
ಹರಿಹರ.ಮೇ.2; ಆನೇವಾಲಾ ಐಸಾ ಕಲ್ ಹೋ, ಹೋ ನಗರ್ ನಗರ ಮೇಂ ಬಾಹುಬಲಿ , ಸಾರೀ ಧರತೀ ಧರ್ಮಸ್ಥಳ ಹೋ ಹಮ ಯಹೀ ಕಾಮನಾ ಕರತೇಂ ಹೈ”೧೯೯೩ ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ರವೀಂದ್ರ ಜೈನ್ ಅವರ ಕಂಚಿನ ಕಂಠದಿಂದ ಹೊರಹೊಮ್ಮಿದ ಈ ಹಾಡು ಭಾರತದ ಉದ್ದಗಲಕ್ಕೂ ಬಾಹುಬಲಿ ಹಾಗೂ ಧರ್ಮಸ್ಥಳದ ಮಹಿಮೆಯನ್ನು ಸಾರಿತ್ತು. ಬಾಹುಬಲಿ ಎಂದಾಕ್ಷಣ ನೆನಪಾಗುವುದು ಶ್ರವಣಬೆಳಗೊಳ. ಬೆಳ್ಗೊಳ ಎಂದಾಕ್ಷಣ ಸ್ಮೃತಿಪಟಲದಲ್ಲಿ ಮೂಡುವುದೇ ಬಾಹುಬಲಿ ಯ ಪಾದಪದ್ಮಸೇವಕ, ಜಿನಧರ್ಮ ದೀಪಕ, ಕರ್ಮಯೋಗಿ, ಸ್ವಸ್ತಿಶ್ರೀ ಚಾರುಕೀರ್ತಿ ಮಹಾಸ್ವಾಮೀಜಿಯವರು. ರತ್ನವರ್ಮ ಅವರ ಪೂರ್ವಾಶ್ರಮದ ಹೆಸರು. ಶ್ರೀಗಳು ೧೯೪೯ ರ ಮೇ ತಿಂಗಳ ೩ ನೇ ತಾರೀಖಿನಂದು ಜನಿಸಿದ್ದರು. ಇಂದು ಶ್ರೀಗಳ ಜನ್ಮದಿನ.ನಾಲ್ಕು ಮಹಾಮಸ್ತಕಾಭಿಷೇಕಗಳ ನೇತೃತ್ವ ವಹಿಸದೇ ಹೋಗಿದ್ದರೆ, ಸಂಸ್ಕೃತವನ್ನೇ ಮೃತಭಾಷೆ ಎನ್ನುವವರ ನಡುವೆ, ಪ್ರಾಕೃತ ಭಾಷೆಗೆ ಹೊಸ ಮುನ್ನುಡಿ ಬರೆಯದೇ ಹೋಗಿದ್ದರೆ,ಹನ್ನೆರೆಡು ವರ್ಷಗಳ ಕಾಲ ತಪಸ್ಸನ್ನು ಮಾಡಿ ನೂರಾರು ವರ್ಷಗಳ ಕಾಲ ಆಗದೇ ಇದ್ದ ಧವಲಾ, ಜಯಧವಲಾ ಹಾಗೂ ಮಹಾಧವಲಾ ಗಳ ಪ್ರಕಟಣೆ ಮಾಡದೇ ಹೋಗಿದ್ದರೆ, ದಿಗಂಬರ ಮುನಿಗಳಾಗದೇ ಇದ್ದರೂ ದಿಗಂಬರ ಮುನಿಗಳಂತೆ ಹತ್ತಾರು ವರ್ಷಗಳ ಕಾಲ ಫೋನ್, ಮೊಬೈಲ್ ಹಾಗೂ ವಾಹನಗಳನ್ನು ಬಳಸದೇ ಕಠಿಣಾತಿಕಠಿಣ ವ್ರತಗಳನ್ನು ಸಾಧಿಸದೇ ಹೋಗಿದ್ದರೆ, ಹನ್ನೆರಡು ಮಠಗಳಿಗೆ ಶಿಷ್ಯಂದಿರನ್ನು ತಯಾರು ಮಾಡಿ ನೀಡದೇ ಹೋಗಿದ್ದರೆ, ಶ್ರವಣಬೆಳಗೊಳದಲ್ಲಿ ಯಶಸ್ವಿಯಾಗಿ ಕನ್ನಡ ಸಮ್ಮೇಳನವನ್ನು ನಿರ್ವಹಿಸದೇ ಹೋಗಿದ್ದರೆ, ಜೈನಸಮಾಜದಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ಮೂಡಿಸದೇ ಹೋಗಿದ್ದರೆ ಇಹಕ್ಕೂ ಪರಕ್ಕೂ ದಾರಿದೀಪದಂತಿರುವ ಶ್ರವಣಬೆಳಗೊಳದಲ್ಲಿ ಹಾಗೂ ಜೈನ ಸಮಾಜದ ಈ ಕನ್ನಡ ನೆಲದಲ್ಲಿ ನಲ್ವತ್ತು ವರ್ಷಗಳ ಕಾಲದಲ್ಲಿ ಇಂತಹಾ ಇತಿಹಾಸ ನಿರ್ಮಿಸಲು ಸಾಧ್ಯವಿರುತ್ತಿರಲಿಲ್ಲ. ಬೆಳಗೊಳದ ಮಹಾಬೆಳಕು ಜಗತ್ತಿಗೆ ದೊರೆಯುತ್ತಿರಲಿಲ್ಲ೧೯೬೯-೭೦ ಶ್ರೀಗಳು ಶ್ರವಣಬೆಳಗೊಳದ ಪೀಠಕ್ಕೆ ಬಂದತಹ ವರ್ಷ. ಸ್ವಾತಂತ್ಯ್ರಾನಂತರ ೧೯೫೩ ಹಾಗೂ ೧೯೬೭ ಬಿದಿರಿನ ಅಟ್ಟಣಿಗೆಗಳಿಂದ ನಿರ್ಮಿತವಾದ ವ್ಯವಸ್ಥೆಯಲ್ಲಿ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ನಡೆದಿತ್ತು. ಸುಮಾರು ಮೂರು ಮೂರುವರೆ ಲಕ್ಷ ಜನ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಯಾವ ಯಾತ್ರಾರ್ಥಿಗಳಿಗೂ ಉಳಿದುಕೊಳ್ಳುವ, ಇಳಿದುಕೊಳ್ಳುವ ವ್ಯವಸ್ಥೆ ಇರಲಿಲ್ಲ. ೧೯೬೮ ರ ಮಹಾಮಸ್ತಕಾಭಿಷೇಕದ ನಂತರ ಶ್ರೀಮಠದಲ್ಲಿ ಆರ್ಥಿಕ ಮುಗ್ಗಟ್ಟು ತಲೆದೋರಿತ್ತು. ಬರುವ ಯಾತ್ರಿಕರ ಸಂಖ್ಯೆಯೂ ತುಂಬಾ ಕಡಿಮೆಯಾಗಿತ್ತು. ಅದೇ ಆಗತಾನೆ ಪ್ರಾರಂಭವಾದ ಶ್ರೀಮಠದ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿರಲಿಲ್ಲ, ಅಧ್ಯಾಪಕರಿಗೆ ಸಂಬಳ ಕೊಡಲು ಹಣವಿರಲಿಲ್ಲ.ಒಟ್ಟಿನಲ್ಲಿ ಸಮಸ್ಯೆಗಳ ಸರಮಾಲೆಗೆ ಸ್ವಸ್ತಿಶ್ರೀ ಚಾರುಕೀರ್ತಿ ( ರತ್ನವರ್ಮ ಪೂರ್ವಾಶ್ರಮದ ಹೆಸರು)ಗಳು ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿತ್ತು. ಮೊದಲೇ ಅಲ್ಪಸಂಖ್ಯಾತ ಜನ ಸಮುದಾಯವಾಗಿರುವ ಜೈನರಲ್ಲಿ ಒಗ್ಗಟ್ಟಿನ ಬಲವೂ ಕಡಿಮೆಯಿತ್ತು. ಸವಾಲುಗಳೇ ತುಂಬಿರುವ ಈ ಶ್ರೀಮಠಕ್ಕೆ ತಲೆ ಕೊಡುವ ಮುನ್ನ ಸ್ವಾತ್ಮ ಶ್ರೇಯಸ್ಸಿಗಾಗಿ ದಿಗಂಬರ ಮುನಿಪಂಥವನ್ನೇ ಸ್ವೀಕರಿಸಿ ನಿರಾತಂಕವಾಗಿ ನಡೆದು ಹೋಗಿ “ಆತ್ಮಸಿದ್ಧಿ” ಯಲ್ಲಿ ತೊಡಗಬಹುದಿತ್ತು. ಆದರೆ ಶ್ರವಣಬೆಳಗೊಳದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಾಣವಾಗುತ್ತಿರಲಿಲ್ಲ. ಪರಮ ದಿಗಂಬರನೂ, ಔನ್ನತ್ಯದ ಶಿಖರನೂ ಹಾಗೂ ಮಹಿಮಾವಂತನಾದ ಬಾಹುಬಲಿ ಅದಕ್ಕೆ ಆಸ್ಪದ ನೀಡಲಿಲ್ಲ. ಮುಂದಿನದ್ದು ಬರಿಮಠವಾಗಿದ್ದ ಶ್ರವಣಬೆಳಗೊಳದ ಜೈನಮಠ ಶ್ರೀಮಠವಾಗಿದ್ದು ಜೈನರ ಪುಣ್ಯ ಭಾಗದ ಇತಿಹಾಸ.ಶ್ರೀಮಠಕ್ಕೆ ವಿದ್ಯಾರ್ಜನೆಗಾಗಿ ಬಂದಂತಹ ವಿದ್ಯಾರ್ಥಿಗಳ ಜೊತೆಗೂಡಿ ತೆಂಗಿನಮರಗಳಿಗೆ ನೀರುಹೊತ್ತು ನೀರುಣಿಸುವ ಈ ” ಕರ್ಮಯೋಗಿ ” ಯನ್ನು ಜೈನ ಜಗತ್ತು ಬಿಟ್ಟ ಕಣ್ಣುಗಳಿಂದ ನೋಡಿತು. ೧೯೮೧ ರ ಭಗವಾನ್ ಬಾಹುಬಲಿಗೆ ಸಾವಿರ ವರ್ಷಗಳು ತುಂಬುವ ಅಪೂರ್ವ ಸನ್ನಿವೇಶ. ಅದೇ ವರ್ಷ ಮಹಾಮಸ್ತಕಾಭಿಷೇಕ ನಡೆಸುವ ಸವಾಲು. ಕೇವಲ ಇಪ್ಪತ್ತು ವರ್ಷದ ನವತರುಣ ಚಾರುಕೀರ್ತಿಗಳಿಗೆ ಎದುರಾದ ಸವಾಲು. ಅಂತಹಾ ಅಪೂರ್ವ ಸನ್ನಿವೇಶದ ನೇತೃತ್ವ ವಹಿಸಲು ಕನ್ನಡಿಗರಾದ ಹಾಗೂ ಜಗತ್ತಿನ ಜೈನ ಸಮುದಾಯದ ಆಶಾದೀಪವಾಗಿದ್ದ ಏಲಾಚಾರ್ಯ ವಿದ್ಯಾನಂದರನ್ನು ದೆಹಲಿಯಿಂದ ಹೊರಡಿಸಿಕೊಂಡು ಬರುವ ಅಪೇಕ್ಷೆ ಚಾರುಕೀರ್ತಿಗಳದ್ದು. ಅದರಂತೆಯೇ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು, ಮೈಸೂರಿನ ಶ್ರೀ ವರ್ಧಮಾನಯ್ಯರೊಂದಿಗೆ ಒಡಗೂಡಿ ವಿದ್ಯಾನಂದ ಮುನಿಗಳನ್ನು ಕಾಣಲು ಹತ್ತುವರ್ಷ ಮುಂಚೆಯೇ ಎಂದರೆ ೧೯೭೧ ರಲ್ಲಿಯೇ ಯೋಜನೆ ರೂಪಿಸಿದರು. ವಿದ್ಯಾನಂದ ಮುನಿಗಳನ್ನು ಕಂಡು ಭಕ್ತಿಯಿಂದ ಕೈ ಮುಗಿದು ನಿಂತಾಗ ಮುನಿಗಳು “ಶ್ರವಣಬೆಳಗೊಳದಲ್ಲೇನಿದೆ ಬಾಹುಬಲಿಯ ಹೊರತಾಗಿ, ಬಂದವರಿಗೆ ಇಳಿದುಕೊಳ್ಳುವ ಸೂಕ್ತ ವ್ಯವಸ್ಥೆಯೂ ಇಲ್ಲ ಇಗೋ ಇಲ್ಲಿರುವ ಈ ಉತ್ತರಭಾರತೀಯರನ್ನು ನೋಡಿ. ಯಾವ ಕ್ಷೇತ್ರಗಳಿಗೆ ಹೋದರೂ ಯಾತ್ರಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ” ಎಂದರಲ್ಲದೇ ಅಲ್ಲಿರುವ ಧರ್ಮಾತ್ಮರನ್ನು ಚಾರುಶ್ರೀಗಳಿಗೆ ಪರಿಚಯಿಸಿದರು. ” ಜ್ಞಾನಪೀಠ ಪ್ರಶಸ್ತಿ ” ಯ ಸ್ಥಾಪಕರಲ್ಲೊಬ್ಬರಾದ ಶ್ರೀ ಶ್ರೇಯಾಂಸ ಪ್ರಸಾದ್ ಜೈನ್ ಅದರಲ್ಲಿ ಪ್ರಮುಖರು. ಊಟಕ್ಕೆ ಹೋದವರಿಗೆ ಹಬ್ಬದೂಟವೇ ದೊರೆತಂತಾಯಿತು. ಸಹಸ್ರಮಾನದ ಮಹಾಮಸ್ತಕಾಭಿಷೇಕಕ್ಕೆ ಧರ್ಮಸ್ಥಳದ ಹೆಗ್ಗಡೆಯವರೂ ಸೇರಿದಂತೆ ಅನೇಕ ಉತ್ತರ ಭಾರತೀಯರ ಸಹಯೋಗವೂ ದೊರೆತಂತಾಯಿತು. ಸಹಸ್ರಮಾನದ ಮಹಾಮಸ್ತಕಾಭಿಷೇಕ ಕ್ಕೆ ಎಂದರೆ ೧೯೮೧ ರಲ್ಲಿ ಹತ್ತಾರು ವ್ಯವಸ್ಥಿತ ಯಾತ್ರೀ ನಿವಾಸಗಳೂ, ಮುನಿನಿವಾಸಗಳೂ ತಲೆಯೆತ್ತಿ ನಿಂತವು. ಬಡವಾಗಿದ್ದ ಶಾಲಾ ಕಾಲೇಜುಗಳಿಗೆ ಸಹಾಯ ಧನವನ್ನು ಉತ್ತರಭಾರತದಿಂದ ಸಂಗ್ರಹಿಸಿಲು ಶ್ರೀ ಜಿ.