ಬೆಳೆ ಹಾನಿಯಿಂದ ರೈತರು ಕಂಗಾಲು:ಪರಿಹಾರಕ್ಕೆ ಚಾಮರಸ ಮಾಲಿಪಾಟೀಲ್ ಒತ್ತಾಯ

ರಾಯಚೂರು,ಸೆ.೧೨- ಅತಿಯಾದ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ವಿವಿಧ ಬೆಳೆಗಳನ್ನು ರೈತರು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ.ಆದರೆ ಸರ್ಕಾರ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುತ್ತೇವೆ ಎಂದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ್ ಮಾಲಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಹತ್ತಿ ಬೆಳೆದ ರೈತರ ಬೆಳೆಗಳು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿ ಯಾವುದೇ ಆದಾಯ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಹೀಗೆ ವಿವಿಧ ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ, ಇದರ ಮಾಹಿತಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಇರುತ್ತದೆ ಸರಕಾರ ಅವರಿಂದ ಮಾಹಿತಿ ಪಡೆದು ಕೂಡಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಶಾಸಕರುಗಳು ತಮ್ಮ ವೇತನ ಹೆಚ್ಚು ಮಾಡಿಕೊಳ್ಳುತ್ತಾ ಗಮನಹರಿಸುವುದನ್ನ ಬಿಟ್ಟು. ಓಬೆರಾಯನ ಕಾಲದ ಎನ್.ಡಿ.ಆರ್.ಎಫ್ ನಿಯಮಗಳನ್ನು ಬದಲಿಸಬೇಕು ಎಂದರು. ರಾಜ್ಯದಲ್ಲಿ ಮಳೆಯಿಂದ ಸಾಕಷ್ಟು ಹಾನಿಗೆ ಒಳಗಾಗಿರುವ ಪ್ರದೇಶಗಳಲ್ಲಿ ಜನ ನೋವು, ಆತಂಕದಲ್ಲಿ ಇದ್ದಂತಹ ಸಂದರ್ಭದಲ್ಲಿ, ಬಿಜೆಪಿ ಸರ್ಕಾರ ಜನಸ್ಪಂದನಾ ಕಾರ್ಯಕ್ರಮದ ಹೆಸರಲ್ಲಿ ಕುಣಿದ ಕೊಪ್ಪಳಸಿದ್ದು ಎಷ್ಟರಮಟ್ಟಿಗೆ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇಂತಹ ಸರ್ಕಾರಕ್ಕೆ ಯಾವುದೇ ರೀತಿಯಾದ ಜವಾಬ್ದಾರಿ ಇಲ್ಲ, ಇವರಿಂದ ಒಳ್ಳೆಯ ಕೆಲಸಗಳನ್ನು ನಿರೀಕ್ಷೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ತಮ್ಮ ಸಹೋದ್ಯೋಗಿಗಳನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ಶಾಸಕರು ಸಚಿವರುಗಳಿಗೆ ಯಾವ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲ ಎಂದರೆ ಕಷ್ಟವಾಗುತ್ತದೆ. ಹಾಗಾಗಿ ಸಾಕಷ್ಟು ಮಳೆಯಿಂದ ಅತಿವೃಷ್ಟಿ ಆದ ಹಾನಿಗೆ ಕೇಂದ್ರ ಸರ್ಕಾರ ಕೂಡಲೇ ಸಮೀಕ್ಷೆ ಮಾಡಿ ಹಣ ಕಳಿಸಬೇಕು,ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಲಿಂಗಾರೆಡ್ಡಿ, ಪ್ರಭಾಕರ್ ಪಾಟೀಲ್, ಅಬ್ದುಲ್ ನಜಿರ್, ಬಸವರಾಜ್ ಮಾಲಿಪಾಟೀಲ್, ಬೂದಯ್ಯ ಸ್ವಾಮಿ ಇದ್ದರು.