ಬೆಳೆ ಹಾನಿಗೆ ಪರಿಹಾರ ಒದಗಿಸುವಂತೆ ಆಗ್ರಹ


ಅಳ್ನಾವರ, ನ19: ಕಳೆದ ಒಂದು ವಾರದಲ್ಲಿ ಸುರಿದ ಅತಿಯಾದ ಮಳೆಗೆ ಕಟಾವು ಹಂತಕ್ಕೆ ಬಂದಿರುವ ಬತ್ತ ಮತ್ತು ಮೆಕ್ಕೆಜೋಳ ಹಾಗೂ ಕಬ್ಬು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಸಾಕಷ್ಟು ಹಾನಿ ಸಂಭವಿಸಿದ್ದು ಬೆಳೆ ಹಾನಿಗೆ ಕೂಡಲೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಅಳ್ನಾವರ ತಾಲೂಕಿನ ರೈತರು ತಹಶೀಲದಾರರ ಮೂಲಕ ಮುಖ್ಯ ಮಂತ್ರಿ ಹಾಗೂ ಕಂದಾಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅತಿಯಾದ ಮಳೆಯಿಂದ ಬೆಳೆ ಹಾನಿಯಾಗಿದ್ದು ಕೈಗೆ ಬಂದಿದ್ದ ತುತ್ತು ಬಾಯಿಗೆ ಬಾರದಂತಾಗಿದೆ. ಸಾಕಷ್ಟು ಹಣ ಖರ್ಚು ಮಾಡಿ ಕೃಷಿ ಮಾಡಿದ್ದು ಬೀಜ ಮತ್ತು ಗೊಬ್ಬರ ಮತ್ತಿತರ ಕೆಲಸಗಳಿಗೆ ಮಾಡಿರುವ ವೆಚ್ಚವೂ ಮರಳಿ ಬಾರದಂತಾಗಿದ್ದು, ಬ್ಯಾಂಕುಗಳಿಂದ ಪಡೆದಿರುವ ಸಾಲವನ್ನು ಮರು ಪಾವತಿ ಮಾಡುವದು ಸಾಧ್ಯವಿಲ್ಲದಂತಾಗಿದೆ. ತಾಲೂಕಿನ ಸಾವಿರಾರು ಏಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಮಳೆಯಿಂದ ಹಾಳಾಗಿದ್ದು ಕೂಡಲೇ ಪರಿಶೀಲನೆ ಮಾಡಿ ಪರಿಹಾರ ಬಿಡುಗಡೆ ಮಾಡುವಂತೆ ರೈತರು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬೆಳೆ ವಿಮೆ: ಮುಂಗಾರು ಹಂಗಾಮಿನಲ್ಲಿ ಪ್ರದಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ವಿಮೆ ಮಾಡಿಸಿರುವ ರೈತರ ಜಮೀನಿಗೆ ವಿಮಾ ಮತ್ತು ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಹಾನಿಯಾದ ಬೆಳೆಗಳಿಗೆ ವಿಮಾ ಪರಿಹಾರ ನೀಡಲು ಅಗತ್ಯ ಕ್ರಮ ಕೈಕೊಳ್ಳುವಂತೆಯೂ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತಹಶೀಲದಾರ ಅಮರೇಶ ಪಮ್ಮಾರ ಅವರು ಮನವಿ ಸ್ವೀಕರಿಸಿ ಮಾತನಾಡಿ, ಕಂದಾಯ ಮತ್ತು ಕೃಷಿ ಇಲಾಖೆಯ ಸಿಬ್ಬಂದಿಯವರಿಂದ ಬೆಳೆ ಹಾನಿಯ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವದೆಂದು ರೈತರಿಗೆ ಭರವಸೆ ನೀಡಿದರು.
ರೈತರಾದ ಶಿವಾಜಿ ಡೊಳ್ಳಿನ, ನಾರಾಯಣ ಮೋರೆ, ಬಸಪ್ಪ ಶೀಲಿ, ಅನಂತ ರವಳಪ್ಪನವರ, ಲಿಂಗರಾಜ ಮೂಲಿಮನಿ, ಪ.ಪಂ ಸದಸ್ಯರಾದ ಛಗನಲಾಲ ಪಟೇಲ, ತಾಲೂಕಿನ ವಿವಿಧ ಗ್ರಾಮಗಳ ರೈತರು ಮನವಿ ಸಲ್ಲಿಸುವ ಸಮಯದಲ್ಲಿ ಉಪಸ್ಥಿತರಿದ್ದರು.