ಬೆಳ್ಳಿಪರದೆ ಮೇಲೆ ಹಳ್ಳಿಯ ಪ್ರತಿಭೆ.ಕೂಡ್ಲಿಗಿ ಪ್ರೇಮ್ ನಟನೆಯ “ಪರಂವಃ”ಸಿನಿಮಾ ನಾಳೆ ಬಿಡುಗಡೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 20 :- ಬರದನಾಡಾಗಿದ್ದರೂ ರಂಗಕಲೆಗೆ ಬರವಿಲ್ಲ, ರಂಗಕಲೆಯಲ್ಲಿ  ತನ್ನದೇ ಆದ ಚಾಪನ್ನು ಮೂಡಿಸಿ ರಾಜ್ಯ, ಅಂತರಾಜ್ಯಗಳಲ್ಲಿ ಹೆಸರು ಮಾಡಿರುವ ರಂಗಕಲೆಯ ಕಲಾವಿದರ ತವರೂರಾಗಿರುವ ಹಾಗೂ ಐತಿಹಾಸಿಕ ನೆಲೆಬೀಡಾಗಿರುವ ಕೂಡ್ಲಿಗಿ ತಾಲೂಕಿನಂತಹ  ಹಳ್ಳಿಗಳಲ್ಲಿ ಕಲೆಯ ಮಣ್ಣಿನ ವಾಸನೆ ಘಮಿಸದೆ ಇರದು ಎನ್ನುವುದಕ್ಕೆ ತಾಲೂಕಿನ ಸಿಡೇಗಲ್ ಎನ್ನುವ ಕುಗ್ರಾಮದ ಪದವೀಧರ ಯುವಕ  ಪ್ರೇಮ್  ಸಿನಿಮಾ ನಟನಾಗುವ ಕನಸು ಕಟ್ಟಿಕೊಂಡು ನನಸು ಮಾಡಿಕೊಂಡಿದ್ದಕ್ಕೆ ಸಾಕ್ಷಿ ಎಂಬಂತೆ ನಾಳೆ ಆತನ ನಟನೆಯ
ಪರಂವಃ ಬೆಳ್ಳಿತೆರೆಯ ಸಿನಿಮಾ ನಾಳೆ ರಾಜ್ಯಾದ್ಯಾಂತ ಬಿಡುಗಡೆಯಾಗಲಿದೆ.
ಈಗೆಲ್ಲಾ ಕೋಟಿ ಕೋಟಿ ದುಡ್ಡಿದ್ದವರು ಸಿನೆಮಾ ನಟನಾಗುವುದೇನೂ ಕಷ್ಟವಿಲ್ಲ. ಆದರೆ, ಕೈಯಲ್ಲಿ ಕಾಸು ಇಲ್ಲದೆಯೂ ಪ್ರತಿಭೆ ಇದೆಯೆಂಬ ಕಾರಣಕ್ಕೆ ಚಿತ್ರದಲ್ಲಿ ನಾಯಕ ನಟನಾಗುವುದು ಕಷ್ಟದ ಕೆಲಸ. ಕೃಷಿ ಕುಟುಂಬದ  ಬಡತನದಲ್ಲಿ ಬೆಳೆದು ಪ್ರತಿಭೆಯ  ಶ್ರೀಮಂತಿಕೆ ಹೊಂದಿರುವ ಪ್ರೇಮ್
ಕೂಡ್ಲಿಗಿ ತಾಲೂಕಿನ ಸಿಡೇಗಲ್ ಗ್ರಾಮದವರು  ಕಾಲೇಜು ದಿನಗಳಲ್ಲಿಯೇ ಸಿನೆಮಾದಲ್ಲಿ‌ ನಾಯಕ ನಟನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಕೂಡ್ಲಿಗಿ ತಾಲೂಕಿನ ಸಿಡೇಗಲ್ಲು ಎಂಬ ಕುಗ್ರಾಮದ ಯುವಕ ಕೃಷಿ ವಿಜ್ಞಾನ ಪದವೀಧರ ಮನೆಯಲ್ಲಿ ತಂದೆ ತಾಯಿಗೆ ಕುಟುಂಬ ನಿರ್ವಹಣೆಗೆ ಇರುವ ಒಬ್ಬ ಮಗ ಸರ್ಕಾರಿ ನೌಕರನಾಗಬೇಕೆಂಬ ಹಂಬಲವಿದ್ದರೆ ಆದರೆ ಪ್ರೇಮ್ ಗೆ ಮಾತ್ರ ನಟನಾಗುವ ಮಹದಾಸೆ ಆದರೆ ಸಿನಿಮಾಕ್ಕೆ ಬಜೆಟ್ ಹಾಕಲು ಹಣವಿಲ್ಲದೆ ಇದ್ದಾಗ ವಿಧಿಲಿಖಿತ ಈತ ನಟನಾಗಬೇಕು ಎಂದಿದ್ದರೆ ಅದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಹಳ್ಳಿ ಹೈದನ ನಟನೆ ಕನಸಿಗೆ ನಟನಾ ಪ್ರತಿಭೆಗೆ ಹಿಂಬು ನೀಡಲು  ಆತನ 200 ಜನ ಸ್ನೇಹಿತರು ಹಾಗೂ ಹಿತೈಷಿಗಳು ಬಂಡವಾಳ ಹಾಕುವ ಮೂಲಕ ಕನಸನ್ನು ನನಸು ಮಾಡಲು ನೀರೆರೆದಿರುವುದು ವಿಶೇಷವೆಂದು ಹೇಳಬಹುದಾಗಿದೆ.
ಕಥಾ ಹಂದರ: ಪೀಪಲ್ ವರ್ಲ್ಡ್ ಫಿಲಂಸ್ ಬ್ಯಾನರ್‌ನಡಿ ತೆರೆ ಕಾಣಲಿರುವ ಪರಂವಃ ಚಿತ್ರವು ಹಿರಿಯ ನಿರ್ದೇಶಕ ಸಂತೋಷ್ ಕೈದಾಳ ನಿರ್ದೇಶನದಲ್ಲಿ ಪ್ರಥಮ ಬಾರಿಗೆ ನಾಯಕನಾಗಿ ಪ್ರೇಮ್ ಸಿಡೇಗಲ್ ಹಾಗೂ ನಾಯಕಿಯಾಗಿ ಮೈತ್ರಿ ಜೆ.ಕಶ್ಯಪ ಅವರು ನಟಿಸಿದ್ದಾರೆ. ಈ ಚಿತ್ರವು ಗ್ರಾಮೀಣ ಸೊಗಡಿನ ವೀರಗಾಸೆ ಕಲೆಯೇ ಪ್ರಧಾನವಾಗಿಸಿಕೊಂಡಿದ್ದರ ಜತೆಗೆ ತಂದೆ, ಮಗನ ಬಾಂಧವ್ಯದ ಬೆಸುಗೆಯ ಕಥಾ ಹಂದರವನ್ನು ಹೆಣೆಯಲಾಗಿದೆ. ರಂಗಕಲೆಯ ಪ್ರತಿಭೆಗಳಾದ ಗಣೇಶ್ ಹೆಗ್ಗೋಡು, ಶ್ರುತಿ, ಅವಿನಾಶ್, ನಾಜರ್, ಶಬರೀಶ್, ಮುಕುಂದ ಸೇರಿ ಇತರರು ತಾರಾಗಣದಲ್ಲಿದ್ದಾರೆ. ಅಪರಿಜಿತ್ ಹಾಗೂ ಜೋಸ್ ಜೋಸೈ ಸಂಗೀತ ನಿರ್ದೇಶನ, ನಾಗೇಶ್ ಕುಂದಾಪುರ, ಸಂಕೇತ್ ಅಂಬಳಿ, ಕಿರಣ್ ಎನ್.ಆರ್.ಪುರ ಸೇರಿ ಇತರರು ಗೀತೆ ರಚಿಸಿದ್ದರೆ, ಸರಗಮಪ ಖ್ಯಾತಿಯ ಗಾಯಕ ಮೆಹಬೂಬ್ ಸಾಬ್ ಇನ್ನಿತರರು ಹಾಡಿದ್ದಾರೆ.
