ಬೆಳೆ ವಿಮೆ ಮೊತ್ತ ಶೀಘ್ರ ಪಾವತಿಗೆ ಕ್ರಮ:ಬಿ.ಸಿ. ಪಾಟೀಲ್

ಕಲಬುರಗಿ.ಸೆ.16: ವಿಮೆ ಸಂಸ್ಥೆಗಳ ಆಡಳಿತ ಮಂಡಳೀಯ ಕೆಲವೊಂದು ತಪ್ಪು ನಿರ್ಧಾರದಿಂದ ಬಾಕಿ ಉಳಿದ 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಗಳ ವಿಮೆ ಮೊತ್ತ 180.90 ಕೋಟಿ ರೂ. ಗಳನ್ನು ಶೀಘ್ರ ಪಾವತಿಗೆ ಕ್ರಮ ವಹಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಬುಧವಾರ ಇಲ್ಲಿನ ಕೃಷಿ ಮಹಾವಿದ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ 133717 ರೈತರ ಖಾತೆಗೆ ವಿಮೆ ಮೊತ್ತ ಜಮಾವಾಗಲಿದೆ ಎಂದ ಅವರು ಮುಂದಿನ ದಿನಗಳಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಗೆ ಚಿಂತನೆ ನಡೆದಿದೆ ಎಂದರು.
ರಾಜ್ಯದಲ್ಲಿ 30 ಜಿಲ್ಲೆಗಳಲ್ಲಿ ಈಗಾಗಲೆ ಪ್ರವಾಸ ಮಾಡಿ ಅನ್ನದಾತನ ಸಮಸ್ಯೆಗಳನ್ನು ಅರಿತಿದ್ದೇನೆ. ಬೆಂಗಳೂರು, ಮೈಸೂರು, ಬೆಳಗಾವಿ ವಿಭಾಗವಾರು ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ್ದು, ಇಂದು ಕಲಬುರಗಿಯಲ್ಲಿಯೂ ಸಹ ಸಭೆ ನಡೆಸಿ ರೈತನ ಒಳಿತಿಗೆ ಕಾರ್ಯಕ್ರಮಗಳನ್ನು ನಿಗಧಿತ ಅವಧಿಯಲ್ಲಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಶೇ.104ರಷ್ಟು ಬಿತ್ತನೆಯಾಗಿದೆ. ಕೆಲವೆಡೆ ಅತಿವೃಷ್ಠಿಯಿಂದ 3.56 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿದ್ದು, ಕೇಂದ್ರ ಅಧ್ಯಯನ ತಂಡ ಸಮೀಕ್ಷೆ ಮಾಡುತ್ತಿದೆ. ಸಮೀಕ್ಷೆ ನಂತರ ಸೂಕ್ತ ಪರಿಹಾರಕ್ಕೆ ಕೇಂದ್ರ ಸರ್ಕಾವನ್ನು ಕೋರಲಾಗುವುದು ಎಂದರು.
ರೈತರಿಗೆ ಸಹಾಯಧನದ ರೂಪದಲ್ಲಿ 3.87 ಲಕ್ಷ ಕ್ವಿಂಟಲ್ ಬೀಜಗಳನ್ನು ವಿತರಿಸಲಾಗುತ್ತಿದೆ. 2019-20ನೇ ಸಾಲಿನಲ್ಲಿ 6.15 ಲಕ್ಷ ಮೆ.ಟನ್ ಗೊಬ್ಬರ ಪೂರೈಕೆ ಮಾಡಿದರೆ ಈ ವರ್ಷ 8.19 ಮೆ.ಟನ್ ಗೊಬ್ಬರ ಪೂರೈಸಲಾಗುತ್ತಿದ್ದು, ರಸಗೊಬ್ಬರ ಕೊರತೆಯ ಪ್ರಶ್ನೆ ಇಲ್ಲ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರವು ರಾಜ್ಯದ 52.68 ಲಕ್ಷ ರೈತರಿಗೆ 4853.03 ಕೋಟಿ ರೂ. ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಿದೆ. ಅದೇ ರೀತಿ ರಾಜ್ಯ ಸರ್ಕಾರವು ಸಹ ಹೆಚ್ಚಿನ ಪ್ರೋತ್ಸಾಹ ಧನದ ಭಾಗವಾಗಿ 50.58 ಲಕ್ಷ ರೈತರಿಗೆ 1011.64 ಕೋಟಿ ರೂ. ಹಣವನ್ನು ರಐತರ ಬ್ಯಾಂಕ್ ಖಾತೆಗೆ ವಾರ್ಗಾಯಿಸಿದೆ. ಕಳೆದ ಬಾರಿ ಪ್ರವಾಸ ಸಂದರ್ಭದಲ್ಲಿ ಲಾಕ್ ಡೌನ್ ಪರಿಣಾಮ ಮುಸುಕಿನ ಜೋಳ ಬೆಳೆದ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದನ್ನು ಕಂಡು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ ಫಲವಾಗಿ 720647 ರೈತರಿಗೆ 360.62 ಕೋಟಿ ರೂ. ವಿತರಿಸಲಾಗಿದೆ ಎಂದರು.
