ಬೆಳೆ ವಿಮೆಯಲ್ಲಿ ಮತ್ತೆ ಬೀದರ್ ನಂಬರ್ ವನ್

ಬೀದರ್:ಆ.6: ಅನ್ನದಾತರಿಗೆ ಸಂಕಷ್ಟ ಕಾಲದಲ್ಲಿ “ಆಪ್ತ ರಕ್ಷಕ’ ಆಗಿರುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಮುಂಗಾರು) ಅಡಿ ನೋಂದಣಿಯಲ್ಲಿ ಧರಿನಾಡು ಬೀದರ ಮತ್ತೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.

ಬೆಂಗಳೂರು ನಗರ ಅತಿ ಕಡಿಮೆ ನೋಂದಣಿ ಮೂಲಕ ಕೊನೆಯ ಸ್ಥಾನದಲ್ಲಿದೆ. ಬೆಳೆ ವಿಮೆ ಯೋಜನೆಯಡಿ 2016-17ನೇ ಸಾಲಿನಲ್ಲಿ ದೇಶದಲ್ಲೇ ಅತಿ ಹೆಚ್ಚು ರೈತರ ನೋಂದಣಿ ಮತ್ತು ವಿಮೆ ಹಣ ಪಡೆದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೀದರ, ರಾಜ್ಯದಲ್ಲಿ ಕಳೆದ 7 ವರ್ಷಗಳಿಂದ ನೋಂದಣಿಯಲ್ಲಿ ಸತತವಾಗಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ಪ್ರಸಕ್ತ ಸಾಲಿನಲ್ಲೂ 3.38 ಲಕ್ಷ ರೈತರು ವಿಮೆ ಯೋಜನೆಯಡಿ ತಮ್ಮ ಹೆಸರು ನೋಂದಣಿ ಮಾಡಿದ್ದಾರೆ. ಇದರಿಂದ ಮುಂಗಾರು ಋತುವಿನಲ್ಲಿ ಸುರಿದ ಭಾರಿ ಮಳೆ ಮತ್ತು ಬಸವ ಹುಳು ಬಾಧೆಯಿಂದ ಬೆಳೆ ಕಳೆದುಕೊಂಡಿರುವ ರೈತ ಫಲಾನುಭವಿಗಳ ಆರ್ಥಿಕ ಸಂಕಷ್ಟಕ್ಕೆ ಕೊಂಚ ನೆರವಾಗಲಿದೆ.

ಹಾವೇರಿ ದ್ವಿತೀಯ, ಕಲ್ಬುರ್ಗಿ: ಪಿಎಂಎಫ್ ಬಿವೈನಡಿ ಪ್ರಸಕ್ತ ವರ್ಷಕ್ಕೆ 3.38 ಲಕ್ಷ ರೈತರು ನೋಂದಣಿ ಮೂಲಕ ಬೀದರ ಮೊದಲ ಸ್ಥಾನದಲ್ಲಿದ್ದರೆ, 2.20 ಲಕ್ಷ ಅರ್ಜಿಯೊಂದಿಗೆ ಹಾವೇರಿ ದ್ವಿತೀಯ ಮತ್ತು 1.99 ಲಕ್ಷ ಅರ್ಜಿ ಸಲ್ಲಿಕೆ ಮಾಡಿದ ಕಲುºರ್ಗಿ ತೃತೀಯ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ (160) ಹಾಗೂ ಕೊಡಗು (117) ಕೊನೆ ಕೊನೆಯ ಸ್ಥಾನದಲ್ಲಿವೆ. ಪ್ರಕೃತಿ ವಿಕೋಪಕ್ಕೆ ಬೆಳೆಗಳು ತುತ್ತಾದಲ್ಲಿ ಹವಾಮಾನ ಆಧಾರಿತ ಈ ಬೆಳೆ ವಿಮೆ ಯೋಜನೆ ಸಂಕಷ್ಟದ ಕಾಲದಲ್ಲಿ ರೈತರ ನೆರವಿಗೆ ನಿಲ್ಲುತ್ತಿದೆ. 2020-21ನೇ ಸಾಲಿನಲ್ಲಿ ಬೀದರ ಜಿಲ್ಲೆಯ 1.93 ಲಕ್ಷ ರೈತರು 9.86 ಕೋಟಿ ರೂ. ಪ್ರೀಮಿಯಂ ಕಟ್ಟಿದ್ದು, ಈ ಪೈಕಿ 1.01 ಲಕ್ಷ ರೈತರಿಗೆ 58.69 ಕ್ಲೇಮ್ ಹಣ ಮಂಜೂರಾಗಿದೆ. ಇದು ಬೆಳೆ ವಿಮೆಗೆ ಭರಿಸಿದ್ದ ಪ್ರೀಮಿಯಂಗಿಂತ 5 ಪಟ್ಟು ಹೆಚ್ಚು. ಇನ್ನೂ ಕಳೆದ ಆರು ವರ್ಷಗಳಲ್ಲಿ ಜಿಲ್ಲೆಯಲ್ಲಿ ರೈತರು 64.53 ಕೋಟಿ ರೂ.ಗಳಷ್ಟು ವಿಮಾ ಕಂಪನಿಗೆ ಪಾವತಿಸಿದ್ದು, ಸುಮಾರು 376.02 ಕೋಟಿ ರೂ.ಗಳಷ್ಟು ಬೆಳೆ ವಿಮೆ ಮೊತ್ತ ಕೃಷಿಕರ ಸೇರಿದೆ.

