ಬೆಳೆ ವಿಮೆ ನೋಂದಣಿಯಲ್ಲಿ ಬೀದರ್ ಡಿಸಿಸಿ ಬ್ಯಾಂಕ್‍ಗೆ ಪ್ರಥಮ ಸ್ಥಾನ

ಬೀದರ್,ಆ.3-ಜಿಲ್ಲೆಯಲ್ಲಿ ಸರಿಸುಮಾರು 258000 ಸಾವಿರ ರೈತರಿದ್ದು ಈ ಪೈಕಿ ಸರಿಸುಮಾರು 164000 ಸಾವಿರ ರೈತರು ಬ್ಯಾಂಕಿನೊಟ್ಟಿಗೆ ಅಧ್ಯರ್ಪಿತಗೋಂಡ 183 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಸಾಲ ಪಡೆದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈತರಿಗೋಸ್ಕರ ಜಾರಿಗೆ ತಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ 2022-23 ನೇ ಸಾಲಿನ ಖರೀಫ್ ಬೆಳೆ ವಿಮೆ ನೋಂದಣಿ ಮಾಡುವಲ್ಲಿ ಬೀದರ ಡಿಸಿಸಿ ಬ್ಯಾಂಕ್ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮುಂಚೂಣಿಯಲ್ಲಿದ್ದು ಪ್ರಥಮ ಸ್ಥಾನ ಕಾಯ್ದು ಕೊಂಡಿರುತ್ತದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಬ್ಯಾಂಕಿನೊಟ್ಟಿಗೆ ಅಧ್ಯರ್ಪಿತಗೋಂಡು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 183 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಷೇರುದಾರ ಸದಸ್ಯರಾಗಿ ಬೆಳೆಸಾಲ ಪಡೆದ ರೈತ ಬಾಂಧವರು ಸುಮಾರು 135000 (02-08-2022 ವರೆಗೆ) ಅರ್ಜಿಗಳನ್ನು ತಂತ್ರಾಂಶದಲ್ಲಿ ನೋಂದಾಯಿಸಲಾಗಿದೆ. ಈ ಖರೀಫ್ 2022 ನೇ ಸಾಲಿನಲ್ಲಿ ರೈತರು ಬಿತ್ತನೆ ಮಾಡಿರುವ ಬೆಳೆಗಳ ಪೈಕಿ ಹಾಗೂ ಸರ್ಕಾರ ಬೆಳೆ ವಿಮೆಗೆ ಗುರುತಿಸಿರುವ ಬೆಳೆಗಳ ಕುರಿತು ತಿಳಿದುಕೊಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ ವಿಮೆ ನೋಂದಣಿ ಮಾಡಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಸಾಲಗಾರ ರೈತರ ನೋಂದಣಿಯಲ್ಲಿ ಬೀದರ ಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನ ಕಾಯ್ದು ಕೊಂಡಿರುವದು ಜಿಲ್ಲೆಯ ರೈತ ಬಾಂಧವರಿಗೆ ಹೆಮ್ಮೆಯ ವಿಷಯವಾಗಿರುತ್ತದೆ. ಕಳೆದ ಆರು ವರ್ಷಗಳಲ್ಲಿ ಬ್ಯಾಂಕಿನ ಮುಖೇನ ಬೆಳೆ ವಿಮೆ ರೈತರ ಪಾಲಿನ ಪ್ರೀಮಿಯಂ ನ ಮೊತ್ತ ರೂ 64.53 ಕೋಟಿಗಳಷ್ಟು ವಿಮಾ ಕಂಪನಿಗೆ ಪಾವತಿಸಿದ್ದು ಆಯಾ ವಾರ್ಷಿಕ ಋತುಮಾನಗಳಲ್ಲಿ ಹೆಚ್ಚಿನ ಮಳೆಯಾಗಿ ಅಥವಾ ತೇವಾಂಶ ಕಡಿಮೆಯಾಗಿ ಸರಾಸರಿ ಬೆಳೆ ಇಳುವರಿ ಮಟ್ಟ ಕಡಿಮೆಯಾಗಿರುವದರಿಂದ ಕೆಲವು ಬೆಳೆ ನಷ್ಟದ ಪರಿಣಾಮ ಬ್ಯಾಂಕಿನ ರೈತರ ಖಾತೆಗಳಿಗೆ ಸುಮಾರು ರೂ 376.02 ಕೋಟಿಗಳಷ್ಟು ಬೆಳೆ ವಿಮೆ ಮೊತ್ತ ನೇರವಾಗಿ ಬಂದಿರುವುದು ಬಹಳ ಸಂತೋಷದ ವಿಷಯವಾಗಿದ್ದು ಪ್ರಸ್ತುತ ವರ್ಷದ ಸಾಧನೆಗೆ ರೈತರಿಗೆ ಬಂದಿರುವ ಬೆಳೆ ನಷ್ಟದ ಪರಿಹಾರದ ವಿಮಾ ಮೊತ್ತ ಈ ಸಾಧನೆಗೆ ಸ್ಪೂರ್ತಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಸಾಧನೆಯಲ್ಲಿ ರೈತ ಬಾಂಧವರಿಗೆ ಜಾಗೃತಿ ಮೂಡಿಸುವಲ್ಲಿ ಜಿಲ್ಲೆಯ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಮಾರ್ಗದರ್ಶನ, ಕೃಷಿ ಇಲಾಖೆಯ ಸಹಯೋಗ ಕೂಡಿರುತ್ತದೆ. ಮುಂದುವರೆದು ವಿಶೇಷವಾಗಿ ಈ ಬೆಳೆ ವಿಮೆ ನೋಂದಣಿ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ ಡಿಸಿಸಿ ಬ್ಯಾಂಕಿನ ಸಿಬ್ಬಂದಿ, ಅಧಿಕಾರಿ ವರ್ಗದವರು ಹಾಗೂ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮಕ್ಕೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ನಿರಂತರವಾಗಿ ರಾಷ್ಟ್ರ ಮತ್ತು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಕಾಯ್ದು ಕೊಂಡು ಮುಂದುವರೆಯಲು ಪರೋಕ್ಷ ಮತ್ತು ಅಪರೋಕ್ಷವಾಗಿ ಪರಿಶ್ರಮ ಪಟ್ಟಿರುವ ಎಲ್ಲರಿಗೂ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.