ಕೋಲಾರ,ಜು.೨೬- ಕೇಂದ್ರ ಸರ್ಕಾರದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ತಾವು ಬೆಳೆದ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವ ಪ್ರಯೋಜನವನ್ನು ಜಿಲ್ಲೆಯ ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ರವರು ತಿಳಿಸಿದರು.
ನಗರ ಹೊರವಲಯದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಜಿಲ್ಲೆಯ ಪ್ರತಿಯೊಬ್ಬ ರೈತರು ಎಫ್‌ಐಡಿ ಫ್ರೂಟ್ಸ್ ಐಡಿಯನ್ನು ಹೊಂದಬೇಕು. ಆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ರೈತ ಸ್ನೇಹಿ ಯೋಜನೆಗಳಿಗೆ ಫಲಾನುಭವಿಗಳಾಗಬೇಕೆಂದರು. ಪ್ರಕೃತಿ ವಿಕೋಪಗಳಿಂದ ಹೆಚ್ಚಿನ ಮಳೆ, ನೆರೆ ಪ್ರವಾಹಗಳಿಂದ ಬೆಳೆ ಮುಳುಗಡೆ ದೀರ್ಘಕಾಲದ ತೇವಾಂಶ ಕೊರತೆ ತೀವ್ರ ಬರಗಾಲ ಇವುಗಳಿಂದ ಉಂಟಾಗುವ ನಷ್ಟದ ನಿರ್ಧಾರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ. ಇಂತಹ ಪ್ರಯೋಜನಕಾರಿ ಯೋಜನೆಗಳನ್ನು ಜಿಲ್ಲೆಯ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕನಿಷ್ಠ ಪ್ರೀಮಿಯ ಮೊತ್ತದಲ್ಲಿ ಗರಿಷ್ಠ ವಿಮೆ ಲಭ್ಯವಾಗುವುದರಿಂದ ಇಂತಹ ಯೋಜನೆಗಳು ರೈತರಿಗೆ ಸಹಕಾರಿಯಾಗಿದೆ. ಕೇವಲ ಶೇಕಡ ಎರಡರಷ್ಟು ವಿಮಾ ಕಂತು ತುಂಬಿದಲ್ಲಿ ಗರಿಷ್ಟ ರೂ.೧,೪೦,೦೦೦ಗಳ ವರೆಗೆ ಬೆಳೆ ನಷ್ಟ ವಿಮೆಯನ್ನು ಪಡೆಯಬಹುದಾಗಿದೆ.
ಬೆಳೆ ಸಾಲ ಪಡೆಯುವ ಮತ್ತು ಪಡೆಯದ ರೈತರು ವಿವಿಧ ಬೆಳೆಗಳಿಗೆ ನಿಗದಿಪಡಿಸಿರುವ ವಿಮಾ ಮತ್ತು ವಿಮಾ ಕಂತು ಹಾಗೂ ಘೋಷಣೆಯನ್ನು ಸಲ್ಲಿಸಿ ತಮ್ಮ ಹತ್ತಿರದ ಸೇವಾ ಕ್ಷೇತ್ರದ ಬ್ಯಾಂಕ್ ಅಥವಾ ಗ್ರಾಮವನ್ನು ಅಥವಾ ಸಿಎಸ್ಸಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಪ್ರಸ್ತುತ ಮುಂಗಾರು ಹಂಗಾಮು ತಡವಾಗುತ್ತಿರುವುದರಿಂದ ಇಂತಹ ಯೋಜನೆಗಳು ರೈತರ ಕೈ ಹಿಡಿಯುತ್ತವೆ ಸಂಪೂರ್ಣವಾಗಿ ನಷ್ಟವಾಗುವುದನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.