ಬೆಳೆ ಸಮೀಕ್ಷೆ: ರೈತರಿಗೆ ಪರಿಹಾರ ನೀಡುವಂತೆ ಅಧ್ಯಕ್ಷರು ಆಗ್ರಹ

ಮಾನ್ವಿ.ನ.೨೩-ಕಳೆದ ೮ ದಿನಗಳಿಂದ ಸತತವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ತಾಲೂಕಿನ ಕುರ್ಡಿ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿನ ಬೆಳೆಗಳು ಸಂಪೂರ್ಣವಾಗಿ ಅಪಾರ ಪ್ರಮಾಣದ ನಷ್ಟವಾಗಿದ್ದು, ಕೂಡಲೇ ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಮಂಜೂರ ಮಾಡುವಂತೆ ಆರೋಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ನರಸಿಂಹ ರಾಜೋಳ್ಳಿಯವರು ತಹಶೀಲ್ದಾರ್ ಅವರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕುರ್ಡಿ ಹೋಬಳಿಯ ಗ್ರಾಮಗಳಾದ ಕುರ್ಡಿ, ಆರೋಲಿ, ಅಡವಿಖಾನಾಪೂರು, ರಾಜೋಳ್ಳಿ, ವಲ್ಕಂದಿನ್ನಿ, ಜೂಕೂರು, ಕಂಬಳನೆತ್ತಿ, ತಮ್ಮಾಪೂರು, ರಾಜಲಬಂಡಾ, ಹರನಹಳ್ಳಿ, ಗೋರ್ಕಲ್, ಶಾಸ್ತ್ರಿಕ್ಯಾಂಪ್, ಉಮಳಿಪನ್ನೂರು, ಸಾದಾಪೂರು, ಕೊರವಿ, ಸೀಕಲ್- ಬಾಪೂರು, ಸುಂಕೇಶ್ವರ, ಬೈಯಲಮರ್ಚೆಡ್, ಮುರಾಹನಪೂರು, ದದ್ದಲ್, ಶಾಸ್ತ್ರಿಕ್ಯಾಂಪ್ ತಾಂಡ ಈ ಎಲ್ಲಾ ಗ್ರಾಮಗಳಲ್ಲಿ ಕಳೆದ ೮ ದಿನಗಳಿಂದ ಸತತವಾಗಿ ಸುರಿದ ಬಾರಿ ಮಳೆಗೆ ರೈತರು ಬೆಳೆದ ಬೆಳೆಗಳಾದ ಹತ್ತಿ, ತೊಗರಿ, ಭತ್ತ, ಉಳ್ಳಾಗಡ್ಡಿ, ಮೆಣಸಿನಕಾಯಿ, ಜೋಳ, ಕಡಲೆ, ಸಜ್ಜೆ ಇನ್ನಿತರ ಬೆಳೆಗಳಿಗೆ ಸಾಲ ಸೂಲ ಮಾಡಿ ಲಕ್ಷಗಟ್ಟಲೆ ಖರ್ಚು ಮಾಡಿ ಬೆಳೆದು ಇನ್ನೇನು ಬೆಳೆ ತೆಗೆದುಕೊಳ್ಳಬೇಕೆನ್ನುವ ಸಮಯದಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆಗಳು ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ರೈತರು ಬಾರೀ ನಷ್ಟಕ್ಕೆ ತುತ್ತಾಗಿದ್ದಾರೆ. ಅನ್ನದಾತರಿಗೆ ತೀರ ಕಂಗಾಲಾಗಿ ದಿಕ್ಕುತೋಚದಂತಹ ಪರಿಸ್ಥಿತಿ ನಿರ್ಮಾಣವಾಗಿ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎಂದು ಆರೋಪಸಿದರು.
ಕೂಡಲೇ ಸರ್ಕಾರವು ಈಗಾಗಲೇ ೫-೨೦ ದಿನಗಳೊಳಗಾಗಿ ಸಂಬಂಧಿಸಿದ ಅಧಿಕಾರಿಗಳು ಸೇರಿಕೊಂಡು ಬೆಳೆ ಸಮೀಕ್ಷೆ ಮಾಡಿ ವರದಿ ನೀಡುವಂತೆ ಮುಖ್ಯಮಂತ್ರಿಗಳು ಆದೇಶಿಸಿರುತ್ತಾರೆ. ವರದಿ ಬಂದ ೨೪ ಗಂಟೆಯೊಳಗೆ ರೈತರ ಖಾತೆಗೆ ಬೆಳೆ ನಷ್ಟವನ್ನು ಪಾವತಿಸುವುದಾಗಿ ಘೋಷಿಸಿರುತ್ತಾರೆ. ತಾವುಗಳು ತಮ್ಮ ಇಲಾಖೆಯ ಸಂಬಂಧಿಸಿದ ಸಿಬ್ಬಂದಿ ಹಾಗೂ ಬೆಳೆಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಕೂಡಲೇ ಬೆಳೆ ಸಮೀಕ್ಷೆ ಮಾಡಿಸಿ ವರದಿ ತಯಾರಿಸಿ ಕೂಡಲೇ ರೈತರಿಗೆ ಬೆಳೆ ನಷ್ಟಪರಿಹಾರವನ್ನು ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಕಳೆದ ಎರಡ ವರ್ಷ ಫಸಲ್ ಭೀಮಾ ಯೋಜನೆಯಲ್ಲಿ ಬೆಳೆಗಳಿಗೆ ವಿಮೆ ಪಾವತಿಸಿದ ರೈತರಿಗೆ ಇದುವರೆಗೂ ಯಾವುದೇ ಬೆಳೆ ವಿಮಾ ಹಣವನ್ನು ಪಾವತಿಸಿರುವುದಿಲ್ಲ. ಈ ವರ್ಷವಾದರೂ ಬೆಳೆ ವಿಮೆ ಕಟ್ಟಿದ ರೈತರಿಗೆ ಬೆಳೆ ನಷ್ಟ ವಿಮಾ ಹಣವನ್ನು ಮಂಜೂರು ಮಾಡಲು ಸಂಬಂಧಿಸಿದ ವಿಮಾ ಕಂಪನಿಗಳಿಗೆ ಆದೇಶಿಸಬೇಕೆಂದು ಕುರ್ಡಿ ಹೋಬಳಿ ಎಲ್ಲಾ ಗ್ರಾಮಗಳ ರೈತರ ಪರವಾಗಿ ಆಗ್ರಹಿಸಿದ್ದಾರೆ.
ಈ ವೇಳೆಯಲ್ಲಿ ಹಿರಿಯ ಮುಖಂಡ ನರಸಪ್ಪ ಜೂಕೂರ ಇದ್ದರು.