ಬೆಳ್ತಂಗಡಿ ನೆರೆ ಸಂತ್ರಸ್ತರಿಗೆ ರೂ. ೨.೭೪ ಕೋಟಿ ಪರಿಹಾರ ವಿತರಣೆ

ಉಜಿರೆ, ನ.೯- ರಾಜಕಾರಣ ಇರುವುದು ಬಡಜನರ ಬದುಕನ್ನು ಬದಲಾಯಿಸುವುದಕ್ಕೆ ಇರುವುದೇ ಹೊರತು ಸ್ವಾರ್ಥಸಾಧನೆಗೆ ಅಲ್ಲ ಎಂಬುದನ್ನು ಇಲ್ಲಿನ ಶಾಸಕರು ತೋರಿಸಿಕೊಟ್ಟಿದ್ದಾರೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಶ್ಲಾಘಿಸಿದರು.
ಅವರು ಬುಧವಾರ ಇಲ್ಲಿನ ಕಲಾಭವನದಲ್ಲಿ ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್ ವತಿಯಿಂದ ನಡೆದ ರೂ. ೨.೭೪ ಕೋಟಿ ಪರಿಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ನೆರೆ ಬಂದ ಸಂದರ್ಭ ಸಂತ್ರಸ್ಥರೊಂದಿಗೆ ನಾನಿದ್ದೇನೆ ಎಂಬ ಧೈರ್ಯ ತುಂಬಿ ಹಗಲಿರುಳು ಶ್ರಮಿಸಿ ನೊಂದ ಕುಟುಂಬಗಳಿಗೆ ದಾನಿಗಳ ನೆರವನ್ನು ಯಾಚಿಸುವ ಮೂಲಕ ೨೯೯ ಕುಟುಂಬಗಳಿಗೆ ೨.೭೪ ಕೋಟಿ ರೂ ನೆರವು ನೀಡುವ ಮೂಲಕ ರಾಜ್ಯದ ಎಲ್ಲಾ ಶಾಸಕರುಗಳಿಗೆ ಮಾದರಿಯಾದ ಸಾಧನೆಯನ್ನು ಶಾಸಕ ಹರೀಶ್ ಪೂಂಜಾ ಮಾಡಿದ್ದಾರೆ. ಶ್ರೀಮಂತಿಕೆಯ ಸದ್ಭಳಕೆ ಆಗಬೇಕಾದದ್ದು ಇನ್ನೊಬ್ಬರ ಸಂಕಷ್ಟಕ್ಕೆ. ಅದು ಬೆಳ್ತಂಗಡಿಯಲ್ಲಿ ಆಗಿದೆ. ಇಂತಹವರ ಸಂಖ್ಯೆ ಸಾವಿರ ಆಗಲಿ ಎಂದು ಸಚಿವರು ಆಶಿಸಿದರು.
ಬೆಳ್ತಂಗಡಿಗೆ ಅತಿವೃಷ್ಠಿ ಬಂದ ಬೆನ್ನಲ್ಲೆ ಕೋವಿಡ್ ಮಹಾಮಾರಿ ಸಂಕಷ್ಟವನ್ನು ತಂದೊಡ್ಡಿದೆ. ಇದನ್ನು ದಿಟ್ಟವಾಗಿ ಎದುರಿಸಿ ಗ್ರಾಮೀಣ ಪ್ರದೇಶದಲ್ಲೇ ಇಷ್ಟೊಂದು ದೊಡ್ಡ ಕಾರ್ಯ ಮಾಡಿರುವುದು ಶ್ರೇಷ್ಠ ಸಾಧನೆ. ಪ್ರತಿಯೊಬ್ಬರಲ್ಲಿಯೂ ಸಂಸ್ಕಾರಭರಿತ ವ್ಯಕ್ತಿತ್ವ ಇರಬೇಕು. ಶ್ರೀಮಂತಿಕೆಯ ಸದ್ಬಳಕೆ ಇನ್ನೊಬ್ಬರ ಸಂಕಷ್ಟಕ್ಕೆ ನೆರವಾಗುವುದರ ಮೂಲಕ ವಿನಃ ಐಶರಾಮಿ ಬದುಕಿಗಲ್ಲ. ಇಂದು ನೂರಾರು ಕುಟುಂಬಗಳು ನೆರವನ್ನು ನೀಡುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಮುಂದಿನ ದಿನಗಳಲ್ಲಿ ಈ ನೆರವಿನೊಂದಿಗೆ ಸರಕಾರದ ಅನುದಾನದೊಂದಿಗೆ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.