ಬೀದರನಲ್ಲಿ ಹೆಚ್ಚು ನೋಂದಣಿ ಏಕೆ?

ಬೆಳೆ ವಿಮೆ ನೋಂದಣಿ ಅಷ್ಟೇ ಅಲ್ಲ ವಿಮೆ ಹಣ ಪಡೆಯುವಲ್ಲಿ ಬೀದರ ಮುಂಚೂಣಿಯಲ್ಲಿ ಇರುವುದು ಮತ್ತು ಈ ಬಗ್ಗೆ ಮನ್‍ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಉಲ್ಲೇಖೀಸಿರುವುದು, ಜತೆಗೆ ಬೆಳೆ ವಿಮೆಯಲ್ಲಿ ಜಿಲ್ಲೆಯ ಸಾಧನೆ ಕುರಿತು ಕೃಷಿ ಸಚಿವಾಲಯದಿಂದ ಸಾಕ್ಷ್ಯಚಿತ್ರ ನಿರ್ಮಾಣ ಇಲ್ಲಿನ ರೈತರಿಗೆ ಯೋಜನೆ ಬಗ್ಗೆ ಹೆಚ್ಚು ಪ್ರೇರೇಪಿಸುತ್ತಿದೆ. ಕೃಷಿ ಇಲಾಖೆ ಜತೆಗೆ ಡಿಸಿಸಿ ಬ್ಯಾಂಕ್‍ನ ಪರಿಶ್ರಮ ಹೆಚ್ಚಿನ ರೈತರು ಯೋಜನೆಯಡಿ ಸೇರಿಸಲು ಸಾಧ್ಯವಾಗುತ್ತಿದೆ. ಮುಖ್ಯವಾಗಿ ಸಿಎಸ್‍ಸಿ ಕೇಂದ್ರಗಳು ಹೆಸರು ನೋಂದಣಿ ಕಾರ್ಯಕ್ಕೆ ಕೈಜೋಡಿಸಿರುವುದರಿಂದ ಮತ್ತೂಮ್ಮೆ ಬೀದರ ಪ್ರಥಮ ಸ್ಥಾನ ಪಡೆದಿದೆ.

2016-17ರಲ್ಲಿ 1.74 ಲಕ್ಷ, 2017-18ರಲ್ಲಿ 1.80 ಲಕ್ಷ, 2018-19ರಲ್ಲಿ 1.13 ಲಕ್ಷ, 2019-20ರಲ್ಲಿ 1.60 ಲಕ್ಷ, 2020-21ರಲ್ಲಿ 1.93, 2021-22ರಲ್ಲಿ 2.30 ಲಕ್ಷ ರೈತರು ಪಿಎಂಎಫ್‍ಬಿವೈನಡಿ ಹೆಸರು ನೋಂದಣಿ ಮಾಡಿದ್ದರು. ಈ ವರ್ಷ ಮತ್ತೆ ನೋಂದಣಿಯಲ್ಲಿ ಒಂದು ಲಕ್ಷ ಸಂಖ್ಯೆ ಹೆಚ್ಚಿದೆ.

ಫಸಲ್ ಬಿಮಾ ಯೋಜನೆ ಜಾರಿಯಾದ ನಂತರ ಸತತವಾಗಿ ಬೀದರ ಜಿಲ್ಲೆ ನೋಂದಣಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಈ ವರ್ಷ ಹೆಚ್ಚುವರಿ ರೈತರು ಸೇರಿ 3.33 ಲಕ್ಷ ನೋಂದಣಿ ಆಗಿದೆ. ಪ್ರಕೃತಿ ವಿಕೋಪ ಸಂಭವಿಸಿದಾಗ ಅಧಿಕಾರಿಗಳು ಮತ್ತು ಸಂಬಂಧಿತ ವಿಮಾ ಕಂಪನಿಯವರ ಜತೆ ನಿರಂತರ ಸಂಪರ್ಕ ಸಾಧಿಸಿರುವುದೇ ಯಶಸ್ಸಿಗೆ ಕಾರಣ. ಇದರಲ್ಲಿ ಕೃಷಿ ಮತ್ತು ಯಾಂಕ್ ಅಧಿಕಾರಿಗಳ ಪರಿಶ್ರಮವು ಬಹು ಮುಖ್ಯವಾಗಿದೆ. :ಭಗವಂತ ಖೂಬಾ, ಕೇಂದ್ರ ಸಚಿವರು