ಬೆಳೆ ಹಾನಿ ಪರಿಶೀಲಿಸಿದ ಡಿಸಿ: ವಿಮಾ ಪರಿಹಾರಕ್ಕೆ ಸೂಚನೆ


ಚಿತ್ರದುರ್ಗ.ಜು.೨೦;ಜಿಲ್ಲೆಯಲ್ಲಿ ಈಚೆಗೆ ಸುರಿದ ಸತತ ಮಳೆಯಿಂದಾಗಿ ಹೊಸದುರ್ಗ ತಾಲ್ಲೂಕಿನಲ್ಲಾದ ಬೆಳೆ ಹಾನಿಯನ್ನು ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಪರಿಶೀಲನೆ ನಡೆಸಿದರು.ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿ ಹಾಗಲಕೆರೆ, ಮೆಣಸಿನಡು ಹಾಗೂ ಶ್ರೀರಾಂಪುರ ಹೋಬಳಿ ಆರಲಹಳ್ಳಿ ಗ್ರಾಮಗಳ ಹೆಸರು ಬೆಳೆಗಳ ತಾಕುಗಳಿಗೆ ಭೇಟಿ ನೀಡಿ ಬೆಳೆ ಹಾಳಾಗಿರುವುದನ್ನು ಪರಿಶೀಲನೆ ನಡೆಸಿದರು.ಬೆಳೆ ಹಾನಿ ಪರಿಶೀಲನೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ರೈತರು ಹೆಸರು ಬೆಳೆಯನ್ನು ಕಟಾವು ಮಾಡಿ ಹೊಲದಲ್ಲಿ ಬಿಟ್ಟಾಗ ಹೊಲದಲ್ಲಿಯೇ ಹೆಸರು ಬೆಳೆ ಮೊಳಕೆ ಬಂದು ಕೊಳೆತು ನಷ್ಟವಾಗಿದ್ದು, ಬೆಳೆ ಕಳೆದುಕೊಂಡ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿ ಕೊಯ್ಲಿನ ನಂತರ ಬೆಳೆ ನಷ್ಟ ಎಂದು ಪರಿಗಣಿಸಿ ರೈತರಿಗೆ ಸೂಕ್ತ ವಿಮಾ ಪರಿಹಾರ ನೀಡುವಂತೆ ಕ್ರಮ ವಹಿಸಬೇಕೆಂದು ವಿಮಾ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಡಾ. ಪಿ. ರಮೇಶ್ ಮಾತನಾಡಿ, ವಿಮಾ ಪ್ರತಿನಿಧಿಗಳು ಎಲ್ಲಾ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಜರಿದ್ದು, ರೈತರಿಂದ ಬರುವ ಅರ್ಜಿಗಳನ್ನು ಸೂಕ್ತ ದಾಖಲಾತಿಗಳೊಂದಿಗೆ ಸ್ವೀಕರಿಸಿ ತುರ್ತಾಗಿ ಪರಿಹಾರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ಕೃಷಿ ಉಪ ನಿರ್ದೇಶಕ ಡಾ. ಪ್ರಭಾಕರ್ ಮಾತನಾಡಿ, ರೈತರು ವಿಮಾಕಂತು  ಕಟ್ಟಿದ ಸ್ವೀಕೃತಿ ಪತ್ರ ಇತ್ತೀಚಿನ ಪಹಣಿ, ಆಧಾರ್ ಕಾರ್ಡ್, ಎನ್.ಪಿ.ಸಿ.ಐ ಆಧಾರ್ ಲಿಂಕ್ ಬ್ಯಾಂಕ್ ವಿವರಗಳನ್ನು ನೀಡಿ ರೈತರು ನಿಗಧಿತ ಅರ್ಜಿಯಲ್ಲಿ ಮನವಿ ಸಲ್ಲಿಸಬಹುದು. ರೈತರು ಬೆಳೆ ಹಾನಿಗೆ ಸಂಬಂಧಿಸಿದ ದೂರು ದಾಖಲಿಸಲು  ಸಹಾಯ ವಾಣಿ ಸಂಖ್ಯೆ 1800-2500-5142 ಗೆ ಕರೆಮಾಡಬಹುದು ಎಂದು ಸೂಚಿಸಿದರು.