ವಿ.ಪ. ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ತಾಲೂಕಿನಲ್ಲಿ ನೆರೆ ಬಂದ ಸ್ಥಳಗಳನ್ನು ಕಂಡರೆ ಮರೆಯಲಾಗದ ಘಟನೆ. ಆದರೆ ದೇವರ ಅನುಗ್ರಹದಿಂದ ಮನೆ, ಕೃಷಿ ಹಾನಿಯಾಗಿದೆ ಹೊರತು ಜೀವ ಹಾನಿಯಾಗಿಲ್ಲಾ. ಪ್ರಪ್ರಥಮವಾಗಿ ಆಯ್ಕೆಯಾದ ಯುವ ಶಾಸಕ ಹರೀಶ್ ಪೂಂಜ ನೆರೆ ಸಂದರ್ಭದಲ್ಲಿ ಪಟ್ಟಂತಹ ಶ್ರಮ, ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರೊಂದಿಗೆ ಬೆರೆತ ಕ್ಷಣವನ್ನು ಯೋಚಿಸಿದರೆ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯದಂತೆ ಬೆಳ್ತಂಗಡಿಗೆ ಹರೀಶ್ ಪೂಂಜ ಮೋದಿಯಂತೆ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅಹೋರಾತ್ರಿ ತಾಲೂಕಿನ ಏಳಿಗೆಗಾಗಿ ಶ್ರಮವಹಿಸುವ ಯುವಕಗೆ ಕೈಜೋಡಿಸಿ ಶಕ್ತಿ ತುಂಬಬೇಕೆ ವಿನಃ ಅವರನ್ನು ಟೀಕಿಸಿ ಚಾರಿತ್ರ್ಯಹರಣ ಮಾಡುವುದು ಕ್ಷಮಾರ್ಹವಲ್ಲ. ಶ್ರಮವನ್ನು ಕುಂದಿಸಿದರೆ ದೇವರು ಅನುಗ್ರಹಿಸುವುದಿಲ್ಲ. ಇನ್ನೊಬ್ಬರ ಕಷ್ಟ ನೋಡಿ ಅನುಕಂಪ ಬರುವವನೇ ನಿಜವಾದ ಮನುಷ್ಯ ಅಂತಹ ಕಾರ್ಯವನ್ನು ಹರೀಶ್ ಪೂಂಜ ಮಾಡುತ್ತಿದ್ದಾರೆ ಎಂದರು.
ಶಾಸಕ ಹರೀಶ್ ಪೂಂಜ ಪ್ರಸ್ತಾವಿಕವಾಗಿ ಮಾತನಾಡಿ, ಜನರಿಂದ ಆಯ್ಕೆಯಾದ ಶಾಸಕನಾಗಿ ನಾನು ಜನರ ಸೇವೆ ಮಾಡಬೇಕು ಎಂಬುದೇ ನನ್ನ ಚಿಂತೆಯಾಗಿದೆ ಅಸಕ್ತ ಕುಟುಂಬಗಳಿಗೆ ಏನಾದರೂ ನೆರವು ನೀಡಬೇಕು ಎಂಬುದು ಚಿಂತಿಸಿದಾಗ ಪ್ರಥಮವಾಗಿ ಉದ್ಯಮಿ ಶಶಿಧರ ಶೆಟ್ಟಿಯವರು ೧೦ ಲಕ್ಷ ರೂ. ದೇಣಿಗೆ ನೀಡಿ ನೆರೆ ಸಂತ್ರಸ್ತರಿಗೆ ವಿತರಿಸಲು ಸೂಚಿಸಿದ್ದರು. ಆದರೆ ಇದನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂಬ ಉದ್ದೇಶದಿಂದ ಸಮಾನ ಮನಸ್ಕರನ್ನು ಒಗ್ಗೂಡಿಸಿ ಅಭಿಪ್ರಾಯ ಸಂಗ್ರಹಿಸಿದಾಗ ಈ ಕಾಳಜಿ ರಿಲೀಫ್ ಫಂಡ್ ಪ್ರಾರಂಭಿಸುವ ಕಲ್ಪನೆ ಬಂದಿದೆ. ಬಳಿಕ ಡಾ| ಹೆಗ್ಗಡೆಯವರು ೫೦ ಲಕ್ಷ ರೂ. ಡಾ| ಮೋಹನ್ ಆಳ್ವಾರವರು ೨೫ ಲಕ್ಷ ರೂ, ಬೆಂಗಳೂರಿನ ಉದ್ಯಮಿ ೨೫ ಲಕ್ಷ ರೂ., ಹಾಗೂ ಅನೇಕ ದಾನಿಗಳು ನೆರವನ್ನು ನೀಡುವ ಮೂಲಕ ಶಕ್ತಿ ತುಂಬಿದ್ದಾರೆ. ಇದರ ವ್ಯವಹಾರವನ್ನು ಕಾರ್ಯದರ್ಶಿಗಳಾದ ಧನಂಜಯ ರಾವ್ ಮತ್ತು ಕೋಶಾಧಿಕಾರಿ ನಂದಕುಮಾರ್ ನೋಡಿಕೊಳ್ಳುತ್ತಿದ್ದು ನಾನು ಯಾವುದೇ ಚೆಕ್‌ಗೆ ಸಹಿ ಹಾಕುವವನಲ್ಲ. ಈ ಫಂಡ್‌ನಿಂದ ಹಣ ಮಾಡಿದ್ದೇನೆ ಎಂದು ಆರೋಪ ಮಾಡುವವರಿಗೆ ಇಲ್ಲಿನ ಮಾರಿಗುಡಿ ಅಮ್ಮನವರ ಸಮ್ಮುಖದಲ್ಲಿ ಪ್ರಮಾಣ ಮಾಡಿ ಹೇಳುತ್ತಿದ್ದು ಯಾವುದೇ ರೀತಿಯ ಹಣ ಮಾಡುವ ಉದ್ದೇಶವಿಲ್ಲ ಜನರ ಸೇವೆಯೊಂದೇ ನನ್ನ ಗುರಿ.ಲೆಕ್ಕ ಕೊಡಿ ಎನ್ನುವವರು ನೆರೆ ಬಂದ ಸಂದರ್ಭದಲ್ಲಿ ಎಷ್ಟು ಕುಟುಂಬಗಳನ್ನು ಭೇಟಿಯಾಗಿದ್ದೀರಿ ಎಂಬುದು ಇಡೀ ತಾಲೂಕಿಗೆ ಗೊತ್ತಿದೆ ಎಂದರು.
ಧ.ಗ್ರಾ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥ್ ಅವರು ಕಸ್ತೂರಿರಂಗನ್ ವರದಿಯ ಅರಿವನ್ನು ಜನರಿಗೆ ಮೂಡಿಸಿ ಅದರಿಂದ ಹೇಗೆ ಪ್ರಯೋಜನ ಪಡೆಯಬಹುದು ಎಂಬುದನ್ನು ಜನಪ್ರತಿನಿಧಿಗಳು ಚಿಂತಿಸಬೇಕಾಗಿದೆ. ಡಾ.ಹೆಗ್ಗಡೆಯವರು ಪಶ್ಚಿಮಘಟ್ಟ ಅಧ್ಯಯನ ಪೀಠವನ್ನು ಘೋಷಣೆ ಮಾಡಿದ್ದು ಅದಕ್ಕಾಗಿ ರೂ.೨ ಕೋಟಿ ತೆಗೆದಿರಿಸಿದ್ದಾರೆ ಎಂದರು.
ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಕಾಳಜಿ ರಿಲೀಫ್ ಫಂಡ್‌ನ ಸದಸ್ಯರುಗಳಾದ ಡಾ| ಗೋಪಾಲಕೃಷ್ಣ, ಮೋಹನ್ ಉಜಿರೆ, ರಾಜೇಶ್ ಪೈ, ಲ್ಯಾನ್ಸಿ ಪಿಂಟೋ, ಡಾ| ಎಂ.ಎಮ್. ದಯಾಕರ್, ಪ್ರವೀಣ್, ಜಗದೀಶ್, ಅಬೂಬಕ್ಕರ್, ಗಣೇಶ್, ನಾರಾಯಣ್ ಸುವರ್ಣ, ಜಯಕರ್ ಶೆಟ್ಟಿ, ಕೋಶಾಧಿಕಾರಿ ನಂದಕುಮಾರ್ ಉಪಸ್ಥಿತರಿದ್ದರು. ಕಾಳಜಿ ರಿಲೀಫ್ ಫಂಡ್‌ನ ಪ್ರಧಾನ ಕಾರ್ಯದರ್ಶಿ ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು.