ಬೆಳ್ಳಾರೆಯ ಕೋಟೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಲು ಕ್ರಮ

ಸುಳ್ಯ, ನ.೧- ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಶಾಶ್ವತವಾಗಿ ಉಳಿಯಬೇಕು ಎನ್ನುವ ಬೆಳ್ಳಾರೆಯಲ್ಲಿ ಕೋಟೆ ಮತ್ತು ಖಜಾನೆಯಿದ್ದ ೯೭ ಸೆಂಟ್ಸ್ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಸ್ಥಳ ಎಂದು ಗುರುತಿಸಲು ಕಂದಾಯ ಸಚಿವರನ್ನು ಭೇಟಿ ಯೋಜನೆಯನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತೇನೆ ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಸುಳ್ಯ ನಗರ ಅರೆಭಾಷಿಗರ ಸಮಿತಿಯ ಆಶ್ರಯದಲ್ಲಿ ಎ.ಪಿ.ಎಂ.ಸಿ ಸಭಾಂಗಣದಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟಗಾರರ ನೆನ್ಪು ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಮರ ಸುಳ್ಯ ಹೋರಾಟದ ಪ್ರಮುಖ ರೂವಾರಿ ಕೆದಂಬಾಡಿ ರಾಮಗೌಡರ ಹೆಸರನ್ನು ಸುಳ್ಯ-ಜಟ್ಟಿಪಳ್ಳ-ದುಗ್ಲಲಡ್ಕ ರಸ್ತೆಗೆ ಹುತಾತ್ಮ ಕೆದಂಬಾಡಿ ರಾಮ ಗೌಡ ರಸ್ತೆ ಎಂದು ನಾಮಕರಣ ಮಾಡಲು ನಗರ ಪಂಚಾಯತಿಯಲ್ಲಿ ಮಾತನಾಡಿ ನಾಮಕರಣ ಮಾಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ ಮುಖ್ಯ ಭಾಷಣಗಾರರಾಗಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಎ.ಪಿ.ಎಂ.ಸಿ. ಅಧ್ಯಕ್ಷ ವಿನಯ ಮುಳುಗಾಡಿ, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಅಕಾಡೆಮಿ ನಿರ್ದೇಶಕರುಗಳಾದ ಪುರುಷೋತ್ತಮ ಕಿರ್ಲಾಯ ಹಾಗೂ ಕುಸುಮಾಧರ ಎ.ಟಿ. ಉಪಸ್ಥಿತರಿದ್ದರು. ನಗರ ಅರೆಭಾಷೆ ಸಮಿತಿಯ ಅವಿನಾಶ್ ಕುರುಂಜಿ ಸ್ವಾಗತಿಸಿ, ಅರೆಭಾಷಿಗರ ನಗರ ಸಮಿತಿ ಸಂಚಾಲಕ ರಂಜಿತ್ ಕುಕ್ಕೆಟ್ಟಿ ವಂದಿಸಿದರು.