ಬೆಳ್ತಂಗಡಿ: ವೃಕ್ಷೋದ್ಯಾನಕ್ಕೆ ನಿನ್ನೆ ಅರಣ್ಯ ಸಚಿವರ ಭೇಟಿ

ಬೆಳ್ತಂಗಡಿ, ಎ.೨೫- ಕರ್ನಾಟಕ ಇಲಾಖೆಯು ರಾಜ್ಯದೆಲ್ಲೆಡೆ ಪ್ರತಿ ತಾಲೂಕಿಗೊಂದರಂತೆ ಪರಿಚಯಿಸಿದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಪ್ರಗತಿ ವಿಚಾರವಾಗಿ ಬೆಳ್ತಂಗಡಿ ತಾಲೂಕಿನ ಕಲ್ಲಗುಡ್ಡೆಯಲ್ಲಿರುವ ವೃಕ್ಷೋದ್ಯಾನಕ್ಕೆ ಶನಿವಾರ ರಾಜ್ಯ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕ ಹರೀಶ್ ಪೂಂಜ ಅವರು ಸಚಿವರೊಂದಿಗೆ ವಿಚಾರ ಪ್ರಸ್ತಾಪಿಸಿ, ಬೆಳ್ತಂಗಡಿ ತಾಲೂಕಿಗೆ ವಿಭಿನ್ನ ಮಾದರಿ ಟ್ರೀ ಪಾರ್ಕ್ ಪರಿಚಯಿಸುವ ಇರಾದೆ ಹೊಂದಲಾಗಿದೆ ಎಂದು ಟ್ರೀ ಪಾರ್ಕ್ ಕುರಿತು ವಿವರಿಸಿದರು. ಅರಣ್ಯ ಇಲಾಖೆಯ ೨೫ ಎಕ್ರೆ ಸ್ಥಳಾವಕಾಶದಲ್ಲಿ ಮಕ್ಕಳಿಗಾಗಿ ಪ್ಲೇ ಗ್ರೌಂಡ್ ನಿರ್ಮಾಣ, ವೃಕ್ಷೋದ್ಯಾನದೊಳಗೆ ಪ್ಲಾಸ್ಟಿಕ್ ಮುಕ್ತ ಚಿಂತನೆ, ಪ್ರಾಣಿ, ಪಕ್ಷಿ, ಪರಿಸರದ ಸಂದೇಶ, ೧೦ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೨೫ ಅರಣ್ಯ ಜಾತಿಯ ಫಲನೀಡುವ ಗಿಡ  ನೆಡಲಾಗಿದೆ. ೧.೬ ಕಿ.ಮೀ ಯೊಳಗೆ ಪ್ರಾಣಿಗಳಿಗೆ ಅವಕಾಶ ನೀಡದಂತೆ ಹೆನ್ಸಿಂಗ್ ನಿರ್ಮಾಣ ಮಾತ್ರವಲ್ಲದೆ ಟ್ರೀ ಪಾರ್ಕ್ ಒಳಗಡೆ ಮನೋರಂಜಕವಾಗಿ ಸಣ್ಣ ಕೆರೆ ನಿರ್ಮಾಣ, ಫುಡ್ ಕೋರ್ಟ್, ವಾಕಿಂಗ್ ಟ್ರ್ಯಾಕ್, ಇಂಟರ್‌ಲಾಕ್ ಅಳವಡಿಕೆಗೆ  ಹೆಚ್ಚುವರಿ ಅನುದಾನ ಅಗತ್ಯವಿದ್ದು, ಅದನ್ನು ಮಂಜೂರು ಮಾಡುವಂತೆ ಶಾಸಕ ಹರೀಶ್ ಪೂಂಜ ಅವರು ಸಚಿವರ ಗಮನಕ್ಕೆ ತಂದರು.

