ಬೆಳ್ಳುಳ್ಳಿಯ ಉಪಯೋಗಗಳು

ಪುರಾತನಕಾಲದಿಂದ ಬೆಳ್ಳುಳ್ಳಿ ಉಪಯೋಗದಲ್ಲಿದೆ. ವೈದ್ಯಶಾಸ್ತ್ರದಲ್ಲಿ ಬೆಳ್ಳುಳ್ಳಿಯನ್ನು ಹಲವಾರು ರೋಗಗಳಿಗೆ ನಿವಾರಣೆಯ ಔಷಧವಾಗಿ ಉಪಯೋಗಿಸುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಸಂಶೋಧನೆಯನ್ನು ಮಾಡಿ ವಿದೇಶಿಯರು ತಿಳಿಸಿದ್ದಾರೆ. ಇದರಲ್ಲಿ ‘ಎಲೀಲ್ ಸಲ್ಫಾಯಿಡ್’ ಎಂಬ ತೈಲವಿದ್ದು, ಈ ತೈಲವು ಶರೀರಕ್ಕೆ ಹೋಗಿ ಆಮ್ಲಜನಕದ ಜೊತೆ ಸೇರಿ ಇದು ಸಲ್ಫೂರಿಕ್ ಆಸಿಡ್ ಆಗುತ್ತದೆ. ಇಡೀ ಶರೀರವನ್ನು ಬಹುಬೇಗ ವ್ಯಾಪಿಸುತ್ತದೆ. ಇದು ಶ್ವಾಸಕೋಶ, ಚರ್ಮ, ಮೂತ್ರಪಿಂಡ, ಯಕೃತ್ ಇವುಗಳ ಮುಖಾಂತರ ಹೊರಬೀಳುತ್ತದೆ. ಶರೀರದ ಯಾವ ಭಾಗಕ್ಕಾದರೂ ಇದನ್ನು ಹಚ್ಚಿದರೆ ಚರ್ಮ ಬಹುಬೇಗ ಹೀರಿಕೊಂಡುಬಿಡುತ್ತದೆ. ಚರ್ಮ, ಶ್ವಾಸಕೋಶ, ಗಂಟಲು, ಎಲುಬುಗಳು ಯಾವ ಭಾಗದಲ್ಲಿ ನೋವಿದ್ದರೂ ಇದನ್ನು ಸರಿಯಾದ ಕ್ರಮದಲ್ಲಿ ಬಳಸುವುದರಿಂದ ಸಾಕಷ್ಟು ಉಪಯೋಗವಿದೆ. ಇದರಲ್ಲಿ ಅದ್ಭುತವಾದ ಕ್ರಿಮಿನಾಶಕ ಗುಣವಿರುತ್ತದೆ. ಇದರಲ್ಲಿ ಸಾರಜನಕ, ಪಿಷ್ಠ, ಮೇದಸ್ಸು, ಸುಣ್ಣ, ರಂಜಕ, ಕಬ್ಬಿಣ, ನಿಯಾಸಿನ್, ಸಿ ಜೀವಸತ್ವ ಹೇರಳವಾಗಿವೆ. ಇದು ಅತ್ಯುತ್ತಮ ಜೀರ್ಣಕಾರಕ ಗುಣವುಳ್ಳದ್ದು. ನರಗಳಲ್ಲಿ ಚೈತನ್ಯ ತುಂಬುವಲ್ಲಿ ಇದರ ಪಾತ್ರ ಬಹುಮುಖ್ಯವಾಗಿದ್ದು, ತ್ರಾಣಿಕ ಆಗಿ ಕಾರ್ಯನಿರ್ವಹಿಸುತ್ತದೆ. ಚಳಿಗಾಲ, ಮಳೆಗಾಲದಲ್ಲಿ ಶರೀರವನ್ನು ಶಾಖವಾಗಿಡಲು ಸಹಕರಿಸುತ್ತದೆ. ಇದರ ಸೇವನೆಯಿಂದ ಶುದ್ಧೀಕರಣಾಂಗಗಳ ಆರೋಗ್ಯ ರಕ್ಷಿಸುತ್ತದೆ.
೧. ಉಬ್ಬಸ ರೋಗಕ್ಕೆ: ಉಬ್ಬಸ ರೋಗಕ್ಕೆ ಬೆಳ್ಳುಳ್ಳಿಯ ೩ – ೪ ತುಂಡುಗಳನ್ನು ಹಾಲಿನಲ್ಲಿ ಬೇಯಿಸಿ ಪ್ರತಿದಿನ ಸೇವಿಸುವುದರಿಂದ ರೋಗ ಉಲ್ಬಣವಾಗುವುದಿಲ್ಲ ಹಾಗೂ ಗುಣಮುಖವಾಗುವುದು.
