ಬೆಳೆ ಹಾನಿಗೆ ಹೊಣೆ ಯಾರು?: ಮತ ಎಣಿಕೆ ಕೇಂದ್ರದ ಸುತ್ತಮುತ್ತ ರೈತರ ಬೆಳೆ ನಾಶ

ಅಫಜಲಪುರ:ಡಿ.31: ಗ್ರಾಪಂ ಚುನಾವಣೆ ಹಿನ್ನೆಲೆ ಫಲಿತಾಂಶಕ್ಕಾಗಿ ಕಳೆದೊಂದು ವಾರದಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಸೇರಿದ್ದರಿಂದ ಮತ ಎಣಿಕೆ ಕೇಂದ್ರದ ಸುತ್ತಮುತ್ತಲಿರುವ ರೈತರ ಜಮೀನುಗಳಲ್ಲಿ ಠಿಕಾಣಿ ಹೂಡಿದ್ದರಿಂದ ರೈತನ ಬೆಳೆ ಹಾನಿಯಾಗಿದ್ದು ಇದಕ್ಕೆ ಹೊಣೆ ಯಾರು ಎಂದು ಜಮೀನಿನ ಮಾಲೀಕರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.
ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರದಂದು ಮುಂಜಾನೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ ಎಂಬ ಮಾಹಿತಿ ಅರಿತಿದ್ದ ತಾಲೂಕಿನ 28 ಗ್ರಾಪಂ ಚುನಾವಣೆಗೆ ನಿಂತ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ಬೆಳಗಿನ 6 ಗಂಟೆಗೆ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಆಶ್ರಯಕ್ಕಾಗಿ ಹೊಲ ಗದ್ದೆಗಳ ಮೊರೆ ಹೋದರು.
ಸುಮಾರು 3 ಕಿ.ಮೀ ಅಂತರದಲ್ಲಿ ತಾಲೂಕಿನ ಆನೂರ ಹಾಗೂ ದೇಸಾಯಿ ಕಲ್ಲೂರ ಗ್ರಾಮದ ಮುಖ್ಯ ರಸ್ತೆ ಸೇರಿದಂತೆ ಅಫಜಲಪುರ ಪಟ್ಟಣ ರಸ್ತೆಯ ಉದ್ದಗಲ್ಲಕ್ಕೂ 1 ದಿನದ ಹೊಟೇಲ್, ತಳ್ಳು ಬಂಡಿ ಮುಂತಾದವು ಸೇರಿದಂತೆ ವಾಹನಗಳ ಭರಾಟೆ ಜನಸಂದಣಿ ಎಲ್ಲಿಲ್ಲದಂತೆ ವ್ಯಾಪಿಸಿ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು.