ್ತಿ ನೀವು ತರಬೇತಿಯಿಂದ ಪಡೆದುಕೊಳ್ಳಿ ಎಂದರು.
ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಕೃಷ್ಣಪ್ಪ, ಉಪನ್ಯಾಸಕರಲ್ಲಿ ಕಾಲಕ್ಕೆ ತಕ್ಕಂತೆ ಕಲಿಕೆಯ ಕೌಶಲ್ಯ ಕ್ಷೀಣಿಸದಂತೆ ಪುನಶ್ಚೇತನ ಕಾರ್ಯಾಗಾರ ಅಗತ್ಯವಿದೆ, ಗೊಂದಲವಿಲ್ಲದ ಸ್ವಷ್ಟ ಜ್ಞಾನ ನಿಮ್ಮದಾಗಿದ್ದರೆ ವಿದ್ಯಾರ್ಥಿಗಳ ಆಸಕ್ತಿಯನ್ನು ನಿಮ್ಮಡೆ ಸೆಳೆದುಕೊಳ್ಳಲು ಸಾಧ್ಯ ಎಂದರು.
ಶಿಕ್ಷಣ ಸಂಸ್ಥೆಗಳು
ಬಿಸಿನೆಸ್ ಕೇಂದ್ರಗಳಲ್ಲ:
ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣಮಾಚಾರ್ ಮತ್ತು ಶೇಷಮ್ಮ ಸ್ಮಾರಕನಿಧಿ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಬಿ.ರಘು ಮಾತನಾಡಿ, ಶಿಕ್ಷಣ ಸಂಸ್ಥೆಗಳೆಂದರೆ ಬಿಸಿನೆಸ್ ಕೇಂದ್ರಗಳಲ್ಲ ಎಂದು ತಿಳಿಸಿ, ಕೇವಲ ೧೦೦ ಅಂಕಗಳಿಕೆಯ ಶಿಕ್ಷಣ ಬೇಡ, ಜತೆಗೆ ಸಂಸ್ಕಾರ ಕಲಿಸುವ ಶಿಕ್ಷಣ, ಮಕ್ಕಳನ್ನು ಈ ದೇಶದ ಆಸ್ತಿಯಾಗಿಸುವ ಶಿಕ್ಷಣ ಬೇಕು ಎಂದರು.
ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸಲು ಸಲಹೆ ನೀಡಿದ ಅವರು, ಗುರುಜೀ ಬಿಕೆಎಸ್ ಅಯ್ಯಂಗಾರ್ ಅವರು, ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿಯೊಂದಿಗೆ ಈ ಸಂಸ್ಥೆ ತೆರೆದರು ಎಂದು ತಿಳಿಸಿದರು.
ಎರಡೂ ದಿನಗಳ ಕಾರ್ಯಾಗಾರದಲ್ಲಿ ವ್ಯವಹಾರ ಅಧ್ಯಯನ, ಗಣಿತ, ಮಾ.೨೭ ರಂದು ಅರ್ಥಶಾಸ್ತ್ರ ಉಪನ್ಯಾಸಕರಿಗೆ ತರಬೇತಿ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ.ಜಗದೀಶ್, ರಾಜು,ರಮೇಶ್, ಬಾಲರಾಜ್ ಕಾರ್ಯನಿರ್ವಹಿಸಿದರು.
ಕೆ.ಬಿ.ಲಕ್ಷ್ಮಿ,ಶ್ವೇತಾ ನಿರೂಪಿಸಿ, ಅಸ್ಮಿತಾ ಪ್ರಾರ್ಥಿಸಿ, ಉಪನ್ಯಾಸಕ ಮನೋಹರ್ ವಂದಿಸಿದ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಜರಿದ್ದರು.