ಹಳ್ಳಿಹೈದನಿಗೆ ಶುಭ ಹಾರೈಕೆ : ಪರಂವಃ ಚಿತ್ರದ ನಾಯಕ ನಟ ಪ್ರೇಮ್ ಸಿಡೇಗಲ್ ನಮ್ಮೂರ ಹುಡುಗ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೇರಿ ತಾಲೂಕಿನ ಜನರು ಚಿತ್ರದ ಯಶಸ್ವಿಗೆ ಹಾರೈಸಿದ್ದರೆ, ಈಗಾಗಲೇ, ಚಿತ್ರದ ಟೀಸರ್, ಹಾಡುಗಳ ಬಿಡುಗಡೆಗೊಳಿಸಿ ಅಶ್ವಿನಿ ಪುನೀತ್ ರಾಜಕುಮಾರ್, ಡಾಲಿ ಧನಂಜಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಮಂತ್ರಾಲಯ ರಾಘವೇಂದ್ರ ಮಠದ ಶ್ರೀಗಳು ಶುಭ ಹಾರೈಸಿದ್ದಾರೆ. ಸಿನಿ ಪ್ರೇಮಿಗಳ ನಿರೀಕ್ಷೆಯಲ್ಲಿರುವ ಪರಂವಃ ಚಿತ್ರವು ನಾಳೆ  ಜು.21 ರಂದು ಬಿಡುಗಡೆಯಾಗಲಿದ್ದು, ಕುಗ್ರಾಮ ಸಿಡೇಗಲ್ಲಿನಲ್ಲಿ ಸ್ನೇಹಿತರ ಬಳಗ ಗ್ರಾಮದ ಪ್ರತಿಭೆಯ ಕಟೌಟ್ ಮುಗೀಲೆತ್ತರಕ್ಕೆ ನಿಲ್ಲಿಸಿ ಪ್ರೋತ್ಸಾಹಿಸಿ ಹಾರೈಸಿದ್ದಾರೆ.
ಪರಂವಃ ಚಿತ್ರದ ನಾಯಕನಾಗಿರುವ ಪ್ರೇಮ್ ಸಿಡೇಗಲ್ಲು ಅವರದು ಮೂಲ ಸೌಕರ್ಯಗಳೇ ಇಲ್ಲದಂಥ ಕುಗ್ರಾಮ ಸಿಡೇಗಲ್ಲಿನ ಕೃಷಿಕರಾದ ನಾರಾಯಣ ಗೌಡ ಹಾಗೂ ಈಶ್ವರಮ್ಮ ದಂಪತಿಯ ಒಬ್ಬನೇ ಮಗ ಪ್ರೇಮ್ ಅವರು, ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಅಗ್ರಿ ಪದವಿ ಪೂರೈಸಿದ್ದಾರೆ. ಹೆತ್ತವರ ಆಸೆಯಂತೆ ನೌಕರಿ ಪಡೆಯಲು ಪ್ರಯತ್ನಿಸದೇ ನಟನಾಗುವ ಕನಸಿನ ಬೆನ್ನೇರಿ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯ ಶ್ರೀ ಶಿವಕುಮಾರಸ್ವಾಮಿ ರಂಗ ಪ್ರಯೋಗ ಶಾಲೆಗೆ ಸೇರಿ ರಂಗ ಕಲೆ ತರಬೇತಿ ಪಡೆದಿದ್ದಾರೆ. ಆ ನಂತರ ಅನೇಕ ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದು, ಬಣ್ಣದ ಲೋಕಕ್ಕೆ ಬೆರಗಾಗಿ ಬೆಂಗಳೂರಿನ ಗಾಂಧಿನಗರದ ಕದ ತಟ್ಟಿದ್ದಾರೆ. ಆಗ ನಿರ್ದೇಶಕ ಗುರು ದೇಶಪಾಂಡೆ ಅವರ ಪರಿಚಯದ ಮೂಲಕ ಮೊದಲ ಬಾರಿಗೆ ‘ರುದ್ರತಾಂಡವ’ ಸೇರಿ ಕೆಲ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕೆಲ ಧಾರಾವಾಹಿಗಳಲ್ಲೂ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರೇಮ್ ಸಿಡೇಗಲ್ ಎಂಬ ಯುವಕ ಈಗ ದೊಡ್ಡ ಬಜೆಟ್‌ನ ಬೆಳ್ಳಿತೆರೆಯಲ್ಲಿ ನಾಯಕ ನಟರಾಗಿ ಮಿಂಚಲು ರೆಡಿಯಾಗಿದ್ದಾರೆ. ಪ್ರೇಮ್ ಸಿಡೇಗಲ್’ ಅವರೀಗ ನಾಯಕನಟನಾಗಿರುವ ‘ಪರಂವಃ’ ಚಿತ್ರ ನಾಳೆ  ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಹಳ್ಳಿಹೈದನ ನನಸಿನ ಮನೆಗೆ ತೆರಳಿ ಸಿನಿಮಾ ನೋಡಿ ವಾರೆವ್ಹಾ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮೂಲಕ  ಬೆಳ್ಳಿ ಪರದೆ ಮೇಲೆ ನಮ್ಮೂರ ಯುವ ನಾಯಕ  ಹಳ್ಳಿ ಪ್ರತಿಭೆ ಪ್ರೇಮ್ ರ  ಇನ್ನು ಹೆಚ್ಚೇಚ್ಚು ಸಿನಿಮಾ ಮೂಡಲಿ ಎಂದು ಆಶೀಸೋಣವೇ.