ಬೆಳ್ತಂಗಡಿ ಎಎಸ್‌ಐಯಿಂದ ದೌರ್ಜನ್ಯ ಕಾನೂನು ಉಲ್ಲಂಘಿಸಿದ ಎಎಸ್‌ಐ ವಿರುದ್ದ ಕಾನೂನು ಹೋರಾಟ


ಪುತ್ತೂರು, ನ.೩- ಅಂಗಡಿ ಕಟ್ಟಡ ತೆರವು ಕುರಿತು ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಬೆಳ್ತಂಗಡಿ ಎಎಸ್‌ಐ ರಾಮಯ್ಯ ಅವರು ಇಬ್ಬರು ಸಿಬ್ಬಂದಿಗಳೊಂದಿಗೆ ಪಿ. ಮಹಮ್ಮದ್ ಅವರ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಅವರಿಗೆ ಹಲ್ಲೆ ನಡೆಸಿರುವು ಖಂಡನೀಯವಾಗಿದ್ದು, ದೌರ್ಜನ್ಯ ಎಸಗಿದ ಎಎಸ್‌ಐ ರಾಮಯ್ಯ ಅವರ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು
ಜಾರಿಗೆಬೈಲು ನಿವಾಸಿ ಅಬ್ದುಲ್ ಹಕೀಂ ಎಂಬವರು ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಜಾರಿಗೆಬೈಲು ಎಂ.ಎಂ. ಕಾಂಪ್ಲೆಕ್ಸ್ ಕಟ್ಟಡದ ವಸತಿ ಸಮುಚ್ಚಯದಲ್ಲಿ ಮಹಮ್ಮದ್ ಅವರು ವಾಸವಿದ್ದು ಅದೇ ಸಮುಚ್ಚಯದಲ್ಲಿನ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಕಳೆದ ಮಾರ್ಚ್ ೧, ೨೦೨೦ ರಂದು ಐದು ವರ್ಷದ ಬಾಡಿಗೆ ಆಧಾರದಲ್ಲಿ ಅಂಗಡಿ ಕಟ್ಟಡವನ್ನು ಕಟ್ಟಡದ ಮಾಲಕರಾದ ಶಾಯಿನ ಯಾನೆ ಹಾಜಿರಾ ಎಂಬವರು ಪಿ.ಮಹಮ್ಮದ್ ಎಂಬವರಿಗೆ ನೀಡಿರುತ್ತಾರೆ. ಇದಕ್ಕಾಗಿ ೫೦ ಸಾವಿರ ಡಿಪಾಸಿಟ್ ಕೂಡಾ ನೀಡಲಾಗಿದೆ. ಆದರೆ ಯಾವುದೇ ಕರಾರು ಪತ್ರ ಹೊಂದಿಲ್ಲದೆ ವಿಶ್ವಾಸ ದಿಂದ ಬಾಡಿಗೆಗೆ ನೀಡಲಾಗಿದೆ. ಬಳಿಕ ಈ ಕೊಠಡಿಯನ್ನು ಹೊಟೇಲ್ ಹಾಗೂ ಇತರ ಅಂಗಡಿ ವ್ಯಾಪಾರಕ್ಕೆ ಸುಮಾರು ೧೦ ಲಕ್ಷ ರೂ. ಖರ್ಚು ಮಾಡಿ ಅಭಿವೃದ್ಧಿ ಪಡಿಸಿದ್ದಾರೆ. ಅಲ್ಲದೆ ಇದೇ ಕಟ್ಟಡದಲ್ಲಿರುವ ವಸತಿ ಸಮುಚ್ಚಯದಲ್ಲಿ ಮಹಮ್ಮದ್ ಅವರು ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಇದೀಗ ಏಕಾಏಕಿ ಅಂಗಡಿ ಮಾಲಕರು ವ್ಯಾಪಾರ ನಡೆಸದಂತೆ ತಾಕೀತು ಮಾಡಿದ್ದಾರೆ. ಅಲ್ಲದೆ ಮನೆಯನ್ನೂ ಬಿಡುವಂತೆ ಒತ್ತಡ ಹೇರುತ್ತಿದ್ದಾರೆ. ಪರಿಣಾಮ ಈಗಾಗಲೇ ಸಾಲದಲ್ಲಿ ಮುಳುಗಿದ್ದರಿಂದ ಮುಂದಿನ ಐದು ವರ್ಷಗಳ ತನಕ ನನಗೆ ಯಾವುದೇ ಕಿರುಕುಳ ಕೊಡದಂತೆ ಹಾಗೂ ಅಂಗಡಿ ಬಿಟ್ಟುಕೊಡುವಂತೆ ಬಲವಂತ ಮಾಡದಂತೆ ನ್ಯಾಯಾಲಯಕ್ಕೆ ಮಹಮ್ಮದ್ ಅವರು ದೂರು ಸಲ್ಲಿಸಿದ್ದು, ನ್ಯಾಯಾಲಯ ನ.೧೨ರ ತನಕ ಯಥಾಸ್ಥಿತಿ ಕಾಪಾಡುವಂತೆ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಬೆಳ್ತಂಗಡಿ ಠಾಣೆಯ ಎಎಸ್‌ಐ ರಾಮಯ್ಯ ಅವರು ಅಂಗಡಿಗೆ ಆಗಮಿಸಿ ಮಹಮ್ಮದ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಮಹಮ್ಮದ್ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು.
ಪೊಲೀಸ್ ದೌರ್ಜನ್ಯ ನಡೆಸಿದ ಎಎಸ್‌ಐ ರಾಮಯ್ಯ ಅವರ ವಿರುದ್ದ ಕಾನೂನು ಹೋರಾಟ ನಡೆಸಲಾಗು ವುದು. ಈ ಬಗ್ಗೆ ಈಗಾಗಲೇ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ದೌರ್ಜನ್ಯಕ್ಕೆ ಒಳಗಾದ ಪಿ.ಮಹಮ್ಮದ್ ಹಾಗೂ ಹೈದರ್ ಉಪಸ್ಥಿತರಿದ್ದರು.