ಬ್ರಹ್ಮಪ್ಪನವರನ್ನೂ ಹಾಗೂ ವಿಶೇಷ ಚೇತನರಾಗಿದ್ದ ಶ್ರೀ ಏಜಾಸುದ್ದೀನ್ ರನ್ನೂ ಕಳುಹಿಸಿಕೊಡಲಾಯಿತು. ಶಾಲಾಕಾಲೇಜುಗಳು ವ್ಯವಸ್ಥಿತ ರೂಪ ಪಡೆದವು. ಪ್ರಾಕೃತ ವಿಷಯಗಳ ನಿಪುಣರೂ ಶಾಸ್ತ್ರಿಗಳೂ ತಯಾರಾದರು. ಬ್ರಹ್ಮಚರ್ಯಾಶ್ರಮದಲ್ಲಿ ಭವಿಷ್ಯದ ಭಟ್ಟಾರಕರು (ಮಠದ ಸ್ವಾಮೀಜಿ) ವಿಶೇಷ ಆಸ್ಥೆಯಿಂದ ತಯಾರಾದರು. ಶ್ರವಣಬೆಳಗೊಳ ಉತ್ತರಭಾರತೀಯರ ಹಾಗೂ ದಕ್ಷಿಣ ಭಾರತೀಯರ ಸಂಪರ್ಕಸೇತುವಾಯಿತು. ಈ ಎಲ್ಲ ಬೆಳವಣಿಗೆಗಳೂ ಚಾರುಶ್ರೀಗಳನ್ನು ತಣಿಸಲಿಲ್ಲ. ಅನೇಕ ಮಂದಿರಗಳ ಜೀರ್ಣೋದ್ಧಾರಗಳ ಜೊತೆಗೆ ಶ್ರವಣಬೆಳಗೊಳದ ಸುತ್ತ ಇರುವ ಎಲ್ಲ ಜಾತಿ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಅನೇಕ ಸಮಾಜಸೇವೆ ಚಟುವಟಿಗೆಗಳಿಗೆ ವ್ಯವಸ್ಥೆಮಾಡಿದರು. ಮಕ್ಕಳ ಆಸ್ಪತ್ರೆ ಯನ್ನು ಪ್ರಾರಂಭ ಮಾಡಿದಲ್ಲದೇ ಡಾ. ನಾಭಿರಾಜ ಅರಿಗರ ಸೇವೆ ಅನೇಕ ರೋಗಿಗಳಿಗೆ ಉಚಿತವಾಗಿ ಲಭಿಸುವಂತೆ ಮಾಡಿದರು. ಶ್ರೀಗಳು ತಣಿಯಲಿಲ್ಲ, ದಣಿಯಲಿಲ್ಲ. ತಮಗೇ ತಾವೇ ನಿರ್ಭಂಧಗಳನ್ನು ಹಾಕಿಕೊಂಡು, ವರ್ಷಗಳ ಕಾಲ ವಾಹನಗಳನ್ನೇ ಬಳಸಲಿಲ್ಲ. ಫೋನ್, ಮೊಬೈಲ್ ಫೋನ್ ಬಳಸದೇ ನೂರಾರು ವರ್ಷಗಳಿಂದ ಸಾಧ್ಯವಾಗದೇ ಇದ್ದ ಧವಳತ್ರಯ ಗ್ರಂಥಗಳ ಪ್ರಕಟಣೆ ಮಾಡಿದರು. ಆದರೆ ನೆನಪಿರಲಿ, ಇದೇ ಸಮಯದಲ್ಲಿ ಮಹಾಮಸ್ತಕಾಭಿಷೇಕಗಳೇ ಆಗಲಿ, ಚಾತುರ್ಮಾಸದ ಕಾರ್ಯಕ್ರಮಗಳಾಗಲಿ, ಜೈನ ವಿದ್ವತ್ ಸಮ್ಮೇಳನಗಳಾಗಲಿ, ಮಹಿಳಾಸಮ್ಮೇಳನಗಳಾಗಲೀ, ಪ್ರಾಕೃತ ಗೋಷ್ಠಿಗಳಾಗಲೀ, ಶಾಸನ ಸಂಬಂಧೀ ಸರ್ಕಾರೀ ಕಾರ್ಯಕ್ರಮಗಳಾಗಲೀ ಚಾಚೂ ತಪ್ಪದೇ ಯಶಸ್ವಿಯಾಗಿ ನಡೆದಿವೆ. ಆಧುನಿಕ ಸಂಪರ್ಕ ಸಾಧನಗಳನ್ನು ಬಳಸದೇ ಈ ದೇಶದ ಪ್ರಧಾನ ಮಂತ್ರಿಗಳೂ, ದೇಶಾಧ್ಯಕ್ಷರೊಡನೆ ಅದ್ಹೇಗೆ ಸಂವಹನ ಅವರಗೇ ಸಾಧ್ಯವಿತ್ತೆಂದು ಆ ಬಾಹುಬಲಿಯೇ ಬಲ್ಲ.