ಬೆಳೆ ವಿಮೆ ಪರಿಹಾರ ಬಿಡುಗಡೆ


ಬ್ಯಾಡಗಿ,ಮೇ.18: ರೈತ ಸಂಘದ ಸತತ ಹೋರಾಟದ ಫಲವಾಗಿ ಹಾವೇರಿ ಜಿಲ್ಲೆಗೆ ಪ್ರಸಕ್ತ ವರ್ಷದಲ್ಲಿ 434ಕೋಟಿ ರೂಗಳಷ್ಟು ಬೆಳೆ ವಿಮೆಯ ಪರಿಹಾರ ಬಿಡುಗಡೆಯಾಗಿದೆ ಎಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅತಿವೃಷ್ಠಿ, ಬರಗಾಲ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ರೈತರ ಬೆಳೆಗಳು ನಷ್ಟಗೊಂಡಲ್ಲಿ ವಿಮಾ ಕಂಪನಿಗಳು ರೈತರಿಗೆ ನಿಯಮಾನುಸಾರ ಶೇ.25ರಷ್ಟು ಬೆಳೆ ವಿಮೆ ಪರಿಹಾರ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅದನ್ನು ಈ ಮೊದಲು ಯಾರೂ ಅನುಷ್ಠಾನ ಮಾಡದೇ ರೈತರನ್ನು ವಂಚಿಸಿದ್ದರು. ಈ ನಿಟ್ಟಿನಲ್ಲಿ ರೈತ ಸಂಘದ ಸತತ ಹೋರಾಟ ಹಾಗೂ ಪರಿಶ್ರಮದಿಂದ ಪ್ರಾರಂಭದ ಹಂತದಲ್ಲಿ ಶೇ.25ರಷ್ಟು ಬೆಳೆವಿಮೆ ರೂಪದಲ್ಲಿ 80ಕೋಟಿ ರೂಗಳನ್ನು ಜಿಲ್ಲೆಯ ರೈತರ ಖಾತೆಗೆ ಜಮಾ ಮಾಡಿದ್ದರು ಇನ್ನುಳಿದಂತೆ 354ಕೋಟಿ ರೂಗಳ ಬೆಳೆ ವಿಮೆ ಪರಿಹಾರವೂ ಸಹ ಇತ್ತೀಚಿಗೆ ಎಲ್ಲಾ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತಿದೆ. ರಾಜ್ಯದಲ್ಲಿ ಬಿಡುಗಡೆಗೊಂಡಿರುವ ಒಟ್ಟು 672 ಕೋಟಿ ರೂಗಳ ಬೆಳೆವಿಮೆ ಪರಿಹಾರ ಪೈಕಿ ಹಾವೇರಿ ಜಿಲ್ಲೆಗೆ 434 ಕೋಟಿ ಬಂದಿದೆ. ಇದಕ್ಕೆಲ್ಲಾ ರೈತರ ಸಂಘಟಿತ ಹೋರಾಟ ಹಾಗೂ ಪರಿಶ್ರಮವೇ ಮುಖ್ಯ ಕಾರಣ ಎಂದು ತಿಳಿಸಿದರು.
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಪ್ರತಿ ತಾಲೂಕು ಕೇಂದ್ರಗಳಲ್ಲಿ ರೈತರ ಅನುಕೂಲಕ್ಕಾಗಿ ವಿಮಾ ಕಂಪನಿ ತಮ್ಮ ಕಚೇರಿಯನ್ನು ತೆರೆಯಬೇಕೆಂದು ಸರ್ಕಾರಿ ಆದೇಶವಿದ್ದರೂ ಅದನ್ನು ಪಾಲನೆ ಮಾಡದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈಗಾಗಲೇ ಕೆಲವು ರೈತರಿಗೆ ತಾಂತ್ರಿಕ ದೋಷದಿಂದ ಬೆಳೆ ವಿಮೆ ಪರಿಹಾರ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆಯಬೇಕೆಂದರೆ ವಿಮಾ ಕಂಪನಿಗಳು ಜಿಲ್ಲಾ ಸೇರಿದಂತೆ ತಾಲೂಕು ಕೇಂದ್ರಗಳಿಂದ ಕಾಲ್ಕಿತ್ತಿವೆ. ಈ ಮೊದಲು ವಿಮೆ ತುಂಬಿಸಿಕೊಳ್ಳುತ್ತಿದ್ದ ಎಐಸಿ ಕಂಪನಿಯ ಬದಲಾಗಿ ಈಗಾ ರಿಲಯನ್ಸ್ ಕಂಪನಿ ಪ್ರಸಕ್ತ ಸಾಲಿನಿಂದ ಬಂದಿದೆ. ಇವರಾದರೂ ಇನ್ನೂ ಜಿಲ್ಲಾ ಸೇರಿದಂತೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ತಮ್ಮ ಕಚೇರಿಗಳನ್ನು ತೆರೆದು ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ, ಶಹರ ಘಟಕದ ಅಧ್ಯಕ್ಷ ಚಿಕ್ಕಪ್ಪ ಛತ್ರದ, ಪರಮೇಶ್ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು