ಬೆಳೆ ಪರಿಹಾರ ಹಣ ಸಾಲಕ್ಕೆ ಜಮೆ ಮಾಡುವಂತಿಲ್ಲ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

ಯಾದಗಿರಿ : ಮೇ .16 : 2023-24ನೇ ಸಾಲಿನ ಅವಧಿಯಲ್ಲಿ ಬರಪೀಡಿತವೆಂದು ಬಿಡುಗಡೆಗೊಳಿಸಿದ ರೈತರ ಬ್ಯಾಂಕ್ ಖಾತೆಗೆ ಬರುವ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 ಯಾದಗಿರಿ ಜಿಲ್ಲೆಯ 2023-24 ನೇ ಸಾಲಿನಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅದರಂತೆ ಸರ್ಕಾರದಿಂದ ಬರ ಪರಿಹಾರದ ಮೊತ್ತವನ್ನು ರೈತರಿಗೆ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದ್ದು, ಆದರೆ ಕೆಲ ರೈತರು ಬ್ಯಾಂಕ್ ಅಧಿಕಾರಿಗಳು ಸದರಿ ಪರಿಹಾರದ ಮೊತ್ತವನ್ನು ಸಾಲ ರೂಪದಲ್ಲಿ ಕಡಿತಗೊಳಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪದಡಿ ಸಂದಾಯವಾಗುವ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡುವಂತಿಲ್ಲವೆಂದು ಸ್ಪಷ್ಟವಾದ ಸರ್ಕಾರದ ನಿರ್ದೇಶನವಿರುತ್ತದೆ. ಈ ರೀತಿ ಮಾಡಿದಲ್ಲಿ ತಾವುಗಳು ಸರ್ಕಾರದ ನಿದರ್ಶನ ಉಲ್ಲಂಘಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
 ಆದ್ದರಿಂದ ಯಾದಗಿರಿ ಜಿಲ್ಲೆಯಲ್ಲಿನ ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ನೇರವಾಗಿ ಡಿ.ಬಿ.ಟಿ ಮೂಲಕ ಸಂದಾಯವಾಗುವ ಹಣವನ್ನು ಯಾವುದೇ ಕಾರಣಕ್ಕಾಗಿ ಸಾಲದ ಖಾತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದಲ್ಲ ಎಂದು ಎಲ್ಲಾ ಬ್ಯಾಂಕುಗಳಿಗೆ ತಿಳಿಸತಕ್ಕದ್ದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
 ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ತಪ್ಪು ಮಾಡುವ ಬ್ಯಾಂಕ್‍ಗಳ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
 ಯಾದಗಿರಿ ಜಿಲ್ಲೆಯ ಹುಣಸಗಿಯ ಸಿದ್ದಾಪೂರ ಮತ್ತು ವಜ್ಜಲ್ ಗ್ರಾಮದ ರೈತರ ಬೆಳೆ ಪರಿಹಾರದ ಹಣವು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ಸಾಲಕ್ಕೆ ಕಡಿತ ಮಾಡಿದ  ಪ್ರಕರಣಗಳು ಕಂಡುಬಂದಿದ್ದು, ತಕ್ಷಣವೇ ಈ ಸಮಸ್ಯೆ ಇತ್ಯರ್ಥವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.