ಸಚಿವ ಅರವಿಂದ ಲಿಂಬಾವಳಿ ಪ್ರತಿಕ್ರಯಿಸಿ, ಸಾಲುಮರ ತಿಮ್ಮಕ್ಕ ವೃಕ್ಷೆಧ್ಯಾನವನ್ನು ವಿಭಿನ್ನ ರೀತಿಯಲ್ಲಿ ಆಕರ್ಷಣೀಯವಾಗಿ ಜನರಿಗೆ ಅನುಕೂಲವಾಗುವಂತೆ ಹಾಗೂ ಇಲಾಖೆಯ ನಿಯಮವನ್ನು ಪಾಲಿಸಿಕೊಂಡು ವೃಕ್ಷೋದ್ಯಾನವನ್ನು ರಚಿಸಲಾಗುತ್ತದೆ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಶಾಸಕರ ಮುತುವರ್ಜಿಯನ್ನು ಶ್ಲಾಘಿಸಿದ ಸಚಿವರು, ಇಲ್ಲಿ ವಿವಿಧ ರೀತಿಯ ಗಿಡಗಳನ್ನು ನೆಡಲಾಗಿದೆ. ಟ್ರೀ ಪಾರ್ಕ್‌ನ ಕಾಮಗಾರಿಗಳು ಕೂಡಾ ನಡೆಯುತ್ತಿದೆ. ಈ ಟ್ರೀ ಪಾರ್ಕ್ ಸಂಪೂರ್ಣವಾಗಲು ಅನುದಾನದ ಸಮಸ್ಯೆ ಎದುರಾಗಿದೆ. ಶಾಸಕರ ಬೇಡಿಕೆಯಂತೆ ಹೆಚ್ಚುವರಿ ವಿಶೇಷ ಪೂರಕ ಅನುದಾನ ಒದಗಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸಿ,  ಶಾಸಕ ಹರೀಶ್ ಪೂಂಜ ಅವರ ಬೇಡಿಕೆಯಂತೆ ಅನುದಾನವನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಇದೇ ಸಂದರ್ಭ ಸಚಿವ ಅರವಿಂದ ಲಿಂಬಾವಳಿ ಅವರು ಟ್ರೀ ಪಾರ್ಕ್‌ನಲ್ಲಿ ಗಿಡನೆಟ್ಟು ನೀರೆರೆದು ಕಾಮಗಾರಿ ಯಶಸ್ವಿಗೆ ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯರಾದ ಶರತ್ ಕುಮಾರ್, ಅಂಬರೀಶ್, ಲೋಕೇಶ್, ಗೌರಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ರಾಜ್ಯ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಮಂಗಳೂರು ವೃತ್ತ ಸಿಸಿಎಫ್ ಪ್ರಕಾಶ್, ಡಿಸಿಎಫ್ ಕರಿಕಲನ್, ಕೆಎಫ್‌ಡಿಸಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಮಲಾ, ಸಾಮಾಜಿಕ ಅರಣ್ಯ ಡಿಸಿಎಫ್ ಶ್ರೀಧರ್, ಎಸಿಎಫ್ ಸುಬ್ರಹ್ಮಣ್ಯ ರಾವ್, ಸುಳ್ಯ ಎಸಿಎಫ್ ಅಸ್ಟಿನ್ ಸೋನ್ಸ್, ಕಾರ್ಕಳ ಎಸಿಎಫ್ ಸತೀಶ್ ಕುಮಾರ್, ಬೆಳ್ತಂಗಡಿ ಆರ್‌ಎಫ್‌ಒ ತ್ಯಾಗರಾಜ್, ವನ್ಯಜೀವಿ ವಿಭಾಗದ ಆರ್‌ಎಫ್‌ಒ ಸ್ಮೀತಾ, ಸಾಮಾಜಿಕ ಅರಣ್ಯ ಆರ್‌ಎಫ್‌ಒ ಸುಬ್ರಹ್ಮಣ್ಯ ಆಚಾರ್, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ., ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಮತ್ತಿತರ ಅಧಿಕಾರಿಗಳು ಜತೆಗಿದ್ದರು.