ಬೆಳೆ ಸಮೀಕ್ಷೆಗೆ ಒತ್ತಾಯಿಸಿ ಮನವಿ

ಕೋಲಾರ,ನ.೨೫:ಬಂಗಾರಪೇಟೆ ತಾಲ್ಲೂಕಿನ ಹಂಚಾಳ ಗ್ರಾಮದ ಬಳಿ ಬೆಳೆ ಸಮೀಕ್ಷೆ ಮಾಡಲು ವಿರೋಧ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ರೈತಸಂಘ ಕೆ.ಎಸ್.ಪುಟ್ಟಣ್ಣಯ್ಯ ಬಣದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಅವರು ಮನವಿ ನೀಡಿ ಒತ್ತಾಯಿಸಿದ್ದಾರೆ.
ಈ ವೇಳೆ ಅವರು ಮಾತನಾಡಿ, ತಾಲ್ಲೂಕಿನಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ರಾಗಿ, ಭತ್ತ, ತೊಗರಿ ಮುಂತಾದ ಕೃಷಿ ಬೆಳೆಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದು, ಮಹಾ ಮಳೆಗೆ ಬೆಳೆಗಳು ಸಂಪೂರ್ಣ ನಾಶವಾಗಿರುತ್ತದೆ. ಹಾಗಾಗಿ ಕೃಷಿ ಬೆಳೆಗಳಿಗೆ ಕನಿಷ್ಠ ೧ಎಕರೆಗೆ ೧ಲಕ್ಷ ರೂಪಾಯಿ ಪರಿಹಾರ ಒದಗಿಸಿಕೊಡಬೇಕೆಂದು ಹಾಗೂ ತಾಲ್ಲೂಕಿನಾದ್ಯಂತ ತೋಟ ಗಾರಿಕೆ (ವಾಣಿಜ್ಯ) ಬೆಳೆಗಳಾದ ಟೊಮೆಟೋ, ಆಲುಗಡ್ಡೆ, ಕ್ಯಾಪ್‌ಸಿಕಂ, ಕ್ಯಾರೆಟ್, ನವಿಲುಕೋಸು, ಹೂಕೋಸು, ಗಡ್ಡೆಕೋಸು, ಇನ್ನೂ ಮುಂತಾದ ವಾಣಿಜ್ಯ ಬೆಳೆಗಳು ಸುಮಾರು ೧ಎಕರೆಗೆ ೧.೫ಲಕ್ಷ ರೂಪಾಯಿಗಳ ಬಂಡವಾಳ ಹೂಡಿ ಬೆಳೆದಿರುವ ಬೆಳೆಗಳು ಸಂಪೂರ್ಣ ಮಹಾ ಮಳೆಗೆ ನಾಶವಾಗಿರುತ್ತದೆ. ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಕನಿಷ್ಟ ೧ಎಕರೆಗೆ ೨ಲಕ್ಷ ಪರಿಹಾರವನ್ನು ಕೊಡಿಸಬೇಕೆಂದು, ತಾಲ್ಲೂಕಿನಾದ್ಯಂತ ನೂರಾರು ಮನೆಗಳು ಮಳೆಯಿಂದಾಗಿ ಕುಸಿತಗೊಂಡಿರುತ್ತವೆ. ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಕನಿಷ್ಠ ೨ಲಕ್ಷ ರೂಪಾಯಿಗಳ ಪರಿಹಾರ ಸರ್ಕಾರದ ವತಿಯಿಂದ ಕೊಡಿಸಬೇಕೆಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಕೋಲಾರ ಶಾಸಕ ಶ್ರೀನಿವಾಸಗೌಡರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿ ಈ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಐತಾಂಡಹಳ್ಳಿ ಅಮರೇಶ, ಬಾವರಹಳ್ಳಿ ಅತಿತ್‌ರೆಮಾನ್, ಸೊಣ್ಣೇಗೌಡ, ಕಾರಹಳ್ಳಿ ಮಂಜುನಾಥ, ಅವೀನ್, ಹರೀಶ ಮುಂತಾದವರು ಇದ್ದರು.