ಬೆಳೆ ನಾಶಕ್ಕೆ ಪರಿಹಾರ ನೀಡಲು ಆಗ್ರಹ

ಲಕ್ಷ್ಮೇಶ್ವರ, ಡಿ4: ತಾಲೂಕಿನಲ್ಲಿ ನವೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಗೆ ರೈತರು ಬೆಳೆದ ಬೆಳೆಗಳೆಲ್ಲ ಹಾಳಾಗಿ ಹೋಗಿದ್ದು ಸರ್ಕಾರ ಕೂಡಲೆ ಪರಿಹಾರ ನೀಡಬೇಕು ಎಂದು ಲಕ್ಷ್ಮೇಶ್ವರ ತಾಲೂಕು ಕರವೇ ಸ್ವಾಭಿಮಾನಿ ಬಳಗದ ಅಧ್ಯಕ್ಷ ಸಿ.ಎಫ್.ಗಡ್ಡದೇವರಮಠ ಆಗ್ರಹಿಸಿದರು.
ಶುಕ್ರವಾರ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಅಕಾಲಿಕ ಮಳೆಗೆ ರೈತರು ಬೆಳೆದ ಗೋವಿನಜೋಳ. ಉಳ್ಳಾಗಡ್ಡಿ. ಮೆಣಸಿನಕಾಯಿ. ಶೇಂಗಾ. ಬಿಟಿ ಹತ್ತಿ. ಸೂರ್ಯಕಾಂತಿ ಬೆಳೆಗಳು ನೆಲಕಚ್ಚಿವೆ. ರೈತರು ವರ್ಷಪೂರ್ತಿ ದುಡಿದ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ. ಇದರಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಮುಂದಿನ ಸ್ಥಿತಿ ನೆನೆದು ಚಿಂತಾಕ್ರಾಂತರಾಗಿದ್ದಾರೆ. ಕುಟುಂಬವನ್ನು ನಿರ್ವಹಣೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಜಾನುವಾರುಗಳಿಗೆ ಮೇವನ್ನು ಹಾಕುವುದು ಹೇಗೆ ಎಂಬ ಯೋಚನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ಕೂಡಲೆ ರೈತರು ಬೆಳೆದ ಎಲ್ಲ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಈ ಹಿಂದೆ ಸರ್ಕಾರ ನೀಡುತ್ತಿದ್ದ ಪರಿಹಾರದ ಹಣ ಯಾವುದಕ್ಕೂ ಸಾಲದು. ಅದಕ್ಕಾಗಿ ಸರ್ಕಾರ ಪರಿಹಾರದ ಮೊತ್ತವನ್ನು ಹೆಚ್ಚಿಸ ಬೇಕು ಅಲ್ಲದೆ ಎಲ್ಲ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ರವಿ ಲಿಂಗಶೆಟ್ಟಿ, ಶಿವಣ್ಣ ಗಿಡಿಬಿಡಿ, ಶಶಿಕಲಾ ಬಡಿಗೇರ, ಸಿ.ಆರ್. ಚಾವಡಿ, ಎಸ್. ಡಿ.ಶಿವಬಸಣ್ಣವರ, ಎಂ.ಎಸ್.ಬನ್ನಿಕೊಪ್ಪ, ಸಾವಿತ್ರಿ ಕುರಿ, ಕರಿಯಪ್ಪ ಹೊಸಗೌಡರ, ಪ್ರದೀಪ ಜನಿವಾರದ, ಬೀರಪ್ಪ ಪೂಜಾರ, ದೇವಪ್ಪ ಲಮಾಣಿ ಇದ್ದರು.