ಅನ್ನದಾತ ರೈತನಿಗೆ ವಿವಿಧ ಸವಲತ್ತು ಕಲ್ಪಿಸಲು ದೇಶದಲ್ಲೇ ಪ್ರಥಮ ಬಾರಿಗೆ ರೈತ ಬಂಧುಗಳೆ ಸ್ವತಃ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಈಚಿಡಿmeಡಿs ಅಡಿoಠಿ Suಡಿveಥಿ ಂಠಿಠಿ 2020-21 ಮೂಲಕ ತಮ್ಮ ಮೋಬೈಲ್‍ನಿಂದ ಬೆಳೆಗಳ ಭಾವಚಿತ್ರ ಹಾಗೂ ಇನ್ನಿತರ ಮಾಹಿತಿ ಅಪಲೋಡ್ ಮಾಡುವ ಕಾರ್ಯಕ್ಕೆ ಕಳೆದ ಆಗಸ್ಟ್ 15ಕ್ಕೆ ಚಾಲನೆ ನೀಡಲಾಗಿತ್ತು. ಕಳೆದ ಒಂದು ತಿಂಗಳಿನಲ್ಲಿ 81.79 ಲಕ್ಷ ರೈತರು ತಮ್ಮ ಬೆಳೆಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರಾಜ್ಯದ ಈ ಕಾರ್ಯಕ್ರಮಕ್ಕೆ ಕೇಂದ್ರದ ಕೃಷಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಉಳಿದ ರಾಜ್ಯಗಳಲ್ಲಿಯೂ ಜಾರಿಗೆ ತರಲು ಚಿಂತನೆ ನಡೆಸುತ್ತಿದ್ದಾರೆ ಎಂದರು.
ಸಕರಿ ಸವಲತ್ತುಗಳನ್ನು ಅನ್ನದಾತನಿಗೆ ಸಮರ್ಪಕವಾಗಿ ತಲುಪಿಸಲು ಮತ್ತು ಕೃಷಿ ಕುರಿತು ಅರಿವು ನೀಡಲು 2246 “ರೈತ ಮಿತ್ರ”ರನ್ನು ನೇಮಿಸಲು ಕ್ರಮ ವಹಿಸಲಾಗಿದೆ. ಕೃಷಿಯಲ್ಲಿ ಡಿಪ್ಲೋಮಾ ಪದವಿ ಪಡೆದವರನ್ನೆ ಕೃಷಿ ಮಿತ್ರರೆಂದು ನೇಮಿಸಿ ಪ್ರತಿಯೊಬ್ಬರಿಗೆ ಎರಡು ಗ್ರಾಮ ಪಂಚಾಯತಿಗಳ ಜವಾಬ್ದಾರಿ ನೀಡಲಾಗುತ್ತದೆ ಎಂದರು.
ಬೆಂಬಲ ಬೆಲೆ ಯೋಜನೆಯಡಿ ಹೆಸರು ಮತ್ತು ಉದ್ದು ಖರೀದಿಗೆ ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಶೀಘ್ರ ಸಭೆ ಸೇರಿ ನಿರ್ಧಾರ ಕೈಗೊಳ್ಳಲಿದೆ ಎಂದಉ ಸಚಿವರು ತಿಳಿಸಿದರು.

