ಬೆಳೆ ಹಾನಿ ಸರ್ವೆ ಕಾರ್ಯಕೈಗೊಂಡು ಪರಿಹಾರ ವಿತರಿಸಲು ಸೂಚನೆ


ಚಿತ್ರದುರ್ಗ.ಸೆ.೧೭; ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ಹಾನಿಗೊಳಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯನ್ನು ಕೃಷಿ, ತೋಟಗಾರಿಕೆ, ಕಂದಾಯ ವಿವಿಧ ಇಲಾಖೆಗಳು ಸಮಾರೋಪಾದಿಯಲ್ಲಿ ಜಂಟಿ ಸರ್ವೇ ಕಾರ್ಯನಡೆಸಿ, ಪರಿಹಾರ ತಂತ್ರಾಂಶದಲ್ಲಿ ನಮೂದಿಸಿ, ಸಂಬಂಧಪಟ್ಟವರಿಗೆ ತ್ವರಿತವಾಗಿ ಪರಿಹಾರ ವಿತರಣೆಗೆ ಕ್ರಮವಹಿಸಬೇಕು  ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಮಳೆಯಿಂದಾದ ಹಾನಿಗೆ ಸಂಬಂಧಿಸಿದಂತೆ ಪರಿಹಾರ ತಂತ್ರಾಂಶದಲ್ಲಿ ಇಲ್ಲಿಯವರೆಗೆ 30,000 ಪ್ರಕರಣಗಳನ್ನು ನಮೂದು ಮಾಡಲಾಗಿದ್ದು, 4361 ಮಂದಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ತಂತ್ರಾಂಶದಲ್ಲಿ ತಕ್ಷಣ ನಮೂದು ಮಾಡುವಂತೆ ಸಚಿವರು ತಿಳಿಸಿದರು.ಜೂನ್ ಮಾಹೆಯಿಂದ ಈವರೆಗೆ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ 1 ಜೀವಹಾನಿಯಾಗಿದ್ದು, ರೂ.5 ಲಕ್ಷ ಪರಿಹಾರ ಮೊತ್ತ ವಿತರಿಸಲಾಗಿದೆ. ದೊಡ್ಡ ಜಾನುವಾರು 1 ಹಾಗೂ ಚಿಕ್ಕಜಾನುವಾರು 5 ಸೇರಿದಂತೆ 6 ಜಾನುವಾರುಗಳು ಸಾವನ್ನಪ್ಪಿದ್ದು, ಈಗಾಗಲೇ ಪರಿಹಾರ ನೀಡಲಾಗಿದೆ. 13 ಮನೆಗಳು ಪೂರ್ಣಹಾನಿ, 66 ಮನೆಗಳು ತೀವ್ರತರ ಹಾನಿ ಹಾಗೂ 1197 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ವಾಸದ ಮನೆಗಳ ಹಾನಿಗೆ ಸಂಬಂಧಿಸಿದಂತೆ ರೂ.2 ಕೋಟಿ 43 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ ಎಂದರು