೨. ಕಿವಿನೋವಿಗೆ: ಥಂಡಿಗಾಳಿಯಿಂದ ಕಿವಿನೋವು ಬಂದಾಗ, ಒಂದು ಬೆಳ್ಳುಳ್ಳಿ ತುಂಡನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಬಿಸಿಮಾಡಿ ಎರಡೆರಡು ಹನಿಗಳನ್ನು ಕಿವಿಗೆ ಬಿಡುವುದರಿಂದ ಕಿವಿನೋವು ಮಾಯವಾಗುತ್ತದೆ.
೩. ಕೀಲುನೋವಿಗೆ: ಬೆಳ್ಳುಳ್ಳಿ, ಲಕ್ಕಿಸೊಪ್ಪು ಮತ್ತು ಶುಂಠಿ ಇವುಗಳನ್ನು ಜಜ್ಜಿ ಕಷಾಯ ಮಾಡಿಕುಡಿದರೆ, ಕೀಲುನೋವು, ಊತಗಳು ಮತ್ತು ಕಿವಿನೋವು ಕಡಿಮೆಯಾಗುತ್ತವೆ. ಹತ್ತಿಯಲ್ಲಿ ಬೆಳ್ಳುಳ್ಳಿ ತುಂಡನ್ನು ಇಟ್ಟು ಕಿವಿಯಲ್ಲಿ ಇಟ್ಟುಕೊಂಡರೆ ಕಿವಿನೋವು ಬರುವುದಿಲ್ಲ.
೪. ಜಂತುಹುಳುವಿಗೆ: ಸುಟ್ಟ ಬೆಳ್ಳುಳ್ಳಿಯ ಎರಡು ತುಂಡುಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ಹೊಟ್ಟೆಯಲ್ಲಿರುವ ಜಂತುಹುಳುಗಳು ಸಾಯುತ್ತವೆ.
೫. ಹುಳಕಡ್ಡಿಗೆ: ಎರಡು ತುಂಡು ಬೆಳ್ಳುಳ್ಳಿಯ ಜೊತೆ ೫ – ೬ ಎಲೆ ತುಳಸಿಯನ್ನು ಅರೆದು ಜಜ್ಜಿ ಹುಳಕಡ್ಡಿ ಇರುವ ಸ್ಥಳಕ್ಕೆ ಹಚ್ಚಿದರೆ, ಕೆಲವು ಸಮಯದ ನಂತರ ಗುಣಮುಖವಾಗುವುದು.
೬. ಕೊಳೆತು ನಾರುವ ಹುಣ್ಣಿಗೆ: ಬೆಳ್ಳುಳ್ಳಿ ಹಾಗೂ ಬೆಣ್ಣೆಯನ್ನು ಸೇರಿಸಿ ಅರೆದು ಆ ಸ್ಥಳಕ್ಕೆ ಹಚ್ಚಿದರೆ, ಕೆಲವು ಸಮಯದ ನಂತರ ಗುಣಮುಖವಾಗುವುದು.
೭. ಮುಟ್ಟಿನ ದೋಷ: ಗರ್ಭಾಶಯದಲ್ಲಿ ನೋವು ಕಾಣಿಸಿಕೊಂಡರೆ ಬೆಳ್ಳುಳ್ಳಿಯನ್ನು ನೀರಿನಲ್ಲಿ ಬೇಯಿಸಿ, ಆ ನೀರನ್ನು ಪ್ರತಿದಿನ ಮೂರು ಬಾರಿ ಕುಡಿಯುವುದರಿಂದ ನೋವು ಇರುವುದಿಲ್ಲ.
೮. ಆಯುರ್‌ವೃದ್ಧಿ: ಪ್ರತಿನಿತ್ಯ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಸುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ. ಬೆಳ್ಳುಳ್ಳಿಯ ಚಟ್ನಿಪುಡಿಮಾಡಿ ಅನ್ನಕ್ಕೆ ಹಾಕಿಕೊಂಡು ತಿನ್ನಬೇಕು.
೯. ಗರ್ಭನಿರೋಧಕ ಶಕ್ತಿಗೆ: ಕೆಲವು ಸಂಶೋಧನೆಗಳ ಪ್ರಕಾರ ೪೮ ದಿನಗಳ ಕಾಲ ಔಷಧೀಯ ರೂಪದಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ಗರ್ಭನಿರೋಧಕ ಶಕ್ತಿ ಉಂಟಾಗುತ್ತದೆ ಮತ್ತು ಗರ್ಭಾಶಯವನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ.
೧೦. ವಾತರೋಗಕ್ಕೆ: ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಅರೆದು ಸೇವಿಸಿದರೆ ಸಮಗ್ರ ವಾತರೋಗ ನಿವಾರಣೆಯಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