ರೈತ ಮಕ್ಕಳ ಕೋಟಾಗೆ ಧಕ್ಕೆಯಿಲ್ಲ: ರಾಜ್ಯದ ಕೃಷಿ ವಿಶ್ವವಿದ್ಯಾಲಯ ಮತ್ತು ಮಹಾ ವಿದ್ಯಾಲಯಗಳಲ್ಲಿ ಕೃಷಿ ಪದವಿ ಪ್ರವೇಶಾತಿಯಲ್ಲಿ ಈ ಹಿಂದೆ ಇದ್ದಂತೆ ಶೇ.40ರಷ್ಟು ಸ್ಥಾನಗಳನ್ನು ರೈತರ ಮಕ್ಕಳಿಗೆ ಮೀಸಲಾತಿ ಇದ್ದು, ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟನೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ರೈತರ ಗುರುತಿಗಾಗಿ “ಸ್ವಾಭಿಮಾನಿ ರೈತ” ಹೆಸರಿನಲ್ಲಿ ಗುರುತಿನ ಚೀಟಿ ವಿತರಿಸಲಾಗುವುದು ಎಂದರು.
108 ಮಾದರಿಯಲ್ಲಿ ಕೃಷಿ ಸಂಚಾರಿ ಲ್ಯಾಬ್: ಬೆಳೆಯಲ್ಲಿ ಯಾವುದೇ ತರಹದ ರೋಗ ಮತ್ತು ಕೀಟಬಾಧೆ ಕಂಡುಬಂದಲ್ಲಿ ರೈತರ ಹೊಲಗಳಿಗೆ ಹೋಗಿ ಪ್ರಾತ್ಯಕ್ಷಿಕೆ ಮೂಲಕ ಅಗತ್ಯ ಸಲಹೆ, ನೆರವು ನೀಡಲು 108 ವಾಹನ ಮಾದರಿಯಲ್ಲಿ ಕೃಷಿ ಸಂಚಾರಿ ಲ್ಯಾಬ್ ಸಿದ್ಧಪಡಿಸಲಾಗುತ್ತಿದೆ. ಕೃಷಿಕರು ಕರೆ ಮಾಡಿದ ಕೂಡಲೆ ಕೃಷಿ ಪದವೀಧರರು ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನೊಳಗೊಂಡ ಈ ವಾಹನ ಹೊಲಗಳಿಗೆ ಹೋಗಿ ಸೂಕ್ತ ಸಲಹೆ ನೀಡಲಿದ್ದಾರೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ತಮ್ಮ ಉಸ್ತುವಾರಿಯ ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ತರಲು ಸಿದ್ಧತೆ ನಡೆದಿದೆ. ಅಲ್ಲಿ ಯಶಸ್ವಿಯಾದಲ್ಲಿ ರಾಜ್ಯಾದ್ಯಾಂತ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ತೊಗರಿ ಮಂಡಳಿ ಬಲವರ್ಧನೆ: ಕಲಬುರಗಿಯಲ್ಲಿರುವ ತೊಗರಿ ಅಭಿವೃದ್ಧಿ ಮಂಡಳಿಯನ್ನು ಬಲವರ್ಧನೆಗೆ ಚಿಂತನೆ ನಡೆದಿದ್ದು, ಆರಂಭಿಕವಾಗಿ 1.5 ಕೋಟಿ ರೂ. ವೆಚ್ಚದಲ್ಲಿ ಮಂಡಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ತೊಗರಿ ಅಭಿವೃದ್ಧಿ ಮಂಡಳೀಯ ಅಧ್ಯಕ್ಷರಾಗಿರುವ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕೃಷಿ ಆಯುಕ್ತ ಬ್ರಿಜೇಶ ಕುಮಾರ ದಿಕ್ಷಿತ್, ಜಿಲ್ಲಾ ಪಂಚಾಯತಿಯ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರ ಇದ್ದರು.