ಶ್ರೀ ಮಠ ಸಶಕ್ತವಾಗಿದ್ದ ಕಾಲದಲ್ಲಿ ಸರ್ಕಾರ ” ಕನ್ನಡ ಸಾಹಿತ್ಯ ಸಮ್ಮೇಳನ” ವನ್ನು ಶ್ರವಣಬೆಳಗೊಳದಲ್ಲಿ ನಡೆಸುವ ನಿರ್ಧಾರ ಕೈಗೊಂಡಿದ್ದನ್ನು ಶ್ರೀಗಳು ಸ್ವಾಗತಿಸಿದರು. ಅಷ್ಟೇ ಅಲ್ಲದೇ ಬೇರೆ ಬೇರೆ ಕಡೆಗೆ ನಡೆದ ಸಾಹಿತ್ಯ ಸಮ್ಮೇಳನಗಳ ವರದಿ ತರಿಸಿಕೊಂಡು ಅಲ್ಲಿ ಆಗಿದ್ದ ಅಧ್ವಾನಗಳು ಹಾಗೂ ನ್ಯೂನತೆಗಳನ್ನು ಖುದ್ದು ಪರಿಶೀಲಿಸಿದರು. ನಂತರ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಅಭೂತ ಪೂರ್ವ ಯಶಸ್ಸನ್ನು ಪಡೆಯಿತು. ಅದರ ಸಂಪೂರ್ಣ ಖರ್ಚು ವೆಚ್ಚಗಳನ್ನೂ ಹಾಗೂ ಜವಾಬ್ದಾರಿಯನ್ನು ಶ್ರೀಗಳ ನೇತೃತ್ವದಲ್ಲಿ ದಿಗಂಬರ ಜೈನ ಮಠವೇ ವಹಿಸಿಕೊಂಡಿತು. ಸರ್ಕಾರದ ಮೇಲೆ ಅದರ ಭಾರ ಬೀಳಲಿಲ್ಲ. ಈ ಎಲ್ಲ ಕೆಲಸ ಕಾರ್ಯಗಳ ನಡುವೆಯೂ ಶ್ರೀಗಳ ಮೇಲೆ ಟೀಕಾಪ್ರಹಾರಗಳು ನಡೆದೇ ಇದ್ದವು. ಕೆಲವು ವಿಷಯಗಳು ಶ್ರೀಗಳನ್ನು ತಲುಪುತ್ತಿದ್ದವು. ಶ್ರೀಗಳು ಮಾತ್ರ ಯಾರಿಗೂ ಉತ್ತರ ಕೊಡುವ ಗೋಜಿಗೆ ಹೋಗುತ್ತಿರಲಿಲ್ಲ. ಯಾರನ್ನೂ ಕುರಿತು ಆ ವಿಷಯವಾಗಿ ಗುರಿ ಮಾಡಲಿಲ್ಲ. ಕರ್ಮ ಸವೆಸುವ ಮಾರ್ಗವನ್ನು ಹಿಡಿದು ನಡೆದೇ ನಡೆದರು. ” ಕರ್ಮಯೋಗಿ” ಗಳಾಗಿ ಸಮಾಜವನ್ನು ಮುನ್ನಡೆಸಿದರು. ಕರ್ಮಯೋಗಿ ಗಳಾಗಿ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದರು. ಇಹಕ್ಕೂ ಹಾಗೂ ಪರಕ್ಕೂ ಧರ್ಮಸೇತುವಾಗಿರುವ ಶ್ರವಣಬೆಳಗೊಳದ ಮಹಾಬೆಳಕಾಗಿ ಬಾಳಿ ಬೆಳಗಿದರು.
ಲೇಖನ : ಧರಣೇಂದ್ರ ಪದ್ಮರಾಜ್ ಹರಿಹರ
9481748900