ಬೆಳ್ಳಾರೆಯಲ್ಲಿ ಹರಿದ ನೆತ್ತರ ಕರಾವಳಿ ಉದ್ವಿಗ್ನ

ಸುಳ್ಯ,ಜು.೨೭- ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರುನ ಬರ್ಬರ ಹತ್ಯೆಯಿಂದ ಕರಾವಳಿಯಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಸೇಡಿಗೆಸೇಡು ಎಂಬಂತೆ ವಾರದ ಹಿಂದೆ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ದುಷ್ಕರ್ಮಿಗಳು ಪ್ರವೀಣ್‌ನ ಕೊಲೆಮಾಡಿ ರಕ್ತದಕೋಡಿ ಹರಿಸಿದ್ದಾರೆ.ಪ್ರವೀಣ್ ಹತ್ಯೆಯಿಂದ ಬೂದಿಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ರಾಜ್ಯದಲ್ಲೆಡೆ ವ್ಯಾಪಿಸುವ ಸಾಧ್ಯತೆಯಿರುವುದರಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು(೩೧)ನನ್ನು ನಿನ್ನೆ ರಾತ್ರಿ ಕೊಲೆಗೈದ ಘಟನೆಯು ಕಾಡ್ಗಿಚ್ಚಿನಂತೆ ಹರಡಿ ಅಲ್ಲಲ್ಲಿ ಪ್ರತಿಭಟನೆ ಬಂದ್ ಆಚರಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಪರಿಸ್ಥಿತಿ ಉದ್ವಿಗ್ನವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾದ್ಯಂತ ಎರಡು ದಿನಗಳ ಕಾಲ ನಿಷೇದಾಜ್ಞೆ ಜಾರಿಗೊಳಿಸಿದೆ.
ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ೧೪೪ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಿ ೫ಕ್ಕಿಂತ ಹೆಚ್ಚು ಮಂದಿ ಗುಂಪು ಸೇರದಂತೆ ನಿಗಾ ವಹಿಸಲಾಗಿದೆ.ಕಡಬದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಶಾಲಾ -ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪುತ್ತೂರಿನ ವಿವೇಕಾನಂದ, ಅಂಬಿಕಾ ಶಿಕ್ಷಣ ಸಂಸ್ಥೆಗಳು ಸೇರಿ ಇತರ ಖಾಸಗಿ ಶಾಲೆಗಳು ಸ್ವಯಂರಜೆ ಘೋಷಿಸಿವೆ.
ಜಿಲ್ಲೆಯ ಸುಳ್ಳ, ಕಡಬ ಹಾಗೂ ಪುತ್ತೂರು ತಾಲುಕುಗಳಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು, ಉಡುಪಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಭದ್ರತೆಯ ನಡುವೆಯೂ ಪ್ರವೀಣ್ ನೆಟ್ಟಾರು ಕೊಲೆ ಖಂಡಿಸಿ ಪುತ್ತೂರಿನ ಬೊಳುವಾರಿನಲ್ಲಿ ಸರ್ಕಾರಿ ಬಸ್?ವೊಂದರ ಕಲ್ಲು ತೂರಾಟ ನಡೆಸಲಾಗಿದೆ.ಮಂಗಳೂರಿಗೆ ಹೋಗುತ್ತಿದ್ದ ಬಸ್?ಗೆ ಮೇಲೆ ಕೆಲ ಯುವಕರು ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ನೆಟ್ಟಾರು ಕೊಲೆ ಖಂಡಿಸಿ ಜಿಲ್ಲೆಯ ಹಲವೆಡೆ ಪ್ರತಿಭಟನೆ ನಡೆಸಲು ಮುಂದಾಗಿದ್ದವರನ್ನು ತಡೆಯಲಾಗಿದ್ದು, ಪೊಲೀಸರು ಗುಂಪು ಸೇರದಂತೆ ನಿಗಾ ವಹಿಸಿದ್ದಾರೆ.ಬೆಳ್ಳಾರೆಯಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿಯಿದ್ದು ಒಂದೇ ವಾರದ ಅವಧಿಯಲ್ಲಿ ಬೆಳ್ಳಾರೆ ಎರಡು ಕೊಲೆಗೆ ಸಾಕ್ಷಿಯಾದಂತೆ ಆಗಿದೆ. ಪ್ರವೀಣ್ ಹತ್ಯೆ ನಡೆದ ಸ್ಥಳವನ್ನು ಪೊಲೀಸರು ಕಾವಲು ಕಾಯುತ್ತಿದ್ದು, ವಿಧಿವಿಜ್ಞಾನ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಿನ್ನೆ ರಾತ್ರಿ ಸ್ಥಳಕ್ಕೆ ಆಗಮಿಸುವ ತನಕವೂ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಆಸ್ಪತ್ರೆ ಮುಂಭಾಗ ನೆರೆದಿದ್ದ ಸಂಬಂಧಿಕರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
ತಡರಾತ್ರಿ ೧.೩೦ ರ ಸುಮಾರಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು.ದುಷ್ಕೃತ್ಯ ಎಸಗಿದವರನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಲಾಗುವುದು. ಈಗಾಗಲೇ ಪೊಲೀಸ್ ಇಲಾಖೆ ತನಿಖೆಯಲ್ಲಿ ತೊಡಗಿದೆ.
ಜಿಲ್ಲಾಧಿಕಾರಿ ಮನವಿ:
ಮೃತರ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡಬೇಕೆಂಬ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ನೀಡಿದ ಭರವಸೆಯ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡು
ಪ್ರವೀಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆಸಿದ ಬಳಿಕ ಮೆರವಣಿಗೆಯಲ್ಲಿ ಇಂದು ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಮನೆಯ ಬಳಿಯಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು.
೧೫ ಮಂದಿ ವಿಚಾರಣೆ:
ಈ ಮಧ್ಯೆ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಮಂದಿ ಶಂಕಿತರು ಸೇರಿದಂತೆ ೧೫ಮಂದಿಯನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ
ಸ್ಥಳೀಯನೊಬ್ಬ ಪ್ರವೀಣ್ ಚಲನವಲನದ ಬಗ್ಗೆ ಮಾಹಿತಿ ನೀಡಿದ್ದಾನೆ. ಒಟ್ಟಿನಲ್ಲಿ ಸ್ಥಳೀಯರೊಬ್ಬರ ಸಹಾಯದಿಂದ ಹತ್ಯೆಯಾಗಿದೆ ಎಂಬ ಮಾಹಿತಿ ಲಭಿಸಿದೆ. ಹೀಗಾಗಿ ಸ್ಥಳೀಯ ಪೊಲೀಸರು ಒಟ್ಟಾರೆ ೧೫ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಶಂಕಿತರ ಮಾಹಿತಿಯ ಬಳಿಕ ಹತ್ಯೆ ಮಾಡಿದವರು ಸ್ಥಳೀಯರು ಎಂದು ತಿಳಿದುಬಂದಿದ್ದು, ಬೇರೆ ರಾಜ್ಯದಿಂದ ಬಂದವರಾ ಅನ್ನೋದನ್ನು ತಿಳಿಯಬೇಕಿದೆ. ಒಬ್ಬ ಮಾತ್ರ ಸ್ಥಳೀಯವಾಗಿ ಸಹಾಯ ಮಾಡಿದ್ದು ದೃಢವಾಗಿದೆ.
ಬೆದರಿಕೆ ಕರೆ:
ಪ್ರವೀಣ್ ಗೆ ಬೆದರಿಕೆ ಕರೆಯೂ ಬಂದಿರುವ ಬಗ್ಗೆ ಮಾಹಿತಿ ಇದೆ. ಹತ್ಯೆಗೂ ಮೂರು ದಿನದಿಂದ ಬೆದರಿಕೆ ಕರೆ ಬಂದಿದೆ ಎಂದಿದ್ದಾರೆ. ಆದರೆ ಬೆದರಿಕೆ ಕರೆಯ ಬಗ್ಗೆ ಪ್ರವೀಣ್ ಪೊಲೀಸರಿಗೆ ದೂರು ಕೊಟ್ಟಿಲ್ಲ. ಸ್ನೇಹಿತರ ಮಾಹಿತಿಯ ಮೇರೆಗೆ ಶಂಕಿತರ ವಶಕ್ಕೆ ಪಡೆಯಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ತಂಡ ರಚನೆ:
ನೆಟ್ಟಾರು ಭೀಕರ ಕೊಲೆ ಪ್ರಕರಣದ ಹಂತಕರ ಪತ್ತೆಗೆ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಬೆನ್ನು ಹತ್ತಿ ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ನಿ ರಾತ್ರಿ ೮ ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದಾಗ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ತಕ್ಷಣವೇ ಸ್ಥಳೀಯರು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದಾರೆ
ಕೇವಲ ಮೂರು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಪ್ರವೀಣ್ ಹಲವು ಹಿಂದುತ್ವಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.
ಪ್ರತಿಕಾರದ ಕೊಲೆ:
ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್ ಎಂಬಾತನ ಕೊಲೆಯಾಗಿತ್ತು. ಮಸೂದ್ ಮೇಲೆ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎನ್ನುವವರು ಹಲ್ಲೆ ಮಾಡಿದ್ದರು. ಜುಲೈ ೧೯ರಂದು ಸುಧೀರ್ ಎಂಬಾತನಿಗೆ ಮಸೂದ್ ಕೈ ತಾಗಿದ ಕಾರಣ ಉಂಟಾದ ಗಲಾಟೆ ಮಸೂದ್ ಸಾವಿನಲ್ಲಿ ಪರ್ಯಾಸನಗೊಂಡಿತ್ತು.
ಬಾಟಲಿಯಿಂದ ತಲೆಗೆ ಏಟು ಬಿದ್ದಿದ್ದ ಮಸೂದ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಈ ಸಾವಿಗೆ ಪ್ರತೀಕಾರವಾಗಿ ಬಿಜೆಪಿ ಮುಖಂಡನ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.